ಮಂಗಳೂರು: ‘ನೇಹದ ನೆಯ್ಗೆ’ಯ ಉದ್ದೇಶ ಪ್ರತಿರೋಧವಲ್ಲ. ಸಮುದ್ರದ ತಟದಲ್ಲಿ ನಡೆದ ಈ ರಂಗೋತ್ಸವ ಸಾಗರದಂತಹ ವೈಶಾಲ್ಯವನ್ನು ಬೆಳೆಸಿಕೊಳ್ಳುವ ಸಂದೇಶ ಸಾರಬೇಕಿದೆ. ಪ್ರತಿಯೊಬ್ಬರೂ ದೊಡ್ಡ ಮರವಾಗಿ ಬೆಳೆಯಬಲ್ಲ ಅದ್ಭುತ ಬೀಜಗಳೇ. ಅದಕ್ಕೆ ಭೂಮಿಯನ್ನು ಹಸನುಗೊಳಿಸಬೇಕಿದೆ’ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
‘ನಿರ್ದಿಗಂತ’ ತಂಡವು ಮಂಗಳೂರಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಹಮ್ಮಿಕೊಂಡಿರುವ 'ನೇಹದ ನೆಯ್ಗೆ' ರಂಗೋತ್ಸವದ ‘ರಂಗಭೂಮಿಯ ವರ್ತಮಾನ’ ಮಾತುಕತೆಯಲ್ಲಿ ಅವರು ಸೋಮವಾರ ಅಭಿಪ್ರಾಯ ಹಂಚಿಕೊಂಡರು.
‘ದ್ವೀಪಗಳಂತಾಗಿರುವ ರಂಗ ತಂಡಗಳನ್ನು ಒಗ್ಗೂಡಿಸುವ, ಯುವಪೀಳಿಗೆಯ ಆಲೋಚನೆಗಳಿಗೆ ಕಾವು ಕೊಟ್ಟು ಪೋಷಿಸುವ ಆಶಯ ನಮ್ಮದು. ಕರ್ನಾಟಕ ಎಲ್ಲ ರಂಗ ತಂಡಗಳು ನೇಹದ ನೆಯ್ಗೆಯೊಳಗೆ ಬರಬೇಕು. ರಂಗಭೂಮಿಯನ್ನು ಕಾಡುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ಈ ರೀತಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವಿಕೆಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ರಂಗೋತ್ಸವ ಯಶಸ್ವಿಯಾಗಿದೆ’ ಎಂದರು.
‘ನಿರ್ದಿಗಂತವು ತಂಡ ಅಥವಾ ರಂಗಶಾಲೆ ಅಲ್ಲ. ರಂಗತಂಡಗಳೆಲ್ಲ ತಮ್ಮ ತಮ್ಮ ಅಸ್ತಿತ್ವ ಉಳಿಸಿಕೊಂಡೇ ಒಗ್ಗೂಡಿ ರಂಗಭೂಮಿಯನ್ನು ಕಟ್ಟಬೇಕು. ಸರ್ಕಾರದ ಅಥವಾ ಯಾರ ಕೃಪಾಪೋಷಣೆಯ ಅಗತ್ಯವೂ ಇಲ್ಲದೇ ತಮ್ಮ ತಮ್ಮ ಬಲಗಳನ್ನು ಬಳಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಗಳಿಸಿಕೊಳ್ಳಬೇಕು. ಈ ಉದ್ದೇಶದಿಂದ ಹುಟ್ಟಿಕೊಂಡಿದ್ದೇ ನಿರ್ದಿಗಂತ’ ಎಂದರು.
‘ದೊಡ್ಡ ಸಾಹಿತ್ಯ ಉತ್ಸವ ಮಾಡುವ ಕನಸಿದೆ. ಅದಕ್ಕೂ ಮುನ್ನ ಒಂದೆರಡು ಸಣ್ಣ ಉತ್ಸವಗಳನ್ನು ಹಮ್ಮಿಕೊಳ್ಳಬೇಕಿತ್ತು. ಇಂತಹ ಪ್ರಯೋಗ ಮಂಗಳೂರಿನಲ್ಲೇ ಆಗಬೇಕಿತ್ತು. ಬೆಂಗಳೂರು ಅಥವಾ ಮೈಸೂರಿನಂತಹ ನಗರಗಳಿಗ ಅದರ ಪ್ರಸ್ತುತತೆ ಇಲ್ಲ. ಇಲ್ಲಿನ ರಂಗೋತ್ಸವ ಯಶಸ್ವಿಯಾಗುವ ಬಗ್ಗೆ ಅನುಮಾನಗಳಿದ್ದವು. ನಿಮ್ಮೆಲ್ಲರ ಪ್ರೀತಿಯಿಂದ ನಿರೀಕ್ಷೆಗೂ ಮೀರಿ ಈ ರಂಗೋತ್ಸವ ಯಶಸ್ವಿಯಾಗಿದೆ. ನಿಮ್ಮೆಲ್ಲರ ಸಂಭ್ರಮ ನೂರಾನೆ ಬಲ ತಂದುಕೊಟ್ಟಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.