ADVERTISEMENT

ಮುಸ್ಲಿಂ ಮುಖಂಡ ಮುಮ್ತಾಜ್ ಅಲಿ ಸುಲಿಗೆ, ಆತ್ಮಹತ್ಯೆಗೆ ಪ್ರಚೋದನೆ: ದಂಪತಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2024, 14:21 IST
Last Updated 8 ಅಕ್ಟೋಬರ್ 2024, 14:21 IST
<div class="paragraphs"><p>ಬಿ.ಎಂ. ಮುಮ್ತಾಜ್ ಅಲಿ</p></div>

ಬಿ.ಎಂ. ಮುಮ್ತಾಜ್ ಅಲಿ

   

ಮಂಗಳೂರು: ಮುಸ್ಲಿಂ ಮುಖಂಡ ಹಾಗೂ ಉದ್ಯಮಿ ಬಿ.ಎಂ.ಮುಮ್ತಾಜ್‌ ಅಲಿ ಅವರಿಗೆ ಬೆದರಿಕೆ ಒಡ್ಡಿ ಸುಲಿಗೆ ಮಾಡಿದ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದಂಪತಿಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

‘ಕೃಷ್ಣಾಪುರದ ರೆಹಮತ್ ಹಾಗೂ ಆಕೆಯ ಪತಿ ಶೋಯಬ್ ಬಂಧಿತರು. ಅವರನ್ನು ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ಬಳಿ ಬಂಧಿಸಲಾಗಿದೆ’ ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್ವಾಲ್ ತಿಳಿಸಿದ್ದಾರೆ.

ADVERTISEMENT

ಮುಮ್ತಾಜ್ ಅಲಿ ಅವರು ಭಾನುವಾರ ಮುಂಜಾನೆ ಕೂಳೂರು ಸೇತುವೆ ಮೇಲಿನಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹವು ಸೋಮವಾರ ಪತ್ತೆಯಾಗಿತ್ತು.

‘ಸಮಾಜ ಸೇವೆ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅಲಿ ಅವರ ಹೆಸರು ಹಾಳು ಮಾಡಲು ಕೃಷ್ಣಾಪುರದ ರೆಹಮತ್, ಕಾಟಿಪಳ್ಳದ ಅಬ್ದುಲ್ ಸತ್ತಾರ್‌, ಸಜಿಪಮುನ್ನೂರಿನ ಶಾಫಿ, ಕೃಷ್ಣಾಪುರ ಮಹಮ್ಮದ್‌ ಮುಸ್ತಫಾ, ಶೋಯಿಬ್‌ ಹಾಗೂ ಮಹಮ್ಮದ್‌ ಸಿರಾಜ್‌ (ಸತ್ತಾರ್ ಕಾರು ಚಾಲಕ ) ಸೇರಿಕೊಂಡು ಸಂಚು ರೂಪಿಸಿದ್ದರು. ಅಲಿ ಅವರಿಗೆ 2024ರ ಜುಲೈನಿಂದ ಬೆದರಿಕೆ ಒಡ್ಡಿ ₹ 50 ಲಕ್ಷಕ್ಕಿಂತಲೂ ಹೆಚ್ಚು ಮೊತ್ತ ಪಡೆದಿದ್ದರು. ಮತ್ತಷ್ಟು ಹಣ ನೀಡದಿದ್ದರೆ, ರೆಹಮತ್‌ ಜೊತೆ ಅಕ್ರಮ ಸಂಬಂಧವಿದೆ ಎಂದು ಅಪಪ್ರಚಾರ ಮಾಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು’ ಎಂದು ಆರೋಪಿಸಿ ಅಲಿ ಅವರ ತಮ್ಮ ಹೈದರ್‌ ಅಲಿ ಕಾವೂರು ಠಾಣೆಗೆ ದೂರು ನೀಡಿದ್ದರು.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 308 (2), 308 (5) (ಎರಡೂ ಸೆಕ್ಷನ್‌ ಸುಲಿಗೆಗೆ ಸಂಬಂಧಿಸಿದವು), ಸೆಕ್ಷನ್‌ 351 (2) (ಕ್ರಿಮಿನಲ್ ಬೆದರಿಕೆ), ಸೆಕ್ಷನ್‌ 352 (ಉದ್ದೇಶಪೂರ್ವಕವಾಗಿ ಅಪಮಾನಿಸುವುದು) ಹಾಗೂ ಸೆಕ್ಷನ್‌ 190ರ (ಸಮಾನ ಉದ್ದೇಶದಿಂದ ನಡೆಸುವ ಸಂಘಟಿತ ಅಪರಾಧ ಕೃತ್ಯ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ದಾರ್ಥ್ ಗೋಯಲ್, ಡಿಸಿಪಿ (ಅಪರಾಧ) ದಿನೇಶ್ ಕುಮಾರ್ ನಿರ್ದೇಶನದಲ್ಲಿ ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ಕಾವೂರು ಠಾಣೆಯ ಇನ್‌ಸ್ಪೆಕ್ಟರ್‌ ರಾಘವೇಂದ್ರ ಎಂ. ಬೈಂದೂರು, ಎಸ್‌.ಐ.ಗಳಾದ ಮಲ್ಲಿಕಾರ್ಜುನ ಬಿರಾದಾರ, ನಳಿನಿ ಹಾಗೂ ಸಿಬ್ಬಂದಿ ನಾಗರತ್ನ.ಸಿ. ಪ್ರವೀಣ್ ಅವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇನ್ನುಳಿದ ನಾಲ್ವರು ಆರೋಪಿಗಳ ಪತ್ತೆಗೆ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.