ADVERTISEMENT

ಮುಸ್ಲಿಂ‌ ಮುಖಂಡ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣ: ಆರು ಮಂದಿ ವಿರುದ್ಧ ಎಫ್ಐಆರ್

ಸುಲಿಗೆ ಆರೋಪ | ಮುಮ್ತಾಜ್ ನಾಪತ್ತೆ ಪ್ರಕರಣ: ಇನ್ನೂ ಸಿಗದ ಸುಳಿವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 4:31 IST
Last Updated 7 ಅಕ್ಟೋಬರ್ 2024, 4:31 IST
   

ಮಂಗಳೂರು: ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ಭಾನುವಾರ ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಜ್ ಅಲಿ ಅವರ ನಾಪತ್ತೆ ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಆರು ಮಂದಿ ವಿರುದ್ಧ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲಿ ಅವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಅವರಿಗಾಗಿ ಫಲ್ಗುಣಿ ನದಿಯಲ್ಲಿ ಹುಡುಕಾಟ ಸೋಮವಾರವೂ ಮುಂದುವರಿದಿದೆ.

ಸಾಮಾಜಿಕ - ಧಾರ್ಮಿಕ ಮುಂದಾಳುವಾಗಿದ್ದ ಮುಮ್ತಾಜ್ ಅಲಿ ಅವರಿಗೆ ಮಹಿಳೆಯನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಅಲಿ ಅವರನ್ನು ಆರೋಪಿಗಳು ನಿರಂತರವಾಗಿ ಬೆದರಿಸಿದ್ದರು. ಅವರಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ 6 ಮಂದಿ ಆರೋಪಿಗಳ ವಿರುದ್ಧ ಮುಮ್ತಾಜ್ ಅಲಿ ಅವರ ಸೋದರ ಹೈದರ್ ಅಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ‌

ಸಮಾಜ ಸೇವೆ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದ ಅಲಿ ಅವರ ಹೆಸರು ಹಾಳು ಮಾಡುವ ದುರುದ್ದೇಶವನ್ನು ಆರೋಪಿಗಳು ಹೊಂದಿದ್ದರು. ಅಲಿ ಅವರಿಗೆ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಎಂದು ಅಪಪ್ರಚಾರ ಮಾಡುವುದಾಗಿ ಬೆದರಿಸಿ 2024 ರ ಜುಲೈ ಯಿಂದ ಇದುವರೆಗೂ₹ 50 ಲಕ್ಷಕ್ಕಿಂತಲು ಹೆಚ್ಚು ಹಣವನ್ನು ಆರೋಪಿಗಳು ವಸೂಲಿ ಮಾಡಿದ್ದಾರೆ. ಅಲ್ಲದೆ, ಬೆದರಿಸಿ ₹ 25 ಲಕ್ಷ ಹಣವನ್ನು ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಅವರ ಸಹೋದರರಾಗಿರುವ ಮುಮ್ತಾಜ್ ಅಲಿ ಅವರು ಭಾನುವಾರ ಬೆಳಗ್ಗಿನ ಜಾವದಿಂದ ನಾಪತ್ತೆಯಾಗಿದ್ದಾರೆ. ಅವರ ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿದೆ. ಅವರಿಗಾಗಿ ಫಲ್ಗುಣಿ ನದಿಯಲ್ಲಿ ಮುಳುಗುತಜ್ಞರಿಂದ ಹುಡುಕಾಟ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.