ADVERTISEMENT

ಮಂಗಳೂರು: ಮಾದಕ ಪದಾರ್ಥ ಪ್ರಕರಣ– ಗಡಿಭಾಗದಲ್ಲೇ ಜಾಸ್ತಿ

ಮೋಹನ್ ಕುತ್ತಾರ್
Published 22 ನವೆಂಬರ್ 2023, 5:58 IST
Last Updated 22 ನವೆಂಬರ್ 2023, 5:58 IST
<div class="paragraphs"><p> ಮಾದಕ ವಸ್ತು</p></div>

ಮಾದಕ ವಸ್ತು

   

ಉಳ್ಳಾಲ: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಒಂದು ವಾರದ ಈಚೆ ಮಾದಕ ಪದಾರ್ಥಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಅಡಿ ದಾಖಲಾದ 42 ಪ್ರಕರಣಗಳಲ್ಲಿ 21 ಪ್ರಕರಣಗಳು ಉಳ್ಳಾಲ ತಾಲ್ಲೂಕಿನ ಕೊಣಾಜೆ ಹಾಗೂ ಉಳ್ಳಾಲ ಠಾಣೆಗಳಲ್ಲೇ ದಾಖಲಾಗಿವೆ.

ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾದಕ ಪದಾರ್ಥ ಮಾರಾಟ ಮತ್ತು ಸೇವನೆ ತಡೆಯಲು ವಿಶೇಷ ತಂಡಗಳು ಎರಡು ವಾರಗಳಿಂದ ಕಾರ್ಯಾಚರಿಸುತ್ತಿವೆ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಾಯಕ ಪೊಲೀಸ್ ಕಮಿಷನರ್‌ ಧನ್ಯಾ ನಾಯಕ್ ನೇತೃತ್ವದ ತಂಡದಲ್ಲಿ ಕೊಣಾಜೆ ಎಸ್.ಐ ಪುನೀತ್ ಗಾಂವ್ಕರ್ ಹಾಗೂ ಸಿಬ್ಬಂದಿ ಮಹೇಶ್, ಶಾಜು. ಅಕ್ಬರ್, ಶಿವುಕುಮಾರ್, ತಿರುಮಲೇಶ್ ಇದ್ದಾರೆ. ಈ ತಂಡವು ಮಾದಕ ಪದಾರ್ಥ ಸೇವನೆಯ  ಶಂಕೆಯಿಂದ ಒಟ್ಟು 62 ಮಂದಿಯನ್ನು ಎರಡು ವಾರಗಳಲ್ಲಿ ತಪಾಸಣೆಗೆ ಒಳಪಡಿಸಿತ್ತು. ಅವರಲ್ಲಿ 21 ಮಂದಿ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದ್ದು, ಅವರೆಲ್ಲರ ವಿರುದ್ಧವೂ ಪೊಲೀಸರು ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಆರೋಪಿಗಳಲ್ಲಿ ಬಹುತೇಕರು ಕೇರಳದ ವಿದ್ಯಾರ್ಥಿಗಳು ಎಂಬುದು ವಿಶೇಷ. ಅವರೆಲ್ಲರೂ ತಾಲ್ಲೂಕಿನ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ADVERTISEMENT

ಕೇರಳ ಗಡಿಭಾಗದಲ್ಲಿ ವ್ಯಾಪಕ: ಮಾದಕ ಪದಾರ್ಥ ಸೇವಿಸಿದವರನ್ನು ಕರ್ನಾಟಕ-ಕೇರಳ ಗಡಿ ಪ್ರದೇಶಗಳಾದ ನೆತ್ತಿಲಪದವು, ಮುಡಿಪು, ದೇರಳಕಟ್ಟೆ, ಕೆ.ಸಿ ರೋಡ್‌, ತಲಪಾಡಿ, ಸೋಮೇಶ್ವರ ಕಿನಾರೆ ಪ್ರದೇಶಗಳಲ್ಲಿ ಬಂಧಿಸಲಾಗಿದೆ. ನಿರ್ಜನ ಪ್ರದೇಶಗಳಲ್ಲಿದ್ದವರು, ರಾತ್ರಿ ಹೊತ್ತಿನಲ್ಲಿ ಸುತ್ತಾಡುತ್ತಿದ್ದವರು, ನೋಂದಣಿ ಸಂಖ್ಯೆಯಿಲ್ಲದ ಬೈಕ್‌ಗಳಲ್ಲಿ ತಿರುಗಾಡುತ್ತಿದ್ದವರು, ನಶೆಯಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. 

ಕೇರಳದ ಉಪ್ಪಳ ಪ್ರದೇಶದಿಂದಲೇ ಮಾದಕ ಪದಾರ್ಥಗಳು ಪೂರೈಕೆ ಆಗುತ್ತಿರುವ ಅಂಶವೂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

‘ಈ ಹಿಂದೆ ಗಾಂಜಾ, ಎಂಡಿಎಂಎ ಮಾರಾಟ ಮಾಡುತ್ತಿದ್ದವರು ಬಂಧನಕ್ಕೊಳಗಾಗುತ್ತಿದ್ದರು.  ಮಾದಕ ದ್ರವ್ಯ ಮಾರಾಟದ ಮೇಲೆ ಕರ್ನಾಟಕದ ಪೊಲೀಸರು ಹದ್ದಿನ ಕಣ್ಣಿಡಲು ಆರಂಭಿಸಿದ ಬಳಿಕ  ಈ ದಂಧೆಯಲ್ಲಿ ತೊಡಗಿದವರು ಕೇರಳ ಭಾಗಕ್ಕೆ ವಿದ್ಯಾರ್ಥಿಗಳನ್ನು ಕರೆಸಿ, ಅಲ್ಲೇ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದಾರೆ. ಉಪ್ಪಳಕ್ಕೆ ತೆರಳಿ ಮಾದಕ ಪದಾರ್ಥ ಸೇವಿಸಿ ಮರಳುತ್ತಿದ್ದ ಅನೇಕರು ಗಡಿಪ್ರದೇಶದಲ್ಲಿ ತಪಾಸಣೆ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಗಾಂಜಾವನ್ನು ₹100, ₹ 200ಕ್ಕೂ ಅಲ್ಲಿ ಮಾರಾಟ ಮಾಡಲಾಗುತ್ತಿದೆ. ವ್ಯಸನಿಗಳು ಸಿಗರೇಟು, ಬೀಡಿಯೊಳಕ್ಕೆ ಅದನ್ನು ತುರುಕಿಸಿ ಅದನ್ನು ಸೇದುತ್ತಾರೆ. ಎಂಡಿಎಂಎಗಳನ್ನು ಕಾರ್ಡ್ ಹಾಗೂ ನೋಟುಗಳ ಮೂಲಕ ಸೇವಿಸುತ್ತಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮಾದಕ ಪದಾರ್ಥ ಸೇವನೆ ಆರೋಪದ ಮೇಲೆ ಬಂಧನಕ್ಕೊಳಗಾದ ವಿದ್ಯಾರ್ಥಿಗಳಿಗೆ ಠಾಣೆಗಳಲ್ಲೇ ಜಾಮೀನು ನೀಡಲಾಗುತ್ತಿದೆ. ಆದರೆ, ಅದಕ್ಕೂ ಮುನ್ನ ಅವರು ಕಲಿಯುತ್ತಿರುವ ಶಿಕ್ಷಣ ಸಂಸ್ಥೆಯ ಪ್ರಮುಖರನ್ನು ಹಾಗೂ ಪೋಷಕರನ್ನು ಕರೆಸಿ ಅವರು ದುಶ್ಚಟಕ್ಕೆ ಬಲಿಯಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಮತ್ತೆ ಈ ರೀತಿ ಆಗದಂತೆ ಕ್ರಮವಹಿಸುವಂತೆ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.