ಉಪ್ಪಿನಂಗಡಿ: ಪ್ರತಿ ವರ್ಷ ಜುಲೈ, ಆಗಸ್ಟ್, ಸೆಪ್ಟಂಬರ್ ತಿಂಗಳಿನಲ್ಲಿ ಸಮೃದ್ಧವಾಗಿ ತುಂಬಿ ಹರಿಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಮಳೆಯ ಕೊರತೆಯಿಂದ ಈ ಬಾರಿ ಸೊರಗಿವೆ. ಆಗಸ್ಟ್ ತಿಂಗಳು ಮುಗಿಯುವ ಮೊದಲೇ ಈ ನದಿಗಳು ಬರಿದಾಗುವತ್ತ ಸಾಗಿವೆ.
ಕಳೆದ ಬೇಸಿಗೆಯಲ್ಲಿ ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ನದಿ ಸಂಪೂರ್ಣ ಬತ್ತಿತ್ತು. ಹೀಗಾಗಿ ಜಲಚರ, ಪ್ರಾಣಿ–ಪಕ್ಷಿಗಳಿಗೆ ಮತ್ತು ಸಮೀಪವಾಸಿಗಳ ಕುಡಿಯುವ ನೀರಿಗೆ ತಾತ್ವಾರವಾಗಿತ್ತು. ಈ ಬಾರಿ ಮುಂಗಾರು ತಡವಾಗಿ ಆರಂಭವಾದ ಕಾರಣ ಜುಲೈ ತಿಂಗಳ ಮೂರನೇ ತಾರೀಕಿನ ನಂತರವಷ್ಟೆ ನದಿಯಲ್ಲಿ ನೀರು ಹರಿಯಲಾರಂಭಿಸಿತ್ತು. ಜುಲೈ 23ರಿಂದ ಮೂರು ದಿನ ಮಾತ್ರ ನದಿಗಳು ಮೈದುಂಬಿ ಹರಿದಿದ್ದವು. ಬಳಿಕ ನೀರು ಕಡಿಮೆಯಾಗುತ್ತಲೇ ಸಾಗಿತ್ತು. ಈಗ ಮರಳು ಕಾಣುವಂತಾಗಿದೆ.
2022ರ ಜೂನ್ ತಿಂಗಳಲ್ಲಿ ಉಪ್ಪಿನಂಗಡಿಯಲ್ಲಿ 455.4 ಮಿ.ಮೀ ಮಳೆಯಾಗಿದ್ದರೆ, 2023ರ ಜೂನ್‌ನಲ್ಲಿ ಈ ಪ್ರಮಾಣ 209.4ಕ್ಕೆ ಇಳಿದಿತ್ತು. 2022ರ ಜುಲೈನಲ್ಲಿ 1530.4 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷ ಈ ಅವಧಿಯಲ್ಲಿ ಆಗಿರುವ ಮಳೆ 1350 ಮಿ.ಮೀ ಮಾತ್ರ.
2018ರ ಆಗಸ್ಟ್ 14 ಮತ್ತು 16ರಂದು ನೆರೆ ಬಂದು ಇಲ್ಲಿನ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಎರಡು ಬಾರಿ ನದಿಗಳ ಸಂಗಮವಾಗಿತ್ತು. ಈ ಬಾರಿ ಆಗಸ್ಟ್ ತಿಂಗಳಲ್ಲೇ ನದಿ ನೀರಿಲ್ಲ. ಹೀಗೆ ಆಗಿರುವುದು ತೀರಾ ಅಪರೂಪ. ಈ ಭಾಗದಲ್ಲಿ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದೆ. ನೇತ್ರಾವತಿ ನದಿಯ ಉಪನದಿಗಳ ನೀರನ್ನು ಘಟ್ಟದ ಕಡೆ ಹರಿಸಲು ಎತ್ತಿನ ಹೊಳೆ ಯೋಜನೆಗೆ ₹ 35 ಸಾವಿರ ಕೋಟಿಗೂ ಅಧಿಕ ವೆಚ್ಚ ಮಾಡಲಾಗಿದೆ. ಆದರೆ ಕಾಮಗಾರಿ ಇನ್ನೂ ಮುಗಿಯಲಿಲ್ಲ. ಈ ಕಾಮಗಾರಿಗಾಗಿ ಎಷ್ಟೋ ಮರಗಳು ಬಲಿಯಾಗಿವೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯೂ ನಡೆಯುತ್ತಿದ್ದು ಇದಕ್ಕಾಗಿಯೂ ರಸ್ತೆ ಬದಿಯ ಮರಗಳನ್ನು ಕಡಿಯಲಾಗಿದೆ. ಜಿಲ್ಲೆಯಲ್ಲಿ ನೀರು ಇಂಗಲು ಪ್ರಮುಖ ಕಾರಣವಾಗಿದ್ದ ಭತ್ತದ ಗದ್ದೆಗಳು ನಾಶವಾಗಿವೆ. ಇದೆಲ್ಲವೂ ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತಿದ್ದು, ಇದು ಇದೇ ರೀತಿ ಮುಂದುವರಿದರೆ ಜಿಲ್ಲೆ ಬರಗಾಲಪೀಡಿತ ಆಗುವುದರಲ್ಲಿ ಸಂದೇಹ ಇಲ್ಲ ಎನ್ನುತ್ತಾರೆ ತಜ್ಞರು.
ಆಷಾಢ ತಿಂಗಳೆಂದರೆ ಮಳೆಯ ನಕ್ಷತ್ರದ ತಿಂಗಳು. ಆದರೆ ಮಳೆಯೇ ಇಲ್ಲ. ಮಳೆ ಕಡಿಮೆ ಆಗುತ್ತಲೇ ಭೂಗರ್ಭ ಒಣಗಿ ಅಂತರ್ಜಲ ಬತ್ತಿ ಹೋಗುತ್ತಿದೆ. 2017ರಲ್ಲಿ ನದಿ ಬತ್ತಿ ಹೋಗಿ 2018ರಲ್ಲಿ 2 ಪಟ್ಟು ಅಧಿಕ ಮಳೆಯಾಗಿತ್ತು. ಹಾಗಾಗಿ ಒಂದೆಡೆ ಆಶಾಭಾವನೆಯೂ ಇದೆ. ಹಾಗೆಂದು ಈಗಿನ ನೀರಾವರಿ ಪದ್ಧತಿಯಲ್ಲಿರುವ ಅಡಿಕೆ ತೆಂಗು ಬತ್ತ ಮೊದಲಾದ ಕೃಷಿಯನ್ನು ನಂಬಿದರೆ ರೈತರ ಬದುಕು ಕಷ್ಟವಾಗಬಹುದು. ಮುಂದೆ ಕೃಷಿ ಪದ್ಧತಿಯನ್ನು ಬದಲಿಸಬೇಕಾದ ಅನಿವಾರ್ಯತೆ ಎದುರಾಗಬಹುದು. –ಚಂದ್ರಶೇಖರ್ ತಾಳ್ತಜೆ ಕೃಷಿಕರು
ಪ್ರಕೃತಿ ವಿಕೋಪ ರಕ್ಷಣಾ ತಂಡದಲ್ಲಿ 6 ವರ್ಷಗಳಿಂದ ಇದ್ದೇನೆ. ಪ್ರತಿ ವರ್ಷ ಆಗಸ್ಟ್ ಬಳಿಕವೂ ನದಿಯಲ್ಲಿ ಉತ್ತಮ ನೀರಿನ ಹರಿವು ಇರುತ್ತಿತ್ತು. ಈ ಬಾರಿ ಈಗಲೇ ಮರಳು ಕಾಣತೊಡಗಿದೆ. ನನ್ನ ಅನುಭವದಲ್ಲಿ ಇದು ಇದೇ ಮೊದಲು.-ದಿನೇಶ್ ಬಿ ಪ್ರಭಾರ ಘಟಕಾಧಿಕಾರಿ ಗೃಹ ರಕ್ಷಕದಳ ಉಪ್ಪಿನಂಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.