ADVERTISEMENT

ವಿಧಾನ ಪರಿಷತ್‌ ಉಪಚುನಾವಣೆ: ಭರವಸೆಯಲ್ಲಿ ಬಿಜೆಪಿ; ಕಾಂಗ್ರೆಸ್‌ಗೆ ನಿರೀಕ್ಷೆ

ದಕ್ಷಿಣ ಕನ್ನಡ–ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಉಪಚುನಾವಣೆ: ಕಿಶೋರ್‌, ರಾಜು ನೇರ ಹಣಾಹಣಿ

ವಿಕ್ರಂ ಕಾಂತಿಕೆರೆ
Published 18 ಅಕ್ಟೋಬರ್ 2024, 7:27 IST
Last Updated 18 ಅಕ್ಟೋಬರ್ 2024, 7:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಸತತ ಎರಡು ಬಾರಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆದ್ದಿರುವ ಬಿಜೆಪಿಯು  ದಕ್ಷಿಣ ಕನ್ನಡ–ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಉಪಚುನಾವಣೆಯಲ್ಲಿ ಜಯ ಗಳಿಸಿ, ಹ್ಯಾಟ್ರಿಕ್ ಸಾಧಿಸುವ ಭರವಸೆಯಲ್ಲಿದೆ. ಜಾತಿ ಸಮೀಕರಣದಲ್ಲಿ ‘ಸೂಕ್ತ’ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವ ಕಾಂಗ್ರೆಸ್ ಪಾಳಯದಲ್ಲೂ ನಿರೀಕ್ಷೆ ಗರಿಗೆದರಿದೆ.

ದ್ವಿಸದಸ್ಯ ಕ್ಷೇತ್ರವಾದ ಇಲ್ಲಿ 2015ರಲ್ಲಿ ನಡೆದ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿ ‘ಪ್ರಾಶಸ್ತ್ಯ’ದಲ್ಲಿ ಜಯ ಗಳಿಸಿದ್ದು 2021ರಲ್ಲೂ ಮತದಾರರು ಅವರ ಕೈ ಹಿಡಿದಿದ್ದರು. ಕ್ಷೇತ್ರದ ಮತದಾರರಲ್ಲಿ ಬಿಲ್ಲವರ ಪಾಲು ಹೆಚ್ಚು ಇದೆ. ಕಾಂಗ್ರೆಸ್‌ ಬಿಲ್ಲವ ಸಮಾಜದ, ಉಡುಪಿಯ ಸಹಕಾರಿ ಧುರೀಣ ರಾಜು ಪೂಜಾರಿ ಅವರನ್ನು ಕಣಕ್ಕೆ ಇಳಿಸಿದ್ದರೆ ಬಿಜೆಪಿ ಸವಿತಾ ಸಮಾಜದ ಕಿಶೋರ್ ಬಿ.ಆರ್‌. ಅವರಿಗೆ ಟಿಕೆಟ್ ನೀಡಿದೆ.

2015ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಪರಿಷತ್‌ಗೆ ಆಯ್ಕೆಯಾಗಿದ್ದರು. 2022ರಲ್ಲಿ ಬಿಜೆಪಿಯಿಂದ ಶ್ರೀನಿವಾಸ ಪೂಜಾರಿ ಗೆದ್ದಿದ್ದರೆ, ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಗೆಲುವು ಸಾಧಿಸಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ ನೀಡಿದ್ದರಿಂದ, ಅವರ ಸ್ಥಾನ ತೆರವಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್‌ ಸದಸ್ಯರು ಮತ ಹಾಕಲಿದ್ದಾರೆ. ಈ ಬಾರಿ ಮತದಾರರ ಸಂಖ್ಯೆ 6,037 ಆಗಿದೆ. ಈ ಪೈಕಿ ಶೇಕಡ 50ಕ್ಕೂ ಹೆಚ್ಚು ಮಂದಿ ಬಿಜೆಪಿ ಬೆಂಬಲಿಗರು. ಹೀಗಾಗಿ ಸುಲಭ ಜಯ ಸಿಗಲಿದೆ ಎಂಬುದು ಆ ಪಕ್ಷದ ಲೆಕ್ಕಾಚಾರ.

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜೊತೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿರುವ ಬಿಲ್ಲವರ ಮನವೊಲಿಸಿ ಪಕ್ಷಕ್ಕೆ ಮತ ಹಾಕುವಂತೆ ಮಾಡುವ ತಂತ್ರಕ್ಕೆ ಕಾಂಗ್ರೆಸ್‌ ಮೊರೆ ಹೋಗಿದೆ. 

‘ಬಿಲ್ಲವ ಸದಸ್ಯರ ಪೈಕಿ ಅನೇಕರು ಕಾಂಗ್ರೆಸ್ ಕಡೆಗೆ ಒಲವು ತೋರಿದ್ದಾರೆ. ಯಾವ ಪಕ್ಷದ ಬೆಂಬಲವೂ ಇಲ್ಲದೆ ಗೆದ್ದವರ ಪೈಕಿ ಬಹುತೇಕರು ನಮ್ಮ ಪಕ್ಷವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷಿತ ಮತಗಳು ಸಿಗುವ ಭರವಸೆ ಇದೆ’ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದರು. ‘ಸ್ಪರ್ಧೆ ಸ್ವಲ್ಪ ಕಠಿಣವೇ ಇದೆ. ಕೊನೆಯ ವರೆಗೂ ಪ್ರಯತ್ನ ಮುಂದುವರಿಯಲಿದೆ’ ಎಂದು ಕೆಪಿಸಿಸಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.

ಮತ ವಿಭಜನೆ ಆತಂಕ

ಬಿಲ್ಲವರಿಗೇ ಆದ್ಯತೆ ಸಿಕ್ಕಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಉರುಳಿಸಿರುವ ದಾಳ ಬಿಜೆಪಿಯಲ್ಲಿ ಸ್ವಲ್ಪ ಆತಂಕ ಸೃಷ್ಟಿಸಿದೆ. ಕಾಂಗ್ರೆಸ್‌ಗಿಂತ 1600 ಅಧಿಕ ಮತಗಳು ತಮ್ಮ ಬಳಿ ಇವೆ ಎಂದು ಹೇಳಿಕೊಳ್ಳುತ್ತಿದ್ದರೂ ಬಿಲ್ಲವ ಮತಗಳು ವಿಭಜನೆ ಆಗಿ ಕಾಂಗ್ರೆಸ್‌ ತೆಕ್ಕೆಗೆ ಸೇರಬಹುದು ಎಂಬ ಆತಂಕ ಕೆಲವರಲ್ಲಿ ಇದೆ. ‘ಆ ಸಾಧ್ಯತೆಯೂ ಇಲ್ಲದಿಲ್ಲ. ಹಾಗೆ ಆದರೆ ನಮ್ಮ ಗೆಲುವಿನ ಅಂತರ ಕಡಿಮೆಯಾಗಬಹುದಷ್ಟೆ. ಬಿಜೆಪಿ ಅಭ್ಯರ್ಥಿ ಗೆಲ್ಲುವುದಂತೂ ನಿಶ್ಚಿತ’ ಎಂದು ಬಿಜೆಪಿಯ ಕೆಲ ಮುಖಂಡರು ಹೇಳುತ್ತಿದ್ದಾರೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಇಬ್ಬರು ಲೋಕಸಭಾ ಸದಸ್ಯರು ಮತ್ತು ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿಗೆ ಈ ಚುನಾವಣೆಯ ಗೆಲುವು ಪ್ರತಿಷ್ಠೆಯೂ ಹೌದು.

ಎಸ್‌ಡಿಪಿಐನ ಅನ್ವರ್ ಸಾದತ್ ಎಸ್. ಮತ್ತು ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ ಕೂಡ ಕಣದಲ್ಲಿದ್ದಾರೆ. 

35 ವರ್ಷಗಳಿಂದ ನಿಷ್ಠೆಯಿಂದ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆ ಎಂದು ನನಗೆ ಅನ್ನಿಸಿಲ್ಲ. ಎಲ್ಲ ಜಾತಿಯ ಮತದಾರರೂ ನನಗೆ ಬೆಂಬಲ ಸೂಚಿಸಿದ್ದಾರೆ.
–ರಾಜು ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.