ADVERTISEMENT

ಮುಂಬೈ: ಡಿ. 7ರಂದು ವಿಶ್ವ ಬಂಟರ ಸಮಾಗಮ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:26 IST
Last Updated 8 ನವೆಂಬರ್ 2024, 4:26 IST
ಸುದ್ದಿಗೋಷ್ಠಿಯಲ್ಲಿ ಐಕಳ ಹರೀಶ್‌ ಶೆಟ್ಟಿ ಮಾತನಾಡಿದರು. ಜಯಕರ ಶೆಟ್ಟಿ ಇಂದ್ರಾಳಿ, ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ ಡಿ. ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಐಕಳ ಹರೀಶ್‌ ಶೆಟ್ಟಿ ಮಾತನಾಡಿದರು. ಜಯಕರ ಶೆಟ್ಟಿ ಇಂದ್ರಾಳಿ, ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ ಡಿ. ಭಾಗವಹಿಸಿದ್ದರು   

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಮುಂಬೈ ಬಂಟರ ಸಂಘದ ಸಹಯೋಗದಲ್ಲಿ ಮುಂಬೈಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ‘ವಿಶ್ವ ಬಂಟರ ಸಮಾಗಮ’ ಡಿ. 7ರಂದು ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ‘ಜಗತ್ತಿನ ವಿವಿಧೆಡೆಯ ಬಂಟ ಸಮಾಜದ ಬಂಧುಗಳನ್ನು ಒಟ್ಟು ಸೇರಿಸುವ ಉದ್ದೇಶದೊಂದಿಗೆ ‘ವಿಶ್ವ ಬಂಟರ ಸಮಾಗಮ’ ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಉದ್ಘಾಟಿಸುವರು. ಆರ್ಗ್ಯಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ತೋನ್ಸೆ ಆನಂದ ಎಂ. ಶೆಟ್ಟಿ ಪಾಲ್ಗೊಳ್ಳುವರು. ಸಂಜೆ ನಡೆಯಲಿರುವ ಸಮಾರೋಪವನ್ನು ಹೇರಂಭ ಇಂಡಸ್ಟ್ರೀಸ್‌ನ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸುವರು. ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ  ಕೆ. ಪ್ರಕಾಶ್ ಶೆಟ್ಟಿ ಪಾಲ್ಗೊಳ್ಳುವರು. ಬಂಟರ ಸಂಘಗಳ ನೂತನ ಅಧ್ಯಕ್ಷರಿಗೆ ಸನ್ಮಾನ ನಡೆಯಲಿದೆ’ ಎಂದರು.

‘ಬಂಟ ಸಮಾಜದ ಪ್ರಮುಖರು, ಜಗತ್ತಿನ ವಿವಧೆಡೆಯ ಬಂಟರ ಸಂಘಗಳ ಪ್ರತಿನಿಧಿಗಳು, ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಕೈಗಾರಿಕೋದ್ಯಮಿ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಜಿತ್‌ ರೈ,  ಚಂದ್ರಶೇಖರ್‌, ಸವಣೂರು ಸೀತಾರಾಮ‌ ರೈ, ಗುರುಕಿರಣ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಿದ್ದೇವೆ. ಮುಂಬೈ ಬಂಟರ ಸಂಘಗಳ ಸದಸ್ಯರಿಗೆ ನೃತ್ಯ ಸ್ಪರ್ಧೆ, ಆದರ್ಶ ದಂಪತಿ, ಮಿಸ್ಟರ್ ಬಂಟ್, ಮಿಸ್ ಬಂಟ್ ಸ್ಪರ್ಧೆಗಳು ನಡೆಯಲಿವೆ. ಅಂದು ಬೆಳಿಗ್ಗೆ ಮಹಾಸಭೆ ಅಧಿವೇಶನ ಹಾಗೂ ದಾನಿಗಳ ಸಮಾವೇಶ ನಡೆಯಲಿದೆ’ ಎಂದು ಹೇಳಿದರು.

ADVERTISEMENT

‘ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಿದ್ದೇವೆ. ತುಳು ಭಾಷೆಗೆ ವಿಶೇಷ ಮನ್ನಣೆ ದೊರಕಿಸುವ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಎಲ್ಲ ಕಾರ್ಯಕ್ರಮಗಳೂ ತುಳುವಿನಲ್ಲೇ ನಡೆಯಲಿವೆ. ಬಲೆ ತೆಲಿಪಾಲೆ ಸ್ಪರ್ಧೆಯ 12 ತಂಡಗಳ ಪ್ರದರ್ಶನ ಇರಲಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ ಭಾಗವಹಿಸಿದ್ದರು.

‘2ಎ ಮೀಸಲಾತಿ ನಿಗಮ ರಚನೆ ಭರವಸೆ ಇದೆ’

‘ಬಂಟ ಸಮುದಾಯದವರಿಗೆ ಹಿಂದುಳಿದ ಪ್ರವರ್ಗ 2ಎ ಅಡಿ ಮೀಸಲಾತಿ ಸಿಗಬೇಕು ಮತ್ತು ಬಂಟರಿಗೆ ಅಭಿವೃದ್ಧಿ ನಿಗಮ ರಚಿಸಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಈ ಬೇಡಿಕೆ ಇನ್ನೂ ಈಡೇರಿಲ್ಲ. ಮುಂದಿನ ಬಜೆಟ್‌ನಲ್ಲಿ ಈ ಭರವಸೆ ಈಡೇರಿಸಬಹುದು ಎಂಬ ವಿಶ್ವಾಸ ಇದೆ’ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

‘ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳೂ ಈ ಬಗ್ಗೆ ಭರವಸೆ ನೀಡಿ ಮತ್ತೆ ಮರೆತು ಬಿಡುತ್ತವೆ. ಬಂಟ ಸಮಾಜದಲ್ಲೂ ಬಡವರಿದ್ದಾರೆ. ಅವರಿಗೆ ಒಳಿತನ್ನು ಉಂಟು ಮಾಡುವ ಸಲುವಾಗಿ ಈ ಪ್ರಯತ್ನವನ್ನು ಮುಂದುವರಿಸಬೇಕು.ಈ ಬೇಡಿಕೆ ಈಡೇರಿಸಿಕೊಳ್ಳಲು ಸಮಾಜದ ಎಲ್ಲರೂ ಕೈಜೋಡಿಸಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.