ADVERTISEMENT

ದಿನವಿಡೀ ಹುಡುಕಿದರೂ ಸಿಗದ ಮುಮ್ತಾಜ್ ಅಲಿ

ಮುಸ್ಲಿಂ ಮುಖಂಡ ಕಣ್ಮರೆಯಾದ ವಿಷಯ ತಿಳಿದು ಆಘಾತ‌ಕ್ಕೊಳಗಾದ ಅಭಿಮಾನಿಗಳು, ರಾತ್ರಿಯೂ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 5:11 IST
Last Updated 7 ಅಕ್ಟೋಬರ್ 2024, 5:11 IST
ನಾಪತ್ತೆಯಾದ ಮುಸ್ಲಿಂ ಮುಖಂಡ ಬಿ.ಎಂ. ಮುಮ್ತಾಜ್ ಅಲಿರವರ ಶೋಧಕಾರ್ಯ ವೀಕ್ಷಿಸಲು ಕೂಳೂರು ಸೇತುವೆ ಬಳಿ ಭಾನುವಾರ ಸೇರಿದ್ದ ಜನ: ಪ್ರಜಾವಾಣಿ ಚಿತ್ರ
ನಾಪತ್ತೆಯಾದ ಮುಸ್ಲಿಂ ಮುಖಂಡ ಬಿ.ಎಂ. ಮುಮ್ತಾಜ್ ಅಲಿರವರ ಶೋಧಕಾರ್ಯ ವೀಕ್ಷಿಸಲು ಕೂಳೂರು ಸೇತುವೆ ಬಳಿ ಭಾನುವಾರ ಸೇರಿದ್ದ ಜನ: ಪ್ರಜಾವಾಣಿ ಚಿತ್ರ   

ಮಂಗಳೂರು: ಕೂಳೂರು ಸೇತುವೆ ಬಳಿ ಭಾನುವಾರ ಮುಂಜಾನೆಯಿಂದಲೇ ಜನ ಜಂಗುಳಿ ಸೇರಿತ್ತು. ಕೆಲವರಂತೂ ಬೆಳಿಗ್ಗೆಯಿಂದ ಸಂಜೆವರಗೂ ಬಿಸಿಲು– ಮಳೆಯನ್ನು ಲೆಕ್ಕಿಸದೇ ಅಲ್ಲಿ ಕಾದಿದ್ದರು. ಅವರೆಲ್ಲರ ಕಣ್ಣುಗಳು ಕಾಯುತ್ತಿದ್ದುದು ಮುಸ್ಲಿಂ ಮುಖಂಡ ಮುಮ್ತಾಜ್ ಅಲಿ ಅವರಿಗಾಗಿ.

ಮನೆಯವರೆಲ್ಲ ಮಲಗಿದ್ದಾಗ ಅವರು ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ನಗರದ ಕದ್ರಿ ಆಲ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮನೆಯಿಂದ ಸುರತ್ಕಲ್‌ ಕಡೆಗೆ ಹೊರಟಿದ್ದ ಅವರು ಬಳಿಕ ಕಣ್ಮರೆಯಾಗಿದ್ದಾರೆ.  ಅವರ ಕಾರು ಕೂಳೂರು ಸೇತುವೆಯಲ್ಲೇ ಪತ್ತೆಯಾಗಿರುವುದರಿಂದ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂಬ ಶಂಕೆಯಿಂದ ನದಿಯಲ್ಲಿ ಅವರಿಗಾಗಿ ಹುಡುಕಾಟ ನಡೆಸಲಾಯಿತು. ಮುಳುಗುತಜ್ಞರು ಅಲ್ಪ ವಿರಾಮ ಪಡೆದು ಮತ್ತೆ ನೀರಿಗೆ ಜಿಗಿದು ಹುಡುಕಿದರು. ದಿನವಿಡೀ ನದಿಯಲ್ಲಿ  ಜಾಲಾಡಿದರೂ ಅವರ ಬಗ್ಗೆ ಸುಳಿವು ಸಿಗಲೇ ಇಲ್ಲ.  

ಮುಸ್ಲಿಂ ಮುಖಂಡ, ಇಲ್ಲಿನ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾಗಿದ್ದ ಬಿ.ಎಂ. ಮುಮ್ತಾಜ್ ಅಲಿ ನಾಪತ್ತೆಯಾಗಿರುವ ಹಾಗೂ ಅವರ ಬಿಎಂಡಬ್ಲ್ಯು ಕಾರು ಭಾನುವಾರ ಮುಂಜಾನೆ  ಕೂಳೂರು ಸೇತುವೆಯಲ್ಲಿ ಪತ್ತೆಯಾದ ಸುದ್ದಿ ಕೇಳಿ  ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಕೂಳೂರಿನಲ್ಲಿ ಫಲ್ಗುಣಿ ನದಿಯಲ್ಲಿ ನಡೆದ ಶೋಧ ಕಾರ್ಯ ವೀಕ್ಷಿಸಲು ಭಾರಿಸಂಖ್ಯೆಯಲ್ಲಿ ಸೇರಿದ್ದರು.

ADVERTISEMENT

ಅಲಿ ಅವರ ಸಂಘಟನಾ ಸಾಮರ್ಥ್ಯ, ಮುಸ್ಲಿಂ ಧಾರ್ಮಿಕ ಮುಖಂಡರ ಜೊತೆ ಅವರಿಗಿದ್ದ ನಂಟು, ಅವರು ರಾಜಕೀಯದಿಂದ ದೂರವೇ ಉಳಿದ ವಿಚಾರಗಳ ಬಗ್ಗೆ ಅಭಿಮಾನಿಗಳು ‌ಚರ್ಚಿಸುತ್ತಿದ್ದುದು ಕಂಡು ಬಂತು. ಅವರ ಖಾಸಗಿ ಬದುಕಿಗೆ ಸಂಬಂಧಿಸಿದ ಬಗ್ಗೆಯೂ ಚರ್ಚೆ ಹೊರಳಿತ್ತು. ‘ಅಲಿ ಬದುಕಿರುವ ಸುದ್ದಿ ಸಿಗಲಿ’ ಎಂದೇ ಅಲ್ಲಿದ್ದವರೆಲ್ಲ ಹಾರೈಸಿದರು. 

ಮಮ್ತಾಜ್‌ ಅಲಿ ಸೋದರರಾದ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ,  ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಿ.ಎಂ. ಫಾರೂಕ್‌ ಹಾಗೂ ಕುಟುಂಬಸ್ಥರು ದುಃಖದ ಮಡುವಿನಲ್ಲಿದ್ದರು. ಮುಸ್ಲಿಂ ಮುಖಂಡರು ಅವರನ್ನು ಸಂತೈಸುವಯತ್ನ ಮಾಡಿದರು.

‘ವಿಮಾನಕ್ಕೆ ನಿಲ್ದಾಣಕ್ಕೆ ಹೋಗುವ ವ್ಯಕ್ತಿಯೊಬ್ಬರು ಕೂಳೂರು ಸೇತುವೆಯಲ್ಲಿ ಮಮ್ತಾಜ್ ಅಲಿಯನ್ನು ನೋಡಿದ್ದಾರೆ. ಅವರ ಕಾರು ಮುಂಜಾನೆ 4.40ರ ಸುಮಾರಿಗೆ ಕೂಳೂರು ಸೇತುವೆಯತ್ತ ಸಾಗಿದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಮುಂಜಾನೆ 5.09ರ ಸುಮಾರಿಗೆ ಮನೆಯವರು ಕೂಳೂರು ಸೇತುವೆಯಲ್ಲಿ ಅವರ ಕಾರು ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ 4.40 ಮತ್ತು 5.09ರ ನಡುವೆ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಮನೆಯಿಂದ ಹೊರಡುವಾಗ ಅವರು ಕಪ್ಪು ಬಣ್ಣದ ಅಂಗಿ ಹಾಗೂ ಕಪ್ಪು ಪ್ಯಾಂಟ್‌ ಧರಿಸಿದ್ದರು. ಬಿಳಿ ಬಣ್ಣದ ಚಪ್ಪಲಿ ತೊಟ್ಟಿದ್ದರು. ಅವರ ಕಾರಿನಲ್ಲೇ ಕೀ ಹಾಗೂ ಅವರು ಬಳಸುತ್ತಿದ್ದ ಒಂದು ಮೊಬೈಲ್‌ ಸಿಕ್ಕಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌ ಭೇಟಿ ನೀಡಿದರು. ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ್‌, ಎಸಿಪಿ ಶ್ರೀಕಾಂತ್‌  ಶೋಧಕಾರ್ಯಕ್ಕೆ ಮಾರ್ಗದರ್ಶನ ಮಾಡಿದರು.

ಕೂಳೂರು ಸೇತುವೆಯಲ್ಲಿ ಪತ್ತೆಯಾದ ಬಿ.ಎಂ. ಮುಮ್ತಾಜ್ ಅಲಿ ಅವರ ಬಿಎಂಡಬ್ಲ್ಯು ಕಾರನ್ನು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್ ಭಾನುವಾರ ವೀಕ್ಷಿಸಿದರು. ಡಿಸಿಪಿ ಸಿದ್ಧಾರ್ಥ ಗೋಯಲ್‌ ಹಾಗೂ ಬಿ.ಎ.ಮೊಹಿಯುದ್ದೀನ್ ಬಾವ ಜೊತೆಯಲ್ಲಿದ್ದರು : ಪ್ರಜಾವಾಣಿ ಚಿತ್ರ

ಸಂಘಟನೆಯಲ್ಲಿ ಮುಂದೆ

ಉದ್ಯಮಿಯೂ ಆಗಿದ್ದ ಅವರು ಬೈಕಂಪಾಡಿಯಲ್ಲಿ ಮಂಗಳೂರು ‘ಲೈಮ್‌ ಆ್ಯಂಡ್‌ ಮೆರೈನ್‌ ಇಂಡಸ್ಟ್ರೀಸ್‌’ ಕಂಪನಿಯ ಆಡಳಿತ ಪಾಲುಗಾರರು. ಮುಮ್ತಾಜ್ ಟ್ರೇಡರ್ಸ್‌ನ ಮಾಲೀಕರು. ಮುಸ್ಲಿಂ ಸಮುದಾಯದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಮುಮ್ತಾಜ್ ಅಲಿ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.  ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿಯ ಜಮಾತ್‌ ಕೃಷ್ಣಾಪುರದ ಅಲ್‌ ಬದ್ರಿಯಾ ಶಿಕ್ಷಣ ಸಂಸ್ಥೆ ಕಾಟಿಪಳ್ಳದ ಮಿಸ್ಬಾ ಸಂಸ್ಥೆಗಳ ಸಮೂಹ ಹಾಗೂ ಕರ್ನಾಟಕ ಮುಸ್ಲಿಂ ಜಮಾತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಬ್ಯಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬ್ಯಾರಿ ಕಲ್ಚರಲ್‌ ಫೋರಮ್‌ನ ಟ್ರಸ್ಟಿಯಾಗಿದ್ದರು. ಪಂಪ್‌ವೆಲ್‌ನ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ ಮಸ್ಜಿದ್ ತಖ್ವಾ ಪಂಪ್‌ವೆಲ್ ತಕ್ವಾ ಪಬ್ಲಿಕ್‌ ಸ್ಕೂಲ್‌ ಮೆಲ್ಕಾರ್‌ ಮಹಿಳಾ ಕಾಲೇಜು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.  ಯುಎಇಯ ದುಬೈನ ಬ್ಯಾರೀಸ್‌ ಕಲ್ಚರಲ್ ಫೋರಮ್‌ನ ಪೋಷಕರಾಗಿದ್ದ ಕೋಯಿಕ್ಕೋಡ್‌ನ ಜಾಮಿಯಾ ಮರ್ಕಝ್‌ ಕಾರಂತೂರು ಹಾಗೂ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್‌ನ ಕಾರ್ಯಕಾರಿ ಸದಸ್ಯರಾಗಿದ್ದರು.  ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ (ಎಸ್‌ವೈಎಸ್) ಪ್ರಮುಖರಾಗಿದ್ದರು. ಎಸ್‌ವೈಎಸ್ ವತಿಯಿಂದ 2024ನೇ ಜನವರಿ 24ರಂದು ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ  30ನೇ ವಾರ್ಷಿಕ ಸಮಾವೇಶ ಏರ್ಪಡಿಸಿದ್ದಾಗ ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮುಮ್ತಾಜ್‌ ಅಲಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.