ADVERTISEMENT

ಮಂಗಳೂರು: ಕೇರಳ ಯುವ ಜೋಡಿ ತಡೆದು ಮತೀಯ ಗೂಂಡಾಗಿರಿ– ಮೂವರ ಬಂಧನ

ಹಂಪನಕಟ್ಟೆ ಮತೀಯ ಗೂಂಡಾಗಿರಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 13:57 IST
Last Updated 23 ಡಿಸೆಂಬರ್ 2023, 13:57 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಮಂಗಳೂರು: ಕೇರಳ ಯುವ ಜೋಡಿಯನ್ನು ತಡೆದು ಅವರ ಧರ್ಮದ ಬಗ್ಗೆ ವಿಚಾರಿಸಿ ಮತೀಯ ಗೂಂಡಾಗಿರಿ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಂಪನಕಟ್ಟೆಯ ಮಳಿಗೆಯೊಂದರ ಬಳಿ ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ನಿಂತಿದ್ದ ಕೇರಳದ ಯುವಕ ಹಾಗೂ ಆತನ ಜೊತೆಗಿದ್ದ ಯುವತಿಯನ್ನು ಯುವಕರ ಗುಂಪೊಂದು ವಿಚಾರಿಸಿತ್ತು. ಅವರ ಧರ್ಮದ ಬಗ್ಗೆ ಪ್ರಶ್ನಿಸಿ, ಗುರುತಿನ ಚೀಟಿ ತೋರಿಸುವಂತೆ ಗುಂಪಿನಲ್ಲಿದ್ದ ಯುವಕನೊಬ್ಬ ಏರುಧ್ವನಿಯಲ್ಲಿ ಸೂಚಿಸಿದ್ದ. ಅವರ ಸೊತ್ತುಗಳನ್ನು ಪರೀಶೀಲಿಸಿದ್ದ.

‘ಆ ಯುವಕ ಮತ್ತು ಯುವತಿ ಆಟೊ ಹತ್ತಿಕೊಂಡು ರೈಲು ನಿಲ್ದಾಣದತ್ತ ತೆರಳಿದರು. ಆಗಲೂ ಯುವಕರ ಗುಂಪು ಆಟೊವನ್ನು ತಡೆದು ದಾಂದಲೆ ನಡೆಸಿತ್ತು. ಅಲ್ಲದೇ ಯುವಕ– ಯುವತಿಯನ್ನು ಆಟೊಗೆ ಹತ್ತಿಸಿಕೊಂಡ ಚಾಲಕನನ್ನೂ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ ಯುವಕ– ಯುವತಿಯನ್ನು ಆಟೊದಲ್ಲಿ ಕಳುಹಿಸಿಕೊಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಈ ಘಟನೆ ಕುರಿತು ಆಟೊ ಚಾಲಕ ದೂರು ನೀಡಿದ್ದು, ಇದರ ಆಧಾರದಲ್ಲಿ ಬಂಟ್ವಾಳ ನಿವಾಸಿ ಸಂದೇಶ (28), ಆತನ ಜೊತೆಗಿದ್ದ ಪ್ರಶಾಂತ್‌ (31) ಹಾಗೂ ರೋನಿತ್‌ (31) ಅವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಶಾಂತಿಭಂಗಕ್ಕೆ ಉದ್ದೇಶಪೂರ್ವಕ ಪ್ರಚೋದನೆ ಮತ್ತು ಅಕ್ರಮವಾಗಿ ನಿರ್ಬಂಧ ವಿಧಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.