ADVERTISEMENT

ಮೂಲ್ಕಿ | ಮೊಬೈಲ್ ಟವರ್‌ ಬ್ಯಾಟರಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:25 IST
Last Updated 8 ಜುಲೈ 2024, 7:25 IST
ಇಟ್ಟಿ ಪಣಿಕ್ಕರ್‌
ಇಟ್ಟಿ ಪಣಿಕ್ಕರ್‌   

ಮೂಲ್ಕಿ: ಮೊಬೈಲ್‌ ಟವರ್‌ಗಳ ಬ್ಯಾಟರಿ ಕಳವು ಪ್ರಕರಣದ ಆರೋಪಿಯನ್ನು ಮೂಲ್ಕಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  39 ಬ್ಯಾಟರಿ ಮತ್ತು ಮೂರು ಕಬ್ಬಿಣದ ಗೇಟ್‌ಗಳು ಹಾಗೂ ಈ ಸ್ವತ್ತುಗಳನ್ನು ಸಾಗಾಟಕ್ಕೆ ಬಳಸಿದ್ದ ಪಿಕಪ್ ಗೂಡ್ಸ್ ಟೆಂಪೊವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯ ಪನಾಂಗಾಡು ಅಂಚೆಯ ಇಟ್ಟಿ ಪನಿಕರ್ (58 ವರ್ಷ) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೂಲ್ಕಿ ರೈಲು ನಿಲ್ದಾಣದ ಬಳಿಯ ಕಿಲ್ಪಾಡಿ ಗ್ರಾಮದ ಕೆ.ಎಸ್.ರಾವ್ ನಗರದಲ್ಲಿ ಹಾಗೂ ತಾಳಿಪಾಡಿ ಗ್ರಾಮದ ಎಸ್.ಕೋಡಿಯ ಏರ್‌ಟೆಲ್ ಕಂಪನಿಯ ಮೊಬೈಲ್ ಟವರ್‌ಗಳ ಬ್ಯಾಟರಿಗಳು ಕಳವಾದ ಬಗ್ಗೆ ಮತ್ತು ಐಕಳ ಗ್ರಾಮದ ನೆಲ್ಲಿಗುಡ್ಡೆ ಕ್ರಾಸ್‌ನಲ್ಲಿ ಜಾಗವೊಂದಕ್ಕೆ ಅಳವಡಿಸಿದ್ದ 5 ಕಬ್ಬಿಣದ ಗೇಟ್‌ಗಳು ಕಳವಾದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.’

ADVERTISEMENT

‘ಇನ್‌ಸ್ಪೆಕ್ಟರ್‌ ವಿದ್ಯಾಧರ ಡಿ ಬಾಯ್ಕೆರಿಕರ್ ಮತ್ತು ಪಿ.ಎಸ್.ಐ. ವಿನಾಯಕ ಭಾವಿಕಟ್ಟಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿಯಿಂದ ಸ್ವಾಧೀನಪಡಿಸಿಕೊಂಡ 39 ಬ್ಯಾಟರಿಗಳ ಅಂದಾಜು ಮೌಲ್ಯ ₹ 2.56 ಲಕ್ಷ, ಮೂರು ಕಬ್ಬಿಣದ ಗೇಟ್‌ಗಳ ಅಂದಾಜು ಮೌಲ್ಯ ₹ 52 ಸಾವಿರ, ಪಿಕ್ ಅಪ್ ಗೂಡ್ಸ್ ಟೆಂಪೊ ಮೌಲ್ಯ ₹ 5 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟು ₹ 8.08 ಲಕ್ಷ ಮೌಲ್ಯದ ಸ್ವತ್ತುಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ತೆ ಕಾರ್ಯದಲ್ಲಿ ಎ.ಎಸ್.ಐ. ಸಂಜೀವ ಎ.ಪಿ, ಹೆಡ್ ಕಾನ್‌ಸ್ಟೆಬಲ್ ಕಿಶೋರ್ ಕೋಟ್ಯಾನ್, ಮಹೇಶ್, ಶಶಿಧರ, ಚಂದ್ರಶೇಖರ್, ವಿಶ್ವನಾಥ, ವಿರೇಶ್ ಕಾನ್‌ಸ್ಟೆಬಲ್‌ಗಳಾದ ಅರುಣ್ ಕುಮಾರ್, ಸುನೀಲ್ ಮತ್ತು  ಚಿತ್ರಾ ಸಹಕರಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.