ಮಂಗಳೂರು: ‘ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ನಾರಾಯಣ ಗುರು ಅವರ ಕುರಿತ ಪಾಠವನ್ನು ಕೈಬಿಟ್ಟಿದ್ದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸಿದಾಗ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ಅವರು ‘ಕಾಂಗ್ರೆಸ್ ಸುಳ್ಳು ಹೇಳುತ್ತಿದೆ’ ಎಂದು ಆರೋಪಿಸಿದ್ದರು. ಈಗ ಈ ವಿಚಾರವನ್ನು ಸರ್ಕಾರವೇ ಒಪ್ಪಿದ್ದು, ನೈಜ ವಿಚಾರ ಬಯಲಾಗಿದೆ. ಸುಳ್ಳು ಹೇಳಿದ ಸಚಿವರು ಜನರಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ನಾರಾಯಣ ಗುರು ಅವರ ಪಠ್ಯ ಕೈಬಿಟ್ಟಿದ್ದಕ್ಕೆ ಜಿಲ್ಲೆಯಾದ್ಯಂತ ನಡೆದ ಹೋರಾಟವನ್ನು ದಾರಿ ತಪ್ಪಿಸುವ ಯತ್ನವನ್ನು ಇಬ್ಬರು ಸಚಿವರು ಹಾಗೂ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ಮಾಡಿದ್ದಾರೆ. ಈ ವಿಚಾರದಲ್ಲಿ ಪ್ರತಿರೋಧ ಹೆಚ್ಚಿದ್ದರಿಂದ ಬೇರೆ ವಿಧಿ ಇಲ್ಲದೇ ಪಠ್ಯವನ್ನು ಮತ್ತೆ ಸೇರ್ಪಡೆ ಮಾಡಲು ಸರ್ಕಾರ ಒಪ್ಪಿದೆ. ನೈತಿಕತೆ ಇದ್ದರೆ ಅವರು ಜನರಲ್ಲಿ ಕ್ಷಮೆ ಕೇಳುತ್ತಾರೆ’ ಎಂದರು.
‘ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಯ್ಯಾರ ಕಿಂಞಣ್ಣ ರೈ ಅವರಿಗೂ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯಿಂದ ಅನ್ಯಾಯ ಆಗಿದೆ. ಮಂಜೇಶ್ವರ ಗೋವಿಂದ ಪೈ ಅವರ ಕುರಿತ ಪಠ್ಯ ಸೇರ್ಪಡೆಗೆ ನಮ್ಮ ವಿರೋಧ ಇಲ್ಲ. ಅವರು ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಆದರೆ, ಕಯ್ಯಾರ ಅವರ ಪಠ್ಯ ಮತ್ತೆ ಸೇರ್ಪಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
‘ಬಿಜೆಪಿ ಅಭಿವೃದ್ಧಿ ವಿಚಾರವೊಂದನ್ನು ಬಿಟ್ಟು ಜನರಲ್ಲಿ ದ್ವೇಷ ಬೀಜ ಬಿತ್ತುವ ಮೂಲಕ ಕೀಳು ರಾಜಕಾರಣ ಮಾಡುತ್ತಿದೆ. ವಿಪರೀತ ಮಳೆಯಿಂದ ದಕ್ಷಿಣ ಜಿಲ್ಲೆಯಾದ್ಯಂತ ಅನೇಕ ಕಡೆ ಮನೆಗಳು ಕುಸಿದಿವೆ. ರಸ್ತೆಗಳು ಹದಗೆಟ್ಟಿವೆ. ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ಉಲ್ಬಣಗೊಂಡಿದೆ. ಪರಿಹಾರ ಕಾರ್ಯಕ್ಕೆ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಮಳೆಯಿಂದ ಹಾನಿಗೊಳಾದ ಪ್ರದೇಶಗಳ ಪರಿವೀಕ್ಷಣೆಗೆ ಜಿಲ್ಲಾ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಲ್ಕಿ– ಮೂಡುಬಿದಿರೆ ಕ್ಷೇತ್ರದ ಪಕ್ಷಿಕೆರೆ, ಕೊಯ್ಯೊಡೆಯಲ್ಲಿ ಬೆಳೆ ಹಾನಿಗೊಂಡ ಹಾಗೂ ನಂದಿನಿ ನದಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಅವರ ಪ್ರವಾಸದ ಪಟ್ಟಿಯಲ್ಲೂ ಈ ಕಾರ್ಯಕ್ರಮ ಇತ್ತು. ಆದರೆ, ಈ ಪ್ರದೇಶಗಳಿಗೆ ಮುಖ್ಯಮಂತ್ರಿಯವರು ಭೇಟಿ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ಮೂಲ್ಕಿ–ಮೂಡುಬಿದಿರೆ ಕ್ಷೇತ್ರದ ಜನರಿಗೆ ನೋವಾಗಿದೆ’ ಎಂದರು.
ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಪ್ರವೀಣಚಂದ್ರ ಆಳ್ವ, ಅನಿಲ್ ಕುಮಾರ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಹಾಗೂ ನಜೀರ್ ಬಜಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.