ADVERTISEMENT

ಸಿದ್ದರಾಮಯ್ಯಗಿಂತ ಪ್ರಾಮಾಣಿಕ ಮುಖ್ಯಮಂತ್ರಿ ಸಿಗಲು ಸಾಧ್ಯವೇ: ವಿಜಯೇಂದ್ರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 15:50 IST
Last Updated 15 ಅಕ್ಟೋಬರ್ 2024, 15:50 IST
<div class="paragraphs"><p>ಸ್ಥಳೀಯ ಸಂಸ್ಥೆಗಳಿಂದ‌ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪಚುನಾವಣೆ ಸಲುವಾಗಿ ಬಂಟ್ವಾಳ ಬಳಿಯ ತುಂಬೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಮಾವೇಶದಲ್ಲಿ&nbsp; ಬಿ.ವೈ.ವಿಜಯೇಂದ್ರ ಮಾತನಾಡಿದರು </p></div>

ಸ್ಥಳೀಯ ಸಂಸ್ಥೆಗಳಿಂದ‌ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪಚುನಾವಣೆ ಸಲುವಾಗಿ ಬಂಟ್ವಾಳ ಬಳಿಯ ತುಂಬೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಮಾವೇಶದಲ್ಲಿ  ಬಿ.ವೈ.ವಿಜಯೇಂದ್ರ ಮಾತನಾಡಿದರು

   

-ಪ್ರಜಾವಾಣಿ ಚಿತ್ರ

ಬಂಟ್ವಾಳ: ‘ಸಿದ್ದರಾಮಯ್ಯ ಅವರಿಗಿಂತ ಪ್ರಾಮಾಣಿಕ ಮುಖ್ಯಮಂತ್ರಿ ಸಿಗಲು ಸಾಧ್ಯವೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.

ADVERTISEMENT

ಸ್ಥಳೀಯ ಸಂಸ್ಥೆಗಳಿಂದ‌ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪಚುನಾವಣೆ ಸಲುವಾಗಿ ಇಲ್ಲಿನ ತುಂಬೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಾಗ ನಿಗಮದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಬಳಿಕ ₹187 ಕೋಟಿಯಲ್ಲ, ₹87 ಕೋಟಿ ಹಗರಣ ನಡೆದಿದೆ ಎಂದು ಸದನದಲ್ಲೇ ಒಪ್ಪಿಕೊಂಡರು. ಮುಡಾ ಹಗರಣ ನಡೆದೇ ಇಲ್ಲ ಎಂದು ಮೊದಲು ಹೇಳಿದ್ದರು. ನಮ್ಮ ಪಾದಯಾತ್ರೆ ಮಾಡಿದ ಬಳಿಕ ಪ್ರಾಮಾಣಿಕವಾಗಿ 14 ನಿವೇಶನಗಳನ್ನೂ ಹಿಂತಿರುಗಿಸಿ, ಪರಿಹಾರವೂ ಬೇಡವೆಂದು ಹೇಳಿದರು’ ಎಂದು ತಿಳಿಸಿದರು.

‘ಅಹಿಂದ‌ ಹೆಸರು ಹೇಳಿಕೊಂಡು ಅಧಿಕಾರ ಪಡೆದ ಅವರು  ಆ ಸಮುದಾಯಕ್ಕೆ, ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮಾಡಿದ್ದಾರೆ‌‌, ಅವರಿಗೆ ನಾಚಿಕೆ ಆಗಬೇಕು’ ಎಂದರು.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಸಿದ್ದರಾಮಯ್ಯ ಕುಂಕುಮ‌ ಇಡಲು, ಪತ್ನಿ ಹೆಸರಿನಲ್ಲಿ ಅರ್ಚನೆ ಮಾಡಿಸಲು ಶುರು ಮಾಡಿದ್ದಾರೆ ಎಂದರೆ, ಅವರಿಗೆ ಕೇಡುಗಾಲ ಬಂದಿದೆ ಎಂದೇ ಅರ್ಥ. ಆರೇಳು ತಿಂಗಳುಗಳಲ್ಲೇ ಸರ್ಕಾರ ಬಿದ್ದುಹೋಗಲಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕದ್ದ ಮಾಲು ವಾಪಾಸ್ ಕೊಟ್ಟವರು ‌ಅಪರಾಧಿಗಳಲ್ಲ ಎಂದರೆ, ಒಪ್ಪಲು ಸಾಧ್ಯವಿದೆಯೇ’ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯದ ಸಹ ಪ್ರಭಾರಿ ಸುಧಾಕರ ರೆಡ್ಡಿ, ಅಭ್ಯರ್ಥಿ ಕಿಶೋರ್ ಕುಮಾರ್, ಪಕ್ಷದ ಸಂಸದರು, ಶಾಸಕರು ಭಾಗವಹಿಸಿದ್ದರು.

‘ಪಾಕಿಸ್ತಾನಕ್ಕೆ ಜೈ ಎನ್ನುವವರ ಮಂಡೆ ಒಡೆಯುತ್ತಾರೆ’ 

‘ರಕ್ತದ ಕಣಕಣದಲ್ಲಿ ಬಿಜೆಪಿ ಆರ್‌ಎಸ್‌ಎಸ್‌ ಭಾರತ್ ಮಾತಾ ಕಿ ಜೈ ಎನ್ನುವ ಗುಣ ಇರುವವರನ್ನು ಪರಿಷತ್ತಿಗೆ ಕಳುಹಿಸಿದರೆ ಪಕ್ಷಕ್ಕೆ ಬಲಬರಲಿದೆ.  ಹಿಂದುತ್ವದ ಕಟ್ಟಾಳುವಾಗಿರುವ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್‌ ಖಂಡಿತಾ ಗೆಲ್ಲುತ್ತಾರೆ‌. ವಿಧಾನಸೌಧದಲ್ಲಿ ಇನ್ನು ಯಾರಾದರೂ ಪಾಕಿಸ್ತಾನಕ್ಕೆ ಜೈ ಎಂದರೆ ಅವರ ಮಂಡೆಯನ್ನು ಒಡೆಯುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

‘ಸರ್ಕಾರ ವಜಾಕ್ಕೆ ರಾಷ್ಟ್ರಪತಿಗೆ ಮನವಿ’

‘ರಾಜ್ಯ ಸರ್ಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೀಘ್ರವೇ ಭೇಟಿ ಮಾಡಿ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಲಿದ್ದೇವೆ’ ಎಂದು ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹುಬ್ಬಳ್ಳಿ ಗಲಭೆಕೋರರ ಮೇಲಿನ ಪ್ರಕರಣ ಹಿಂಪಡೆದಿದ್ದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಇದೇ 25ರಂದು ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದರು. ‘ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಯಾರೆಂಬುದು ಇನ್ನೂ ತೀರ್ಮಾನವಾಗಿಲ್ಲ. ಸಿ.ಪಿ. ಯೋಗೇಶ್ವರ ಸ್ಪರ್ಧೆ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನಿಸಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.