ಮಂಗಳೂರು: ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಇದಾಗಿ ತಿಂಗಳಾದರೂ ಅದರ ಅನುಷ್ಠಾನಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉತ್ತರಿಸಿದೆ.
ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ನಾರಾಯಣ ಗುರು ಅಭಿವೃದ್ಧಿ ನಿಗಮದ ನೋಂದಾಯಿತ (ರಿಜಿಸ್ಟ್ರೇಷನ್ ) ಪ್ರಮಾಣಪತ್ರದ ಪ್ರತಿ, ಆರ್ಟಿಕಲ್ ಆನ್ ಅಸೋಸಿಯೇಷನ್, ಮೆಮೊರಾಂಡಮ್ ಆಫ್ ಅಸೋಸಿಯೇಷನ್, ಷೇರು ಬಂಡವಾಳದ ವಿವರ ಹಾಗೂ ನಿರ್ದೇಶಕರ ವಿವರಗಳ ಬಗ್ಗೆ ಮಂಜುನಾಥ್ ಅವರು ಮಾಹಿತಿ ಹಕ್ಕಿನಡಿ ವಿವರಗಳನ್ನು ಕೋರಿದ್ದರು. ನಿಗಮದ ಪ್ರಧಾನ ಕಚೇರಿಯ ವಿವರ ಹಾಗೂ ನಿಗಮಕ್ಕೆ ಈವರೆಗೆ ನೀಡಿರುವ ಹಾಗೂ ನೀಡಲು ಉದ್ದೇಶಿಸಿರುವ ಅನುದಾನದ ವಿವರಗಳ ಕುರಿತೂ ಮಾಹಿತಿ ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, ‘ನಾರಾಯಣಗುರು ಅಭಿವೃದ್ಧಿ ನಿಗಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸ್ಥಾಪನಾ ಆದೇಶವನ್ನು ಹೊರಡಿಸಲಾಗಿದೆ. ಉಳಿದಂತೆ ತಾವು ಕೋರಿರುವ ಮಾಹಿತಿಯ ಅಂಶಗಳ ಮೇಲೆ ಇನ್ನಷ್ಟೇ ಕ್ರಮವಹಿಸಬೇಕಿದೆ’ ಎಂದು ಹಿಂಬರಹ ನೀಡಿದ್ದಾರೆ.
ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯು 2023ರ ಫೆ. 20ರಂದು ಆದೇಶ ಮಾಡಿತ್ತು. ಪ್ರವರ್ಗ 2ಎ ಅಡಿಯಲ್ಲಿರುವ ಈಡಿಗ–ಬಿಲ್ಲವ ಸೇರಿದಂತೆ 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಈ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.