ADVERTISEMENT

ಮತೀಯ ಗೂಂಡಾಗಿರಿ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 16:14 IST
Last Updated 19 ಜನವರಿ 2024, 16:14 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಮಂಗಳೂರು: ನಗರದ ಕದ್ರಿ ಉದ್ಯಾನಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿ– ವಿದ್ಯಾರ್ಥಿಯ ಮೇಲೆ ಮತೀಯ ಗೂಂಡಾಗಿರಿ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಕದ್ರಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ನಿತಿನ್ (18), ಹರ್ಷ (18) ಬಂಧಿತ ಆರೋಪಿಗಳು. ಇನ್ನೊಬ್ಬ ಆರೋ‍‍ಪಿಯಾಗಿರುವ 17 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ದೇರಳಕಟ್ಟೆಯಲ್ಲಿ ಬಿ.ಎಸ್‌ಸಿ ನರ್ಸಿಂಗ್ ಓದುತ್ತಿರುವ ಹಿಂದೂ ಯುವತಿ, ಶುಕ್ರವಾರ ತನ್ನ ಸ್ನೇಹಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯ ಜೊತೆ ಕದ್ರಿ ಉದ್ಯಾನಕ್ಕೆ ಬಂದಿದ್ದಾರೆ. ಈ ವೇಳೆ ಅವರಿಬ್ಬರನ್ನು ಹಿಂಬಾಲಿಸಿಕೊಂಡು ಬಂದ ಮೂವರು, ಉದ್ಯಾನಕ್ಕೆ ಭೇಟಿ ನೀಡಿರುವ ಉದ್ದೇಶದ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಅವರಿಬ್ಬರ ಫೋಟೊ ತೆಗೆದು, ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವೇಳೆ ಅಲ್ಲಿ ಜನರು ಸೇರಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. 

ADVERTISEMENT

ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 341 (ನಿರ್ಬಂಧಿಸುವುದು), 504 (ಶಾಂತಿ ಭಂಗಕ್ಕೆ ಪ್ರಚೋದನೆ), 509, 354(ಬಿ), 354(ಡಿ) ಮಹಿಳೆಯನ್ನು ಹಿಂಬಾಲಿಸಿದ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.