ADVERTISEMENT

ಉಪಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿ, ಅ. 21ರಂದು ಮತದಾನ

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಉಪಚುನಾವಣೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 9:09 IST
Last Updated 20 ಸೆಪ್ಟೆಂಬರ್ 2024, 9:09 IST
ಮುಲ್ಲೈ ಮುಗಿಲನ್ ಎಂ.ಪಿ
ಮುಲ್ಲೈ ಮುಗಿಲನ್ ಎಂ.ಪಿ   

ಮಂಗಳೂರು: ‘ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರ’ದಿಂದ ವಿಧಾನ ಪರಿಷತ್ತಿಗೆ ಆಯ್ಕೆ ಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ಗುರುವಾರ ಘೋಷಣೆಯಾಗಿದೆ. ಮಾದರಿ ನೀತಿ ಸಂಹಿತೆಯೂ ಜಾರಿಯಾಗಿದೆ. ಮತದಾನ ಅ.21ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ‘ಈ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ವಿಧಾನ ಸಭೆ, ವಿಧಾನ ಪರಿಷತ್‌ ಹಾಗೂ ಲೋಕಸಭಾ ಸದಸ್ಯರು ಮತದಾನದ ಹಕ್ಕನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿರಲಿವೆ. ಸದ್ಯಕ್ಕೆ ಒಟ್ಟು 6,037 ಮತದಾರರಿದ್ದಾರೆ’ ಎಂದರು.

‘ಮಾದರಿ ನೀತಿ ಸಂಹಿತೆ ಉಪಚುನಾವಣೆಗೂ ಅನ್ವಯ ಆಗಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸ್ಥಳೀಯ ಸಂಸ್ಥೆಗಳ ಮೇಯರ್‌, ಉಪಮೇಯರ್‌, ನಗರಸಭೆ ಅಥವಾ ಪುರಸಭೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ಕಾರಿ ವಾಹನ ಬಳಸುವಂತಿಲ್ಲ. ಸರ್ಕಾರಿ ಅಧಿಕಾರಿಗಳ ಸಭೆ ಅಥವಾ ವಿಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸುವಂತಿಲ್ಲ. ಸಚಿವರು ನಡೆಸುವ ಸಭೆಗಳಿಗೆ ಕ್ಷೇತ್ರದ ಅಧಿಕಾರಿಗಳು ಹಾಜರಾಗುವಂತಿಲ್ಲ. ಸಚಿವರನ್ನು ಕ್ಷೇತ್ರದ ಅಧಿಕಾರಿಗಳು ಭೇಟಿಯಾಗುವಂತಿಲ್ಲ’ ಎಂದು ತಿಳಿಸಿದರು.

ADVERTISEMENT

‘ಸಾರ್ವತ್ರಿಕ ಚುನಾವಣೆಯಲ್ಲಿರುವಂತೆ ಹೆದ್ದಾರಿ ಅಥವಾ ರಸ್ತೆಗಳಲ್ಲಿ ತಪಾಸಣಾ ಠಾಣೆಗಳನ್ನು ಸ್ಥಾಪಿಸುವುದಿಲ್ಲ. ಆದರೆ ಸಂಚಾರ ಸರ್ವೇಕ್ಷಣಾ ತಂಡಗಳು, ವಿಡಿಯೊ ತಂಡಗಳು ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡಲಿವೆ. ಆಯಾ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಯ ಕಚೇರಿಯಲ್ಲೇ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಅಭ್ಯರ್ಥಿಗಳು ಮಂಗಳೂರಿನ ಚುನಾವಣಾಧಿಕಾರಿ (ಜಿಲ್ಲಾಧಿಕಾರಿ) ಕಚೇರಿಯಲ್ಲಿ ಮಾತ್ರ ನಾಮಪತ್ರ ಸಲ್ಲಿಸಬಹುದು. ಈ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಯವರು ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.

ಸುದ್ದಿಗೋಷ್ಠಿಯಲ್ಲಿ ದಕ್ಷಿನ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್‌, ನಗರ ಪೊಲೀಸ್ ಕಮಿಷನರ್‌ ಅನುಪಮ ಅಗರ್ವಾಲ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್‌ ಜಿ., ಪಾಲಿಕೆ ಆಯುಕ್ತ ಆನಂದ ಸಿ.ಎಲ್‌, ಪಾಲಿಕೆ ಉಪಾಯುಕ್ತ (ಕಂದಾಯ) ಗಿರೀಶ ನಂದನ ಭಾಗವಹಿಸಿದ್ದರು.    

ನೀತಿಸಂಹಿತೆ: ಧಾರ್ಮಿಕ ಕಾರ್ಯಕ್ರಮಕ್ಕಿಲ್ಲ ವಿನಾಯಿತಿ

‘ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಎಲ್ಲ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುತ್ತೇವೆ. ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳಿಗೂ ಇದು ಅನ್ವಯವಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಅದಕ್ಕೂ ಚುನಾವಣಾ ಆಯೋಗದ ಅನುಮತಿ ಕಡ್ಡಾಯ. ಯಾವುದೇ ಖಾಸಗಿ ಅಥವಾ ಧಾರ್ಮಿಕ ಕಾರ್ಯಕ್ರಮವನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಾರದು’ ಎಂದು ಚುನಾವಣಾಧಿಕಾರಿ ತಿಳಿಸಿದರು. ‘ನವರಾತ್ರಿ ಹಾಗೂ ದಸರಾ ಕಾರ್ಯಕ್ರಮಗಳ ಸ್ತಬ್ಧಚಿತ್ರಗಳಿಗೆ ಮೆರವಣಿಗೆಗೆ ವಿನಾಯಿತಿ ಇದೆಯೇ‘ ಎಂಬ ಪ್ರಶ್ನೆಗೆ ‘ಅವುಗಳನ್ನೂ ನೀತಿಸಂಹಿತೆಯಡಿಯಷ್ಟೇ ನಡೆಸಬಹುದು‘ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು. –0– ಗ್ರಾಫಿಕ್ಸ್‌ಗೆ... ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಉಪಚುನಾವಣೆ ಸೆ.26:ಉಪ ಚುನಾವಣೆಯ ಅಧಿಸೂಚನೆ ಪ್ರಕಟಣೆ ಅ.3:ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಅ.4:ನಾಮಪತ್ರ ಪರಿಶೀಲನೆ ಅ.7:ನಾಮಪತ್ರ ಹಿಂಪಡೆಯಲು ಕೊನೆಯ ದಿನ ಅ.21:ಮತದಾನ  ಅ.24:ಮತ ಎಣಿಕೆ –0– ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಅಂದಾಜು ವಿವರ ಸ್ಥಳೀಯ ಸಂಸ್ಥೆ;ಸಂಖ್ಯೆ;ಒಟ್ಟು ಸದಸ್ಯರು; ಪ್ರಸ್ತುತ ಸದಸ್ಯರು; ಖಾಲಿ ಇರುವುದು ಗ್ರಾಮ ಪಂಚಾಯಿತಿ;223;3292;3264;28 ಮಹಾನಗರ ಪಾಲಿಕೆ;1;60;60;0 ನಗರ ಸಭೆ;2;62;62;0 ಪುರಸಭೆ;3;74;73;1 ಪಟ್ಟಣ ಪಂಚಾಯಿತಿ;5;81;81;0 ವಿಧಾನಸಭಾ ಸದಸ್ಯರು;–;8;8;0 ಲೋಕಸಭಾ ಸದಸ್ಯರು;–;1;1;0 ವಿಧಾನ ಪರಿಷತ್‌ ಸದಸ್ಯರು;0;2;2;0 –0– ಉಡುಪಿ ಜಿಲ್ಲೆಯ ಮತದಾರರ ಅಂದಾಜು ವಿವರ ಸ್ಥಳೀಯ ಸಂಸ್ಥೆ;ಸಂಖ್ಯೆ;ಒಟ್ಟು ಸದಸ್ಯರು; ಪ್ರಸ್ತುತ ಸದಸ್ಯರು; ಖಾಲಿ ಇರುವುದು ಗ್ರಾಮ ಪಂಚಾಯಿತಿ;153;2365;2361;4 ನಗರ ಸಭೆ;1;35;35;0 ಪುರಸಭೆ;3;69;69;0 ಪಟ್ಟಣ ಪಂಚಾಯಿತಿ;1;16;16;0 ವಿಧಾನಸಭಾ ಸದಸ್ಯರು;–;4;4;0 ಲೋಕಸಭಾ ಸದಸ್ಯರು;–;1;1;0  –0– ಅಂಕಿ ಅಂಶ 234 ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳು 3551 ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳು 158 ಉಡುಪಿ ಜಿಲ್ಲೆಯ ಮತಗಟ್ಟೆಗಳು 2486 ಉಡುಪಿ ಜಿಲ್ಲೆಯ ಮತದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.