ADVERTISEMENT

ದ.ಕ. ಅಭಿವೃದ್ಧಿ: ಕೇಂದ್ರ ಸಚಿವರ ಜೊತೆ ಕ್ಯಾ.ಚೌಟ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:22 IST
Last Updated 5 ಜುಲೈ 2024, 4:22 IST
<div class="paragraphs"><p>ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿ ಜೊತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಮಾಲೋಚನೆ ನಡೆಸಿದರು</p></div>

ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿ ಜೊತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಮಾಲೋಚನೆ ನಡೆಸಿದರು

   

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ‌, ಕೇಂದ್ರ ಬಂದರು, ಸಮುದ್ರಯಾನ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್‌, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮಾಲೋಚನೆ ನಡೆಸಿದರು. 

ಸಚಿವ ನಿತಿನ್ ಗಡ್ಕರಿ‌ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾದ ಕ್ಯಾ.ಚೌಟ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಚರ್ಚಿಸಿದರು. ಶಿರಾಡಿ ಘಾಟಿಯ ಮೂಲಕ ಹಾದುಹೋಗುವ ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಪ್ರಯಾಣದ ಅವಧಿಯನ್ನು ಕಡಿಮೆ ಮತ್ತು ಸುಗಮಗೊಳಿಸುವ ಯೋಜನೆಗಳ ಕುರಿತು ಅಧ್ಯಯನ ನಡೆಸುವಂತೆ ಕೋರಿದರು.

ADVERTISEMENT

ನವಮಂಗಳೂರು ಬಂದರು ಪ್ರಾಧಿಕಾರದ ಮೂಲಸೌಕರ್ಯ ಅಭಿವೃದ್ಧಿ ಸಾಧ್ಯತೆಗಳು, ಸಾಗರ್‌ಮಾಲಾ ಯೋಜನೆ ಅಡಿಯಲ್ಲಿ ಲಕ್ಷದ್ವೀಪಕ್ಕೆ ತೆರಳುವ ಹಡಗುಗಳಿಗೆ ಮೀಸಲಾದ ಜೆಟ್ಟಿ ಮತ್ತು ಕ್ರೂಸ್ ಟರ್ಮಿನಲ್ ನಿರ್ಮಾಣದ ಕುರಿತು ಸಚಿವ ಸರ್ಬಾನಂದ ಸೋನೋವಾಲ್‌ ಜೊತೆ ಚರ್ಚೆ ನಡೆಸಿದರು.

ಸಚಿವ  ಹರ್ದೀಪ್ ಸಿಂಗ್ ಪುರಿ ಅವರನ್ನು ಸಚಿವಾಲಯದಲ್ಲಿ ಭೇಟಿಯಾದ ಕ್ಯಾ.ಚೌಟ, ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಪೆಟ್ರೋಲಿಯಂ ಇಲಾಖೆಗೆ ಸಂಬಂಧಿಸಿದ  ಅಭಿವೃದ್ಧಿ ಯೋಜನೆಗಳಿಗೆ ಸ್ಪಂದಿಸುವಂತೆ ಕೋರಿದರು. ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿಸಬೇಕು. ಅದರ  ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ  ಜಿಲ್ಲೆಯ ಅಭಿವೃದ್ಧಿಗೆ  ಸಹಕಾರವನ್ನು ನೀಡುವಂತೆ ಮನವಿ ಮಾಡಿದರು ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬುಧವಾರ ಭೇಟಿ ಮಾಡಿದ್ದ ಕ್ಯಾ.ಚೌಟ, ಕರಾವಳಿಯ ‌ರೈಲ್ವೆ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.