ADVERTISEMENT

ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಸಿಗದಕ್ಕೆ ಕೆಲಸ ಮಾಡದಿರುವುದೇ ಕಾರಣ: ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 9:37 IST
Last Updated 1 ಏಪ್ರಿಲ್ 2024, 9:37 IST
<div class="paragraphs"><p>ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಬಿ.ರಮಾನಾಥ ರೈ ಮಾತನಾಡಿದರು</p></div>

ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಬಿ.ರಮಾನಾಥ ರೈ ಮಾತನಾಡಿದರು

   

ಮಂಗಳೂರು: 'ತನ್ನನ್ನು ನಂಬರ್ ಒನ್ ಸಂಸದ ಎಂದು ಕರೆಸಿಕೊಳ್ಳುತ್ತಿದ್ದ ನಳಿನ್ ಕುಮಾರ್‌ ಕಟೀಲ್‌ ಉತ್ತಮ ಕೆಲಸ ಮಾಡಿದ್ದೇ ಹೌದಾದರೆ ಅವರಿಗೆ ಟಿಕೆಟ್‌ ನಿರಾಕರಿಸಿದ್ದು ಏಕೆ’ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ ಪ್ರಶ್ನಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಜಿಲ್ಲೆಗೆ ಕೇಂದ್ರದಿಂದ ₹ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಬಂದಿದೆ’ ಎಂದು ಹೇಳಿಕೆ ನೀಡಿರುವ ನಳಿನ್‌ ಕುಮಾರ್ ಅವರಿಗೆ ತಿರುಗೇಟು ನೀಡಿದರು.

ADVERTISEMENT

‘ಕಾಂಗ್ರೆಸ್‌ ಬಡವರ, ದುರ್ಬಲ ವರ್ಗದವರ ಪಕ್ಷ. ಜಿಲ್ಲೆಯಲ್ಲಿ ಅಭಿವೃದ್ದಿ ಆಗಿದ್ದರೆ, ಅದಕ್ಕೆ ನಮ್ಮ ಪಕ್ಷದ ಶ್ರೀನಿವಾಸ ಮಲ್ಯ, ಕೆ.ಕೆ. ಶೆಟ್ಟಿ, ರಂಗನಾಥ ಶೆಣೈ, ಟಿ.ಎ.ಪೈ, ಜನಾರ್ದನ ಪೂಜಾರಿಯವರಂಥ ಸಂಸದರು ಕಾರಣ. ಮಲ್ಯರಿಗೆ ಆಪ್ತರಾಗಿದ್ದ ಜವಹರಲಾಲ್‌ ನೆಹರೂ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಬಿಜೆಪಿಯ ಯಾವುದೇ ಸಂಸದರು ಹೇಳಿಕೊಳ್ಳುವ ಅಭಿವೃದ್ಧಿ ಮಾಡಿಲ್ಲ. ಸಂಸದ ನಳಿನ್‌ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನವಿತ್ತು. ಟಿಕೆಟ್‌ ನಿರಾಕರಿಸುವ ಮೂಲಕ ಅವರ ಪಕ್ಷದ ಹೈಕಮಾಂಡ್‌ ಇದನ್ನು ಪುಷ್ಟೀಕರಿಸಿದೆ’ ಎಂದರು.

‘ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಹೆಚ್ಚು ಅವಕಾಶ ನೀಡಿರುವುದೇ ಕಾಂಗ್ರೆಸ್‌. ಬಿಜೆಪಿಯವರು ಕೇವಲ ಮಾತನಾಡುವುದು ಮಾತ್ರ. ಕೋಟಿ–ಚನ್ನಯ ವಂಶದ ಪದ್ಮರಾಜ ಆರ್‌. ಪೂಜಾರಿ ನಮ್ಮ ಪಕ್ಷದದಿಂದ ಟಿಕೆಟ್‌ ಪಡೆದ ಬಿಲ್ಲವ ಸಮಾಜದ 12 ನೇ‌ ಅಭ್ಯರ್ಥಿ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬಿಲ್ಲವರಿಗೆ ಎಷ್ಟು ಅವಕಾಶ ಕೊಟ್ಟಿದೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

3ರಂದು ನಾಮಪತ್ರ: ‘ಪಕ್ಷದ ಅಭ್ಯರ್ಥಿ ಪ‍ದ್ಮರಾಜ್‌ ಅವರು ಇದೇ 3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ಕುದ್ರೋಳಿಯಿಂದ‌ ಎ.ಬಿ.ಶೆಟ್ಟಿ ವೃತ್ತದವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದೇವೆ. ಅಭ್ಯರ್ಥಿಯು ಅಂದು ಚರ್ಚ್ ಹಾಗೂ ಕುದ್ರೋಳಿ‌ಯ ಮಸೀದಿಗೆ ಭೇಟಿ ನೀಡಲಿದ್ದು, ಬಳಿಕ ಮೆರವಣಿಗೆ ಆರಂಭವಾಗಲಿದೆ. ಅಳಕೆ–ನ್ಯೂಚಿತ್ರಾ, ಉಷಾಕಿರಣ್‌ ಹೋಟೆಲ್‌– ರಥಬೀದಿ– ಗಣಪತಿ ಪ್ರೌಢಶಾಲೆ‌– ಪುರಭವನ ಮಾರ್ಗವಾಗಿ ಸಾಗಲಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಪಕ್ಷದ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಪದ್ಮನಾಭ ಕೋಟ್ಯಾನ್,‌ ಜಯಶೀಲ‌ ಅಡ್ಯಂತಾಯ, ರಮಾನಂದ‌ ಪೂಜಾರಿ, ಅಶೋಕ್ ಡಿ.ಕೆ.‌, ಟಿ.ಕೆ.ಸುಧೀರ್, ಮಹಾಬಲ‌ ಮಾರ್ಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.