ADVERTISEMENT

ಇಳೆಗೆ ಧಗೆ: ಕೃಷಿಗೆ ಬೇಗೆ

ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ರೈತರು, ಕೃಷಿ ಇಲಾಖೆಯಲ್ಲಿ ಬೀಜ, ರಸಗೊಬ್ಬರ ಸಂಗ್ರಹ

ಸಂಧ್ಯಾ ಹೆಗಡೆ
Published 6 ಮೇ 2024, 5:05 IST
Last Updated 6 ಮೇ 2024, 5:05 IST
ಅಡಿಕೆ ತೋಟ (ಸಾಂದರ್ಭಿಕ ಚಿತ್ರ)
ಅಡಿಕೆ ತೋಟ (ಸಾಂದರ್ಭಿಕ ಚಿತ್ರ)   

ಮಂಗಳೂರು: ಬಿರು ಬಿಸಿಲಿಗೆ ಜಲಮೂಲಗಳು ಬತ್ತುತ್ತಿವೆ, ನದಿ, ಕೆರೆಗಳ ಒಡಲಲ್ಲಿ ಭೂಮಿ ಬಾಯ್ದೆರೆದಿದೆ. ಎಲ್ಲೆಲ್ಲೂ ಜನರು ಮಳೆಗಾಗಿ ನಿರೀಕ್ಷೆಯ ಕಂಗಳಲ್ಲಿ ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ. ರೈತರು ಮುಂಗಾರು ಪೂರ್ವ ಮಳೆ ಬಂದರೆ ಭೂಮಿ ಹದಗೊಳಿಸಲು ಉತ್ಸುಕರಾಗಿದ್ದಾರೆ.

ಈ ಬಾರಿ ಏಪ್ರಿಲ್‌ನಲ್ಲಿ ಒಂದೆರಡು ದಿನ ಸಾಧಾರಣ ಮಳೆಯಾಗಿದ್ದು, ಬಿಟ್ಟರೆ ಮತ್ತೆ ಮಳೆಯ ಸುಳಿವಿಲ್ಲ. ಮೇ ತಿಂಗಳ ಮಧ್ಯಭಾಗದಲ್ಲಿ ಮಳೆಯಾಗಬಹುದೆಂಬ ಹವಾಮಾನ ಇಲಾಖೆಯ ಭರವಸೆಯಲ್ಲಿ ಕೃಷಿಕರು ಮುಂಗಾರು ಕೃಷಿ ಸಿದ್ಧತೆ ಪ್ರಾರಂಭಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ಭತ್ತ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಸಸಿಗಳು ಮೇಲೆದ್ದಿವೆ. ವಾಣಿಜ್ಯ ಬೆಳೆ ಅಡಿಕೆ ಬಗೆಗಿನ ಆಕರ್ಷಣೆಯಿಂದಾಗಿ ಕೃಷಿ ಭೂಮಿಯನ್ನು ಅಡಿಕೆ ತೋಟಗಳಾಗಿ ಪರಿವರ್ತಿಸಲಾಗುತ್ತಿದೆ. ಇನ್ನೂ ಕೆಲವೆಡೆ ಕೃಷಿ ಕಾರ್ಮಿಕರ ಕೊರತೆಯಿಂದ ಭೂಮಿಯನ್ನು ಹಡಿಲು ಬಿಡಲಾಗಿದೆ. ಕೋವಿಡ್–19 ಸಾಂಕ್ರಾಮಿಕದ ವೇಳೆ ಊರಿಗೆ ಮರಳಿದ್ದ ಹಲವು ಉತ್ಸಾಹಿಗಳು ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು, ಸಾಂಪ್ರದಾಯಿಕ ಕೃಷಿಕರೂ ಅತ್ತ ತಿರುಗಿ ನೋಡುವಂತೆ ಮಾಡಿದ್ದರು. ಆದರೆ, ಜನಜೀವನ ಸಹಜ ಸ್ಥಿತಿಗೆ ಮರಳಿದ ಮೇಲೆ ಮತ್ತೆ ಅಲ್ಲಲ್ಲಿ ಹಡಿಲು ಬಿಡುವ ಭೂಮಿ ಹೆಚ್ಚು ಕಾಣುತ್ತಿದೆ.

ADVERTISEMENT

9,390 ಹೆಕ್ಟೇರ್ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಕೃಷಿ ಬೆಳೆಯಾಗಿ ಭತ್ತವನ್ನು ಬೆಳೆಯಾಗುತ್ತಿದೆ. ಕೃಷಿ ಇಲಾಖೆಯು ಈ ವರ್ಷ 9,390 ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಿದೆ. ಮೂಲ್ಕಿ, ಮೂಡುಬಿದಿರೆ, ಸುರತ್ಕಲ್, ಗುರುಪುರ, ಬಂಟ್ವಾಳ, ಪಾಣೆಮಂಗಳೂರು ಕೃಷಿ ಹೋಬಳಿಗಳಲ್ಲಿ ಹೆಚ್ಚು ಭತ್ತ ಬೆಳೆಯಲಾಗುತ್ತದೆ. ಎಂಒ4 ತಳಿಗೆ ಹೆಚ್ಚು ಬೇಡಿಕೆ ಇದ್ದು, ಈ ತಳಿಯ 500 ಕ್ವಿಂಟಲ್, ಜಯ 60 ಕ್ವಿಂಟಲ್, ಜ್ಯೋತಿ 47 ಕ್ವಿಂಟಲ್ ಸೇರಿ ಒಟ್ಟು 607.7 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಸಲ್ಲಿಸಲಾಗಿದೆ. ಬೀಜ ನಿಗಮದ ಮೂಲಕ ಭತ್ತ ಬಿತ್ತನೆ ಬೀಜ ಪೂರೈಕೆಯಾಗಲಿದೆ. ಮೇ 15ರ ಒಳಗಾಗಿ ಜಿಲ್ಲೆಯ ಎಲ್ಲ 15 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ ಇರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್‌. ತಿಳಿಸಿದರು.

ಇಲಾಖೆಯಲ್ಲಿ ರಸಗೊಬ್ಬರ ದಾಸ್ತಾನು ಇದೆ. ಏಪ್ರಿಲ್ ಕೊನೆಯವರೆಗೆ 3,364 ಟನ್ ರಸಗೊಬ್ಬರ ಖರ್ಚಾಗಿದ್ದು, 13,934 ಟನ್ ದಾಸ್ತಾನು ಇದೆ. ಮುಂಗಾರಿನಲ್ಲಿ ಒಟ್ಟು ಬೇಡಿಕೆ 22,565 ಟನ್ ಆಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಬೀಜ ಲಭ್ಯ ಇಲ್ಲ: ‘ಮೇ ತಿಂಗಳು ಸೆಣಬು, ಡಾಯೆಂಚ ಮೊದಲಾದ ಹಸಿರೆಲೆ ಗೊಬ್ಬರ ಬೀಜ ಹಾಕುವ ಸಮಯ. ಈ ಬಾರಿ ಕೃಷಿ ಇಲಾಖೆಯಲ್ಲಿ ಬೀಜವೂ ಲಭ್ಯ ಇಲ್ಲ. ಜೊತೆಗೆ, ಅತಿಯಾದ ಸೆಕೆ ಇರುವುದರಿಂದ ಬೀಜ ಮೊಳಕೆಯೊಡೆಯುವುದು ಅನುಮಾನ ಎಂಬ ಕಾರಣಕ್ಕೆ ರೈತರು ಬೀಜ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಇವು ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ’ ಎನ್ನುತ್ತಾರೆ ಗುರುಪುರ ಹೋಬಳಿಯ ಭತ್ತ ಬೆಳೆಗಾರ ರೋಷನ್.

ಗಂಧಸಾಲೆ, ಮಸೂರಿ, ಅತಿಕರಾಯ ಮೊದಲಾದ ಸಾಂಪ್ರದಾಯಿಕ ಭತ್ತದ ತಳಿಗಳು ದೀರ್ಘಾವಧಿಯವು. ಇವುಗಳ ಕೊಯ್ಲಿಗೆ 160ರಿಂದ 170 ದಿನಗಳು ಬೇಕಾಗುತ್ತವೆ. ಹೀಗಾಗಿ, ಮೇ ತಿಂಗಳ ಮಧ್ಯ ಭಾಗದಿಂದಲೇ ಗದ್ದೆ ಹದಗೊಳಿಸುವುದು, ನೇಜಿಗೆ ಸಿದ್ಧತೆಗಳು ಆರಂಭವಾಗುತ್ತವೆ. ಹೈಬ್ರೀಡ್ ತಳಿಗಳಾದ ಜಯ, ಜ್ಯೋತಿ, ಭದ್ರಾ ಇವುಗಳನ್ನು ಬೆಳೆಯಲು ಮೇ ಕೊನೆ ಅಥವಾ ಜೂನ್‌ನಲ್ಲಿ ಸಿದ್ಧತೆ ಪ್ರಾರಂಭಿಸಿದರೆ ಸಾಕು. ಮೇ ಎರಡನೇ ವಾರದಲ್ಲೂ ಮಳೆಯಾಗದಿದ್ದರೆ, ಸಾಂಪ್ರದಾಯಿಕ ಭತ್ತ ಬೆಳೆಯುವವರಿಗೆ ಸಮಸ್ಯೆಯಾಗಬಹುದು’ ಎಂದು ಅವರು ತಿಳಿಸಿದರು.

‘ಯಾಂತ್ರೀಕೃತ ಭತ್ತ ಬೇಸಾಯ ಲಾಭದಾಯಕ ಅಲ್ಲದಿದ್ದರೂ ವೆಚ್ಚ ಸರಿದೂಗುತ್ತದೆ. ದೊಡ್ಡ ಹುಲ್ಲು ಬೆಳೆದರೆ, ಹುಲ್ಲಿನಿಂದ ಲಾಭಗಳಿಸಬಹುದು. ನೇಜಿಗೆ ಕೃಷಿ ಕಾರ್ಮಿಕರು ಲಭ್ಯವಾದರೂ, ಕೊಯ್ಲಿಗೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಾರೆ. ಪಾರಂಪರಿಕ ಕೃಷಿ ಕೈಬಿಡಬಾರದೆಂಬ ಭಾವನೆಯಿಂದ ಭತ್ತ ಬೆಳೆಯುವುದನ್ನು ನಿಲ್ಲಿಸಿಲ್ಲ’ ಎಂದು ಅವರು ಅನುಭವ ಹಂಚಿಕೊಂಡರು.

ಕೆಂಪೇಗೌಡ ಎಚ್

ರಸಗೊಬ್ಬರ ಬೇಡಿಕೆ ಗೊಬ್ಬರ ಮಾದರಿ;ಮುಂಗಾರು ಬೇಡಿಕೆ (ಟನ್‌ಗಳಲ್ಲಿ) ಯೂರಿಯಾ;4157 ಡಿಎಪಿ;1099 ಎಂಒಪಿ;3373 ಎನ್‌ಪಿಕೆ;13152 ಎಸ್‌ಎಸ್‌ಪಿ;784 ಒಟ್ಟು;22565

ಮುಂಗಾರು ಭತ್ತ ಬಿತ್ತನೆ ಗುರಿ ತಾಲ್ಲೂಕು;ಬಿತ್ತನೆ ಪ್ರದೇಶ (ಹೆಕ್ಟೇರ್‌ಗಳಲ್ಲಿ) ಮಂಗಳೂರು;1500 ಮೂಡುಬಿದಿರೆ;1650 ಮೂಲ್ಕಿ;1700 ಉಳ್ಳಾಲ;850 ಬಂಟ್ವಾಳ;1510 ಬೆಳ್ತಂಗಡಿ;1600 ಪುತ್ತೂರು;205 ಕಡಬ;165 ಸುಳ್ಯ;210 ಒಟ್ಟು;9390

‘ಮಳೆಯ ನಿರೀಕ್ಷೆ’

‘ಏಪ್ರಿಲ್‌ನಲ್ಲಿ ಮಳೆ ಕಡಿಮೆ ಇದ್ದರೂ ಮೇ ಮಧ್ಯಭಾಗದಲ್ಲಿ ಬರುವ ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗೆ ಪೂರಕವಾಗುತ್ತದೆ. ಮುಂಗಾರು ಬಿತ್ತನೆಗೆ ಯಾವುದೇ ಸಮಸ್ಯೆ ಆಗದೆಂದು ಅಂದಾಜಿಸಲಾಗಿದೆ. ಎಂದಿನಂತೆ ಜೂನ್‌ ತಿಂಗಳಿನಿಂದ ಭತ್ತ ನಾಟಿ ಕಾರ್ಯ ಆರಂಭವಾಗಬಹುದು’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ.

ಮಳೆ ವಿವರ ತಿಂಗಳು;ವಾಡಿಕೆ ಮಳೆ;ಬಿದ್ದ ಮಳೆ 2022;2023;2024 (ಮಿ.ಮೀ.ಗಳಲ್ಲಿ) ಜನವರಿ;3.6;0.2;01;59.9 ಫೆಬ್ರುವರಿ;2.3;1.4;0;0 ಮಾರ್ಚ್;15.3;43.4;0.9;1 ಏಪ್ರಿಲ್;54.6;97.8;20;32 ಮೇ;166.7;353;97.9;2 (ಈವರೆಗೆ) (ಆಧಾರ: ಕೃಷಿ ಇಲಾಖೆ)

‘ಬಸಿಗಾಲುವೆ ವ್ಯವಸ್ಥಿತಗೊಳಿಸಿ’

ಗೇರು ಹೊರತುಪಡಿಸಿ ಸಾಮಾನ್ಯವಾಗಿ ಎಲ್ಲ ತೋಟಗಾರಿಕಾ ಬೆಳೆಗಳಿಗೆ ಕೃಷಿಕರು ನೀರಾವರಿ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ ಈಗ ಅಂತರ್ಜಲ ಮಟ್ಟ ಕುಸಿತ ಆಗಿರುವುದರಿಂದ ಬೆಳೆ ಉಳಿಸಿಕೊಳ್ಳಲು ಮುಂಗಾರು ಆರಂಭವಾಗುವ ತನಕ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ನೀರಿಲ್ಲದ ತೋಟಗಳಲ್ಲಿ ಮಳೆ ಬಿದ್ದ ಕೂಡಲೇ ಒಮ್ಮೆ ಎಳೆಕಾಯಿ ಉದುರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಡಿ. ಮಳೆ ಕೊರತೆಯಾದರೆ ಶೇ 10–15ರಷ್ಟು ಇಳುವರಿ ಕಡಿಮೆಯಾಗಬಹುದು. ನಿಗದಿತ ಅವಧಿಯಲ್ಲಿ ಮುಂಗಾರು ಆರಂಭವಾದರೆ ಅಡಿಕೆ ತೋಟಗಳಿಗೆ ಗೊಬ್ಬರ ನೀಡುವ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಬಹುದು. ರೈತರು ಬಸಿಗಾಲುವೆ ವ್ಯವಸ್ಥಿತಗೊಳಿಸುವುದನ್ನು ಮರೆಯಬಾರದು ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.