ಮಂಗಳೂರು: ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಭಾನುವಾರ ಮೋಟಾರ್ ಬೈಕ್‌ಗಳ ಘರ್ಜನೆ ಮಾರ್ದನಿಸಿತು. ಧೂಳೆಬ್ಬಿಸುತ್ತಾ ಶರವೇಗದಲ್ಲಿ ಸಾಗಿದ ಸವಾರರು ನಭಕ್ಕೆ ಬೈಕನ್ನು ಹಾರಿಸಿ ಪ್ರೇಕ್ಷಕರ ಎದೆ ಝಲ್ ಎನ್ನುವಂತಹ ಪ್ರದರ್ಶನ ನೀಡಿದರು.
ಗಾಡ್ ಸ್ಪೀಡ್ ರೇಸಿಂಗ್ ಸಹಕಾರದಲ್ಲಿ ಇಲ್ಲಿನ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಎಂಆರ್‌ಎಫ್ ಮೊಗ್ರಿಪ್ ಎಫ್‌ಎಂಎಸ್‌ಸಿಐ ಸೂಪರ್‌ಕ್ರಾಸ್ ನ್ಯಾಷನಲ್ ಸೂಪರ್ ಚಾಂಪಿಯನ್‌ಷಿಪ್‌ನ ಐದನೇ ಸುತ್ತಿನ ಬೈಕ್ ರೇಸ್ ಸ್ಪರ್ಧೆಯು ಪ್ರೇಕ್ಷಕರಿಗೆ ರೋಮಾಂಚಕ ಅನುಭವಗಳ ಬುತ್ತಿಯನ್ನು ಕಟ್ಟಿಕೊಟ್ಟಿತು.
ಹಾವಿನಂತಹ ಅಂಕು ಡೊಂಕಾದ ಮಣ್ಣಿನ ಟ್ರ್ಯಾಕ್‌ನಲ್ಲಿ ಬೈಕ್ ಸವಾರರು ತೋರಿದ ಕಸರತ್ತುಗಳಿಗೆ ಬೈಕ್ ರೇಸ್ ಪ್ರಿಯರು ಮಾರುಹೋದರು. ಉಬ್ಬು–ತಗ್ಗುಗಳು ಹಾಗೂ ಕಡಿದಾದ ತಿರುವುಗಳಿಂದ ಕೂಡಿದ ಟ್ರ್ಯಾಕ್‌ನಲ್ಲಿ ಜೀವವನ್ನೇ ಪಣಕ್ಕಿಟ್ಟು ಬೈಕ್ ಓಡಿಸಿದ ಸವಾರರು ಸಾಗುತ್ತಿದ್ದರೆ, ಪ್ರೇಕ್ಷಕರು ಕ್ಷಣ ಕ್ಷಣವೂ ಉಸಿರು ಬಿಗಿಹಿಡಿದು ಈ ಸಾಹಸ ದೃಶ್ಯಗಳನ್ನು ಕಣ್ತುಂಬಿಕೊಂಡರು.
33ನೇ ಸಂಖ್ಯೆಯ ಕೆಟಿಎಂ 250 ಬೈಕ್ ಈ ಕೂಟದಲ್ಲಿ ಪ್ರೇಕ್ಷಕರ ಕಣ್ಮಣಿಯಾಗಿತ್ತು. ಇದನ್ನು ಓಡಿಸಿದ ಮಹಾರಾಷ್ಟ್ರದ ಸತಾರದ ಖಾಸಗಿ ಸ್ಪರ್ಧಿ ಶ್ಲೋಕ್ ಘೋರ್ಪಡೆ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಕೂಟದ ‘ಅತ್ಯುತ್ತಮ ಸವಾರ’ ಪ್ರಶಸ್ತಿಗೆ ಭಾಜನರಾದರು. ಕ್ಲಾಸ್–1 ಸೂಪರ್‌ಕ್ರಾಸ್ 1 (ಎ ಮತ್ತು ಬಿ) ‘ಎ’ ಗುಂಪಿನ (500 ಸಿಸಿ ವರೆಗಿನ ಮೋಟೊ 2 ) ಸ್ಪರ್ಧೆ, ಕ್ಲಾಸ್ 2 ಸೂಪರ್‌ಕ್ರಾಸ್ 2 (ಎ ಮತ್ತು ಬಿ) ‘ಎ’ ಗುಂಪಿನ (500 ಸಿಸಿ ವರೆಗಿನ ಮೋಟೊ2) ಸ್ಪರ್ಧೆ ಹಾಗೂ ಕ್ಲಾಸ್ 7 ಪ್ರಾದೇಶಿಕ (ಜೆಆರ್) ಸೂಪರ್‌ಕ್ರಾಸ್ ಎ ಗುಂಪಿನ (250 ಸಿಸಿವರೆಗಿಮ ಮೋಟೊ2) ಸ್ಪರ್ಧೆಗಳಲ್ಲಿಅವರು ಮೊದಲಿಗರಾಗಿ ಹೊರಹೊಮ್ಮಿದರು.
ಕ್ಲಾಸ್–1 ಸೂಪರ್‌ಕ್ರಾಸ್ 1 (ಎ ಮತ್ತು ಬಿ) ‘ಎ’ ಗುಂಪಿನ (500 ಸಿಸಿ ವರೆಗಿನ ಮೋಟೊ2) ಸ್ಪರ್ಧೆಯಲ್ಲಿಪೆಟ್ರೊನಾಸ್ ಟಿವಿಎಸ್ ತಂಡದ ಇಶಾನ್ ಶ್ಯಾನಬಾಗ್ ( ಮೂಲತಃ ಉಡುಪಿಯವರು) ಹಾಗೂ ಋಗ್ವೇದ್ ಬರ್ಗುಜೆ ನಿಕಟ ಪೈಪೋಟಿ ಒಡ್ಡಿದರು.
ನಗರದಲ್ಲಿ ದಶಕದ ಬಳಿಕ ನಡೆದ ಈ ಸ್ಪರ್ಧಾಕೂಟದಲ್ಲಿ ವಿದೇಶಿ ಮುಕ್ತ ವಿಭಾಗದಿಂದ ಹಿಡಿದು, 12 ವರ್ಷದ ವಯೋಮಿತಿಯ ಕಿರಿಯರ ವಿಭಾಗದವರೆಗೆ ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಸ್ಥಳೀಯ ಕ್ಲಾಸ್ ವಿಭಾಗದಲ್ಲಿ ಮಂಗಳೂರಿನ ಅದ್ನಾನ್ ಅಹಮದ್ ಮೋಹಕ ಪ್ರದರ್ಶನದಿಂದ ಮನಗೆದ್ದರು. ವಿಸ್ಮಯ್ ರಾಮ್ ಅವರು ಆಕರ್ಷಕ ಕಸರತ್ತು ಪ್ರದರ್ಶಿಸಿದರು.
ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ಕಾರು ರ‍್ಯಾಲಿ ಚಾಂಪಿಯನ್ ಅರ್ಜುನ್ ಆರೂರು ರಾವ್ ಹಾಗೂ ಇಂಡಿಯನ್ ಆಯಿಲ್ (ಸರ್ವೊ) ಕಂಪನಿಯ ವೈಭವ್ ಚಂದ್ರನ್ ವಿತರಿಸಿದರು. ಈ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನ ಪಂದ್ಯಗಳು ಮೈಸೂರಿನಲ್ಲಿ ಮುಂದಿನ ವಾರ ನಡೆಯಲಿವೆ.
ಇತರ ಫಲಿತಾಂಶಗಳು ಇಂತಿವೆ: ಕ್ಲಾಸ್3 ನೋವಿಸ್ ಸಿ ಗುಂಪು (260 ಸಿಸಿ ವರೆಗಿನ ಮೋಟೊ1): ಪೆಟ್ರೊನಾಸ್ ಟಿವಿಎಸ್ ರೇಸಿಂಗ್‌ನ ಸಚಿನ್ ಡಿ; ಕ್ಲಾಸ್ 4 ಲೋಕಲ್ಸ್ ಬಿ ಗುಂಪು (260 ಸಿಸಿ ವರೆಗಿನ ಮೋಟೊ1): ಮಂಗಳೂರಿನ ಅದ್ನಾನ್ ಅಹಮದ್; ಕ್ಲಾಸ್ 5 ಇಂಡಿಯನ್ ಎಕ್ಸ್‌ಪರ್ಟ್ಸ್ ಸಿ ಗುಂಪು (260 ಸಿಸಿ ವರೆಗಿನ ಮೋಟೊ1): ಪೆಟ್ರೊನಾಸ್ ಟಿವಿಎಸ್ ರೇಸಿಂಗ್‌ನ ಇಮ್ರಾನ್ ಪಾಶಾ;ಕ್ಲಾಸ್ 6 ಪ್ರೈವೇಟ್ ಎಕ್ಸ್‌ಪರ್ಟ್ಸ್ ಸಿ ಗುಂಪು (260 ಸಿಸಿ ವರೆಗಿನ ಮೋಟೊ1): ಬೆಂಗಳೂರಿನ ಯೋಗೇಶ್ ಪಿ; ಕ್ಲಾಸ್ 8 ಪ್ರಾದೇಶಿಕ ಸೂಪರ್‌ಕ್ರಾಸ್ ಎ ಗುಂಪಿನ (100 ಸಿಸಿವರೆಗಿನ ಮೋಟೊ2):ಬೆಂಗಳೂರಿನ ಭೈರವ್ ಸಿ ಸಿ ಗುಂಪು (260 ಸಿಸಿ ವರೆಗಿನ ಮೋಟೊ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.