ಮಂಗಳೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟವು 50 ವಿವಿಧ ಶ್ರೇಣಿಗಳ ನಂದಿನಿ ಐಸ್‌ಕ್ರೀಮ್‌ಗಳನ್ನು ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ.
ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ‘ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದಲೇ ಐಸ್‌ಕ್ರೀಂ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ನಮ್ಮ ಕನಸಾಗಿತ್ತು. ಕರ್ನಾಟಕ ಹಾಲು ಮಹಾಮಂಡಳವು ದಕ್ಷಿಣ ಕನ್ನಡ ಹಾಲು ಒಕ್ಕೂಟವನ್ನು ಐಸ್‌ಕ್ರೀಂ ಮಾರಾಟಕ್ಕೆ ಪ್ರಧಾನ ವಿತರಕ (ಸೂಪರ್ ಸ್ಟಾಕಿಸ್ಟ್) ಆಗಿ ಪರಿಗಣಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ 152 ಶ್ರೇಣಿಯ ಐಸ್‌ಕ್ರೀಂಗಳನ್ನು ಪರಿಚಯಿಸಲಿದ್ದು ಆರಂಭದಲ್ಲಿ 50 ಶ್ರೇಣಿಗಳ ಐಸ್‌ಕ್ರೀಂಗಳನ್ನು ಮಾರಾಟ ಮಾಡಲಿದ್ದೇವೆ. ಹಾಲಿನಿಂದ ತಯಾರಿಸಿದ ಸಂಪೂರ್ಣ ನೈಸರ್ಗಿಕ ಮತ್ತು ದೇಸೀ ಐಸ್‌ಕ್ರೀಮ್ ಜನರಿಗೆ ಕೈಗೆಟಕುವ ದರದಲ್ಲಿ ಲಭ್ಯ’ ಎಂದರು.
‘ಇಲ್ಲಿನ ಐಸ್‌ಕ್ರೀಂ ಮಾರುಕಟ್ಟೆ ಪೈಪೋಟಿಯಿಂದ ಕೂಡಿದೆ. ನಂದಿನಿ ಐಸ್‌ಕ್ರೀಂ ಗುಣಮಟ್ಟವನ್ನು ಕಾಪಾಡಲು ಮಹತ್ವ ನೀಡುತ್ತೇವೆ. ಇದಕ್ಕೆ ಉತ್ತಮ ಬೇಡಿಕೆ ಸಿಗುವ ನಿರೀಕ್ಷೆ ಇದೆ. ಇದಕ್ಕಾಗಿ ಉತ್ತಮ ಶೀತಲೀಕರಣ ಘಟಕವನ್ನು ಹೊಂದಿದ್ದೇವೆ. ನಂದಿನಿ ಉತ್ಪನ್ನಗಳಲ್ಲಿ ಶೇ. 85ರಷ್ಟು ಪಾಲು ಹಾಲು ಉತ್ಪಾದಕರಿಗೆ ಸಿಗಲಿದೆ’ ಎಂದರು.
ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಕಾಪು ದಿವಾಕರ್ ಶೆಟ್ಟಿ, ‘ಮಹಾಮಂಡಲವು ಸೀತಾಫಲ, ಅಂಜೂರ, ಬಟರ್‌ಸ್ಕಾಚ್ ಸಹಿತ ವಿವಿಧ ಐಸ್‌ಕ್ರೀಂಗಳನ್ನು ಪರಿಚಯಿಸಿದೆ’ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೆಶಕ ಡಿ.ವಿವೇಕ್, ‘ಮೊದಲ ದಿನವೇ 55 ಸಾವಿರ ಲೀಟರ್ ಐಸ್‌ಕ್ರೀಂಗೆ ಬೇಡಿಕೆ ಬಂದಿದೆ/ ಐಸ್‌ಕ್ರೀಮ್ ದಾಸ್ತಾನು ಮಾಡಲು 300 ಲೀ ಸಾಮರ್ಥ್ಯದ 40 ಶೀತಲೀಕರಣಯಂತ್ರಗಳ ಸೌಲಭ್ಯವನ್ನು ಒಕ್ಕೂಟವು ಹೊಂದಿದೆ. ಬೇಡಿಕೆಗೆ ಅನುಗುಣವಾಗಿ ಐಸ್ ಕ್ರೀಂ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದರು.
ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ ಉಡುಪ, ಒಕ್ಕೂಟದ ನಿರ್ದೇಶಕರಾದ ಸವಿತಾ ಶೆಟ್ಟಿ, ಸುಭದ್ರಾ ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.