ಪುತ್ತೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರವಾದ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಚುನಾವಣಾಧಿಕಾರಿ ಗಿರೀಶ್ ನಂದನ್ ನೇತೃತ್ವದಲ್ಲಿ ಸಿದ್ಧತೆಗಳನ್ನು ಮಾಡಿ, ಚುನಾವಣಾ ಕರ್ತವ್ಯ ನಿರ್ವಹಿಸಲಿರುವ ಸಿಬ್ಬಂದಿಯನ್ನು ಮತದಾನ ಕೇಂದ್ರಗಳಿಗೆ ಕಳುಹಿಸಲಾಯಿತು.
ಚುನಾವಣಾ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ನಿರ್ವಹಿಸುವ ಕರ್ತವ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದ ಬಳಿಕ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಹಾಗೂ ಮತದಾನಕ್ಕೆ ಅವಶ್ಯಕವಾದ ಪರಿಕರಗಳನ್ನು ಪರಿಶೀಲಿಸಿ ವಿತರಿಸಲಾಯಿತು. ಮಧ್ಯಾಹ್ನದ ಭೋಜನದ ಬಳಿಕ ನಿಗದಿಪಡಿಸಿದ ರೂಟ್ಗಳಲ್ಲಿ ಮತಗಟ್ಟೆಗಳಿಗೆ ಅಧಿಕಾರಿ, ಸಿಬ್ಬಂದಿಯನ್ನು ಕಳುಹಿಸಿಕೊಡಲಾಯಿತು.
ಮೇ 10ರಂದು ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿದ್ದು, ಸಂಜೆ 6ರತನಕ ನಡೆಯಲಿದೆ. ಬಳಿಕ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿಮಸ್ಟರಿಂಗ್ ಕಾರ್ಯಗಳು ನಡೆಯುವುದು. ಬಳಿಕ ಮತಯಂತ್ರಗಳು ಜಿಲ್ಲಾ ಕೇಂದ್ರ ಮಂಗಳೂರು ಸುರತ್ಕಲ್ನ ಎನ್ಐಟಿಕೆಗೆ ಭದ್ರತೆ ಹಾಗೂ ವಿಡಿಯೊ ಚಿತ್ರೀಕರಣದೊಂದಿಗೆ ವಾಹನಗಳ ಮೂಲಕ ಸ್ಥಳಾಂತರಗೊಳ್ಳುವುದು. ಮೇ 13ರಂದು 8ರಿಂದ ಮತಎಣಿಕೆ ಪ್ರಕ್ರಿಯೆ ನಡೆಯುವುದು.
ಪುತ್ತೂರು ಕ್ಷೇತ್ರದಲ್ಲಿ 1,04,918 ಪುರುಷರು, 1,07,832 ಮಹಿಳೆಯರು ಹಾಗೂ ಇತರ 3 ಮಂದಿ ಸೇರಿದಂತೆ ಒಟ್ಟು 2,12,753 ಮತದಾರರಿದ್ದಾರೆ.
ಪುತ್ತೂರು ಭಾಗದ 115 ಮತಗಟ್ಟೆಗಳಿಂದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದ್ದು, ಜಿಲ್ಲಾಡಳಿತದಿಂದಲ್ಲೇ ನೇರವಾಗಿ ಮತಗಟ್ಟೆಯಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡಲಾಗುತ್ತದೆ. 40 ಮತಗಟ್ಟೆಗಳಿಗೆ ಕೇಂದ್ರ ಸಶಸ್ತ್ರ ಪಡೆಯನ್ನು ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ವಿವೇಕಾನಂದ ಪಾಲಿಟಿಕ್ನಿಕ್ನಲ್ಲಿರುವ ಮತಗಟ್ಟೆಯನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ ಮತದಾನ ಸುಗಮವಾಗಿ ನಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಗಿರೀಶ್ ನಂದನ್ ತಿಳಿಸಿದರು.
221 ಮತಗಟ್ಟೆ: ಪುತ್ತೂರು ಕ್ಷೇತ್ರದಲ್ಲಿ 220 ಮತಗಟ್ಟೆಗಳಿದ್ದು, ನಗರದಲ್ಲಿ 61 ಹಾಗೂ 159 ಗ್ರಾಮೀಣ ಭಾಗದ ಮತಗಟ್ಟೆಗಳಾಗಿದೆ. ಒಂದು ಮತಗಟ್ಟೆ ಇರುವ 66 ಕೇಂದ್ರಗಳು, ಎರಡು ಮತಗಟ್ಟೆ ಇರುವ 57 ಕೇಂದ್ರಗಳು, ಮೂರು ಮತಗಟ್ಟೆ ಇರುವ 6 ಕೇಂದ್ರಗಳು, ನಾಲ್ಕು ಮತಗಟ್ಟೆ ಇರುವ 4 ಕೇಂದ್ರ, ಆರು ಮತಗಟ್ಟೆಗಳಿರುವ 1 ಕೇಂದ್ರ ಸೇರಿ ಒಟ್ಟು 134 ಕೇಂದ್ರಗಳನ್ನು ಹೊಂದಲಾಗಿದೆ. ಇದರಲ್ಲಿ 13 ವಿಶೇಷ ಮತಗಟ್ಟೆಗಳಾಗಿ ಮತದಾರರನ್ನು ಆಕರ್ಷಿಸುವ ಕಾರ್ಯ ಆಗಲಿದೆ ಗಿರೀಶ್ ನಂದನ್ ಹೇಳಿದರು.
ಈಗಾಗಲೇ ಎಲ್ಲಾ ಅಭ್ಯರ್ಥಿಗಳನ್ನು ಕರೆಸಿ, ಸಭೆಯನ್ನು ನಡೆಸಿ ವಿವಿಧ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ತಂಡಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಸೆಕ್ಟರ್ ಆಫೀಸರ್ಗೆ ರಿಸರ್ವ್ ಇವಿಎಂಎಸ್ ನೀಡಲು ಅವಕಾಶವನ್ನು ನೀಡಲಾಗಿದೆ. 20 ಸೆಕ್ಟರ್ ಆಗಿ ವಿಭಾಗಿಸಿದ್ದು, 3 ಫ್ಲೈಯಿಂಗ್ ಸ್ಕ್ವಾಡ್, 4 ಎಸ್.ಎಸ್.ಟಿ., 4 ವಿಎಸ್ಟಿ, 1 ವಿವಿಟಿ ಜತೆಗೆ ಆರ್ ಪಿಎಫ್, ಸಿಐಎಸ್ಎಫ್, ಹರಿಯಾಣ ಪೊಲೀಸ್ ಮತ್ತು ರಾಜ್ಯ ಪೊಲೀಸರು ಭದ್ರತೆಯನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.