ಮಂಗಳೂರು: ಮಂಗಳೂರು ವಿಶ್ವವಿನಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸ್ಪೆಷಲೈಸೇಷನ್ ಆಯ್ಕೆಯನ್ನು ಕಡಿತ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿದ್ಯಾರ್ಥಿ ಪ್ರಮುಖ ನಿಖಿಲ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಎಸ್‌ಡಬ್ಲ್ಯು ದ್ವಿತೀಯ ವರ್ಷದಲ್ಲಿ ಮಾನವ ಸಂಪನ್ಮೂಲ, ವೈದ್ಯಕೀಯ ಮನೋಶಾಸ್ತ್ರ, ಸಮೂಹ ಅಭಿವೃದ್ಧಿ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ. ಆದರೆ, ಈ ಬಾರಿ ಪ್ರತಿ ವಿಷಯದಲ್ಲೂ 15 ವಿದ್ಯಾರ್ಥಿಗಳು ಇದ್ದರೆ ಮಾತ್ರ ತರಗತಿ ಮುಂದುವರಿಸಲಾಗುತ್ತದೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಂದ ಈ ಬಗ್ಗೆ ಮೌಖಿಕ ಆದೇಶ ಬಂದಿದೆ ಎಂದು ಕಾಲೇಜಿನವರು ಹೇಳುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸಮಸ್ಯೆಯಾಗುತ್ತದೆ’ ಎಂದರು.
ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, ‘ಎಚ್‌ಆರ್ ಕೋರ್ಸ್ ನನ್ನ ಬಹುವರ್ಷಗಳ ಕನಸು. ಇದನ್ನು ಓದಲೆಂದೇ ಹಾಸನದಿಂದ ಮಂಗಳೂರಿಗೆ ಬಂದಿದ್ದೇನೆ. ಪ್ರಥಮ ವರ್ಷದಲ್ಲಿ ಯಾವುದೇ ಷರತ್ತು ಇಲ್ಲದೆ, ಪ್ರವೇಶ ನೀಡಿದ್ದ ಕಾಲೇಜಿನಲ್ಲಿ ಈಗ, ವಿಷಯ ಆಯ್ಕೆಗೆ ಅವಕಾಶ ನೀಡುತ್ತಿಲ್ಲ. ಪ್ರಶ್ನಿಸಿದರೆ ಟಿಸಿ ತೆಗೆದುಕೊಂಡು ಖಾಸಗಿ ಕಾಲೇಜು ಸೇರಬಹುದು ಎನ್ನುತ್ತಾರೆ. ಬಡ ಕುಟುಂಬದಿಂದ ಬಂದಿರುವ ನಮಗೆ ಅಷ್ಟು ಶುಲ್ಕ ನೀಡುವ ಸಾಮರ್ಥ್ಯ ಇಲ್ಲ’ ಎಂದರು.
‘ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ವರ್ಷಕ್ಕೆ ₹3,500 ಶುಲ್ಕ ಇದ್ದರೆ, ಖಾಸಗಿ ಕಾಲೇಜಿನಲ್ಲಿ ಇದರ 20 ಪಟ್ಟು ಶುಲ್ಕ ಇರಬಹುದು. ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಹೇಳಿದ್ದೇವೆ. ಉನ್ನತ ಶಿಕ್ಷಣ ಸಚಿವರಿಗೆ ಮೇಲ್ ಕಳುಹಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ವಿದ್ಯಾರ್ಥಿನಿ ಪ್ರವೀಣಾ ಹೇಳಿದರು.
ಉಡುಪಿ– ದಕ್ಷಿಣ ಕನ್ನಡ ಜಿಲ್ಲೆಗಳ ನಾಲ್ಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಕೋರ್ಸ್ ಇದ್ದು, ಎಲ್ಲ ವಿದ್ಯಾರ್ಥಿಗಳು ಸೇರಿ ಅ.23ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ವಿದ್ಯಾರ್ಥಿನಿಯರಾದ ಮೋಕ್ಷಿತಾ, ದೀಕ್ಷಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.