ADVERTISEMENT

ನವರಾತ್ರಿ ಉತ್ಸವ: ಕಳೆಗಟ್ಟಿದೆ ನಗರದ ಅಧಿದೇವತೆಯ ದೇಗುಲ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 7:54 IST
Last Updated 4 ಅಕ್ಟೋಬರ್ 2024, 7:54 IST
ಮಂಗಳಾದೇವಿ ದೇವಸ್ಥಾನಕ್ಕೆ ಶ್ರೀಮಂಗಳಾದೇವಿ ಸೇವಾ ಸಮಿತಿ ವತಿಯಿಂದ ರಜತ ಹಸ್ತವನ್ನು ಗುರುವಾರ ಸಮರ್ಪಿಸಲಾಯಿತು. ನೀಲೇಶ್ವರ ಪದ್ಮನಾಭ ತಂತ್ರಿ, ಸಮಿತಿಯ ಅಧ್ಯಕ್ಷ ದಿಲ್‌ರಾಜ್ ಆಳ್ವ ಮತ್ತಿತರರು ಭಾಗವಹಿಸಿದ್ದರು
ಮಂಗಳಾದೇವಿ ದೇವಸ್ಥಾನಕ್ಕೆ ಶ್ರೀಮಂಗಳಾದೇವಿ ಸೇವಾ ಸಮಿತಿ ವತಿಯಿಂದ ರಜತ ಹಸ್ತವನ್ನು ಗುರುವಾರ ಸಮರ್ಪಿಸಲಾಯಿತು. ನೀಲೇಶ್ವರ ಪದ್ಮನಾಭ ತಂತ್ರಿ, ಸಮಿತಿಯ ಅಧ್ಯಕ್ಷ ದಿಲ್‌ರಾಜ್ ಆಳ್ವ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ನಗರದ ಅಧಿದೇವತೆ ಶ್ರೀ ಮಂಗಳಾದೇವಿ ದೇವಸ್ಥಾನವು ನವರಾತ್ರಿ ಉತ್ಸವದ ಸಲುವಾಗಿ ಕಳೆಗಟ್ಟಿದೆ. ಇಲ್ಲಿ ನವರಾತ್ರಿ ಉತ್ಸವಕ್ಕೆ ಗುರುವಾರ ಗಣಪತಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.

ದೇವಸ್ಥಾನದ ಸೇವೆಯನ್ನೇ ಮೂಲ ಧ್ಯೆಯವನ್ನಾಗಿಸಿಕೊಂಡಿರುವ ಶ್ರೀಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ನವರಾತ್ರಿಯ ಪರ್ವಕಾಲದಲ್ಲಿ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿಯವರ ಸಮ್ಮುಖದಲ್ಲಿ ರಜತ ಹಸ್ತಗಳನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ದೇವಸ್ಥಾನದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೇವಾ ಸಮಿತಿಯು ಕ್ಷೇತ್ರದ ನವರಾತ್ರಿ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ಸೇರಿದಂತೆ ಎಲ್ಲಾ ಅನ್ನ ಸಂತರ್ಪಣೆಯಲ್ಲೂ ಸಹಕರಿಸುತ್ತಾ ಬಂದಿದೆ. ಸಂದರ್ಭನುಸಾರವಾಗಿ ಕ್ಷೇತ್ರದ ಅನುಕೂಲಕ್ಕಾಗಿ ಸದಾ ತನ್ನಿಂದಾಗುವ ಸೇವೆಯನ್ನು ಅರ್ಪಿಸುತ್ತಿದೆ.

ADVERTISEMENT

‘ಸಮಿತಿಯು ಅನೇಕ ವರ್ಷಗಳಿಂದ ತಾಯಿಯ ಸೇವೆಯಲ್ಲಿ ಪಾಲ್ಗೊಳ್ಳುತ್ತಿದೆ. ಈ ವರ್ಷ ವಿಶೇಷವಾಗಿ ರಜತ ಹಸ್ತವನ್ನು ಸಮರ್ಪಿಸಿದ್ದೇವೆ. ‌ಇದೇ 13ರಂದು ವಿಜಯ ದಶಮಿ ಪ್ರಯುಕ್ತ ಸಮಿತಿಯ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ’ ಎಂದು ಸಮಿತಿಯ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದರು.

ಸದಸ್ಯರಾದ ಎ. ಸೀತಾರಾಮ, ಬಿ.ಅಶೋಕ್ ಕುಮಾರ್, ಕೇಶವ, ತುಕಾರಾಮ, ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಖಜಾಂಚಿ ವಿಶ್ವನಾಥ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು ಭಾಗವಹಿಸಿದ್ದರು.

ಈ ವರ್ಷ ನವರಾತ್ರಿ ಪ್ರಯುಕ್ತ ಇದೇ 8ರಂದು (ಮಂಗಳವಾರ) ಲಲಿತಾ ಪಂಚಮಿ, ಇದೇ 9ರಂದು (ಬುಧವಾರ) ಬಲಿ ಉತ್ಸವ ನೆರವೇರಲಿದೆ. ಇದೇ 12ರಂದು (ಶನಿವಾರ) ಮಹಾನವಮಿ, ಚಂಡಿಕಾಹೋಮ, ರಾತ್ರಿ ದೊಡ್ಡರಂಗಪೂಜೆ ಹಾಗೂ ಸಣ್ಣ ರಥೋತ್ಸವಗಳು ನಡೆಯಲಿವೆ.

ಇದೇ 13ರಂದು (ಭಾನುವಾರ) ಬೆಳಿಗ್ಗೆ 9.30ರಿಂದ ವಿದ್ಯಾರಂಭ, ತುಲಾಭಾರ, ಮಧ್ಯಾಹ್ನ 12.30ಕ್ಕೆ ರಥಾರೋಹಣ, ಸಂಜೆ 7ರಿಂದ ರಥೋತ್ಸವಗಳು ಜರುಗಲಿವೆ. ಇದೇ 14ರಂದು (ಮಂಗಳವಾರ) ಅವಭೃತ ಮಂಗಳ ಸ್ನಾನ, 15ರಂದು ಸಂಪ್ರೋಕ್ಷಣೆ, ಸಂಜೆ 6.30ರಿಂದ ಸತ್ಯನಾರಾಯಣ ಪೂಜೆ ನೆರವೇರಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ. 

ಸೀರೆ ಏಲಂ: ಇಲ್ಲಿ ಇದೇ 4 ರಿಂದ 6ರವರೆಗೆ ಪ್ರತಿ ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸೀರೆಗಳ ಏಲಂ ನಡೆಯುತ್ತದೆ.  

ಬಗೆ ಬಗೆಯ ಅಲಂಕಾರ

ಮಂಗಳಾದೇವಿಗೆ ನವರಾತ್ರಿ ಸಂದರ್ಭದಲ್ಲಿ ಹಲ ಬಗೆಯ ಅಲಂಕಾರಗಳನ್ನು ಮಾಡಲಾಗುತ್ತದೆ. ಮೊದಲ ದಿನ ದುರ್ಗಾದೇವಿಯ ಅಲಂಕಾರ (ಕೆಂಪು ಸೀರೆ ಎರಡನ ದಿನ ಆರ್ಯಾ ದೇವಿ (ಆಕಾಶನೀಲಿ ಬಣ್ಣದ ಸೀರೆ) ಮೂರು ಮತ್ತು ನಾಲ್ಕದೇ ದಿನ ಭಗವತಿ (ಕೇಸರಿ ಚೌಕುಳಿ ಸೀರೆ) ಐದನೇ ದಿನ ಕುಮಾರಿ (ತಿಳಿ ಹಳದಿ ನೀಲ ಸೀರೆ) ಆರನೇ ದಿನ ಅಂಬಿಕೆ (ಕಡು ಹಸಿರು ಸೀರೆ) ಏಳನೇದಿನ ಮಹಿಷಮರ್ದಿನಿ (ಕುಂಕುಮ ಕೆಂಪು ಬಣ್ಣದ ಸೀರೆ) ಎಂಟನೇ ದಿನ ಚಂಡಿಕೆ ಒಂಬತ್ತನೇ ದಿನ ಸರಸ್ವತಿ (ಬಿಳಿ ಬಣ್ಣದ ಸೀರೆ) ಹತ್ತನೇ ದಿನ ವಾಗೇಶ್ವರಿ (ಮೆರೂನ್‌ ಬಣ್ಣದ ಸೀರೆ) ಹಾಗೂ ವಿಜಯ ದಶಮಿಯಂದು ನೇರಳೆ ಬಣ್ಣದ ಸೀರೆ ತೊಡಿಸಿ ಅಲಂಕರಿಸಲಾಗುತ್ತದೆ. ತೆನೆ ಉತ್ಸವ: ವಿಜಯ ದಶಮಿ ದಿನ ಇಲ್ಲಿ ತೆನೆ ಉತ್ಸವ ನಡೆಯುತ್ತದೆ. ದೇವಿಗೆ ತೆನೆ ಒಪ್ಪಿಸಿ ಅದನ್ನು ಭಕ್ತರು ಮನೆ ತುಂಬಿಸುವುದು ಇಲ್ಲಿನ ವಾಡಿಕೆ. ಅಂದು ಇಲ್ಲಿ ಅಕ್ಷರಾಭ್ಯಾಸ ಆರಂಭಿಸುವ ಸಂಪ್ರದಾಯವೂ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.