ADVERTISEMENT

ಮೇ 26: ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2024, 16:23 IST
Last Updated 17 ಮೇ 2024, 16:23 IST

ಬೆಳ್ತಂಗಡಿ: ‘ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯಲ್ಲಿ ಪುಣ್ಯಕೋಟಿಗೆ ಒಂದು ಕೋಟಿ... ಗೋಮಾತೆಗೆ ಕೋಟಿ ನಮನ ಎಂಬ ಕಾರ್ಯಕ್ರಮವು ಮೇ 26 ರಂದು ನಡೆಯಲಿದೆ’ ಎಂದು ಸ್ವಾಮಿ ಶ್ರೀವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.

ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದಗೋಕುಲ ಗೋಶಾಲೆಯು ಸಮಾಜದ ಗೋಶಾಲೆಯಾಗಿದ್ದು, ಅನಾಥ ಮತ್ತು ಅಶಕ್ತ ಸೇರಿದಂತೆ ಸುಮಾರು 250 ಗೋವುಗಳಿವೆ. ಅವುಗಳ ರಕ್ಷಣೆ ಮತ್ತು ಅವುಗಳ ಬದುಕಿಗೆ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇಲ್ಲಿನ ಗೋವುಗಳ ಆರೈಕೆಗೆ ಕೂಲಿ ವೇತನ, ಮೇವು ಸೇರಿ ತಿಂಗಳಿಗೆ ₹ 2 ಲಕ್ಷ ವೆಚ್ಚವಾಗುತ್ತಿದೆ’ ಎಂದರು.

‘ಸಂಪನ್ಮೂಲ ಸಂಗ್ರಹಕ್ಕಾಗಿ ತಾಲ್ಲೂಕಿನ ಹಿರಿಯ ಉದ್ಯಮಿ, ದಾನಿ ಶಶಿಧರ್ ಶೆಟ್ಟಿ ಬರೋಡ ಅವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಗ್ರಾಸ ಸಹಿತ ಯಾವುದೇ ರೂಪದಲ್ಲಿ ದೇಣಿಗೆ ನೀಡಬಹುದು’ ಎಂದರು.

ADVERTISEMENT

ನಾಳೆ ಹೊರೆಕಾಣಿಕೆ‌ ಮೆರವಣಿಗೆ: ದೀಪೋತ್ಸವ ಸಂಚಾಲನಾ ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್ ಶಟ್ಟಿ ಗುರುವಾಯನಕೆರೆ ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನ ಎಲ್ಲ ಗ್ರಾಮಗಳಿಂದಲೂ ಗೋಗ್ರಾಸ, ಒಣಹುಲ್ಲು, ಪಶು ಆಹಾರ, ಅಕ್ಕಿ, ಕೃಷಿ ಉತ್ಪನ್ನ, ಅಡಿಕೆ, ತೆಂಗಿನಕಾಯಿ, ಅಕ್ಕಿಯ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಮೇ 19ರಂದು ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಎಪಿಎಂಸಿ ವಠಾರದಿಂದ ಕಳೆಂಜ ಗೋಶಾಲೆಗೆ ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.

ಮೇ 26ರಂದು ಸಂಜೆ 4 ಗಂಟೆಗೆ ಕಳೆಂಜ ಕಾಯರ್ತಡ್ಕ ನಂದಗೋಕುಲ ಗೋಶಾಲೆಯ ಕಾಮಧೇನು ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. 6.30ಕ್ಕೆ ಸಾಮೂಹಿಕ ಗೋಪೂಜೆ, ಸಾವಿರಾರು ಹಣತೆಗಳ ಗೋನಂದಾರತಿ ಮತ್ತು ದೀಪೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.