ಮಂಗಳೂರು: ‘ಒಳ ಮೀಸಲಾತಿ ಜಾರಿಗೊಳಿಸಿದರೆ ಮುಂಡಾಲ ಸಮುದಾಯಕ್ಕೆ ಭಾರಿ ಅನ್ಯಾಯವಾಗಲಿದೆ’ ಎಂದು ಈ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಇಲ್ಲಿಯ ಬಿಜೈ ಕಾಪಿಕಾಡ್‌ನಲ್ಲಿ ರುವ ಕುದ್ಮುಲ್ ರಂಗರಾವ್ ಸ್ಮಾರಕ ಭವನದಲ್ಲಿ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ನೇತೃತ್ವದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಮುಂಡಾಲ ಸಮುದಾಯದ ಮುಖಂಡರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
‘ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಂಡಾಲ ಸಮುದಾಯದ ಸ್ಪಷ್ಟ ದಾಖಲೆಯನ್ನು ಪಡೆಯದೆ ಜಾರಿಗೊಳಿಸಲು ಉದ್ದೇಶಿಸಿರುವ ಈ ಒಳಮೀಸಲಾತಿಯು ಅವೈಜ್ಞಾನಿಕವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತು, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಎಲ್ಲಾ ಸೌಲಭ್ಯದಿಂದ ಮುಂಡಾಲ ಸಮುದಾಯ ವಂಚಿತವಾಗಲಿದೆ. ಒಳ ಮೀಸಲಾತಿ ತಡೆಹಿಡಿದು ಈ ಹಿಂದಿನಂತೆ ಸಂವಿಧಾನದ ಆಶಯದಡಿ ಇದ್ದ ಮೀಸಲಾತಿಯನ್ನು ಮುಂದುವರಿಸಬೇಕು’ ಎಂದು ಮುಖಂಡರು ಆಗ್ರಹಿಸಿದರು.
ಕಚೂರು ಶ್ರೀ ಮಾಲ್ತಿದೇವಿ ಬಬ್ಬು ಸ್ವಾಮಿ ಕ್ಷೇತ್ರದ ಆಡಳಿತ ಸಮಿತಿ, ಮುಂಡಾಲ ಮಹಾಸಭಾ ಉಡುಪಿ, ಮುಂಡಾಲ ಯುವ ವೇದಿಕೆ ಪಡುಬಿದ್ರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರು ಹಾಗೂ ಬಬ್ಬುಸ್ವಾಮಿ ದೈವಸ್ಥಾನಗಳ ಪ್ರಮುಖರು, ರಾಜಕೀಯ, ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.