ಮಂಗಳೂರು: ಒಂದು ಸಿನಿಮಾದ ಅವಧಿಗೆ ಇಡೀ ಚಿತ್ರಮಂದಿರವನ್ನು ನಿಮ್ಮದಾಗಿಸಿಕೊಳ್ಳಬೇಕೆ? ಹಾಗಿದ್ದರೆ ಕೇವಲ ₹1,999 ಪಾವತಿಸಿ, ಮಲ್ಟಿಪ್ಲೆಕ್ಸ್‌ನಲ್ಲಿ ಒಬ್ಬರೇ ಅಥವಾ ನಿಮಗೆ ಬೇಕಾದವರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿ!
ನಗರದ ಕೆಲವು ಮಲ್ಟಿಪ್ಲೆಕ್ಸ್‌ಗಳ ಹೊಸ ಆಫರ್ ಇದು. ಕೇಂದ್ರ ಸರ್ಕಾರ ನೀಡಿರುವ ಅನುಮತಿಗೆ ಅನುಗುಣವಾಗಿ ಚಿತ್ರಮಂದಿರಗಳು ಆರಂಭವಾಗಿದ್ದರೂ, ಪ್ರೇಕ್ಷಕರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಲೇ ಇದೆ. ಒಂಟಿ ಪರದೆ ಥಿಯೇಟರ್‌ಗಳು ಪ್ರದರ್ಶನದಿಂದ ಹಿಂದೆ ಸರಿದಿದ್ದರೆ, ಹಲವು ದಿನಗಳಿಂದ ಬಂದ್ ಆಗಿದ್ದ ಮಲ್ಟಿಪ್ಲೆಕ್ಟ್‌ಗಳು ಇದೀಗ ಪ್ರೇಕ್ಷಕರನ್ನು ಸೆಳೆಯಲು ತರಹೇವಾರಿ ಆಫರ್‌ಗಳನ್ನು ಒಡ್ಡಿವೆ.
ನಗರದ ಬಿಗ್ ಸಿನಿಮಾಸ್ ಇಂತಹ ಹಲವು ಆಫರ್‌ಗಳನ್ನು ನೀಡುವ ಮೂಲಕ ವಹಿವಾಟು ಹೆಚ್ಚಿಸಲು ಮುಂದಾಗಿದೆ. ಎರಡೂವರೆ ಗಂಟೆ ಸಿನಿಮಾ ಹಾಲ್‌ನ ಮಾಲೀಕತ್ವ ಪಡೆಯಬಹುದು ಎನ್ನುವ ಈ ಕೊಡುಗೆ ಜನರನ್ನು ಆಕರ್ಷಿಸುತ್ತಿದೆ.
₹1,999 ಪಾವತಿಸುವುದೂ ಕಷ್ಟವಾಗಿದ್ದರೆ, ಅದಕ್ಕಿಂತ ಸುಲಭದ ಆಫರ್‌ಗಳೂ ಲಭ್ಯವಾಗಿವೆ. ಕೇವಲ ₹500 ಪಾವತಿಸಿ ಇಡೀ ಗೋಲ್ಡ್ ಪ್ರೀಮಿಯಂ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಅದೂ ಕಷ್ಟವಾಗಿದ್ದರೆ, ಸ್ನೇಹಿತರು ಅಥವಾ ಕುಟುಂಬದವರು ಸೇರಿ ತಲಾ ₹ 50 ಟಿಕೆಟ್‌ನಂತೆ 10 ಜನರು ಇಡೀ ಸಿನಿಮಾ ಹಾಲ್‌ನಲ್ಲಿ ಕುಳಿತು ಚಿತ್ರ ವೀಕ್ಷಿಸಬಹುದು.
ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ವಹಿವಾಟು ನಡೆಸಲು ಈ ರೀತಿಯ ಆಫರ್‌ಗಳು ಅನಿವಾರ್ಯ ಎನ್ನುವ ಮಾತು ಮಲ್ಟಿಪ್ಲೆಕ್ಸ್‌ಗಳ ಮಾಲೀಕರದ್ದು.
‘ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡಿನಲ್ಲಿ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಅಲ್ಲದೇ ನಿರ್ಮಾಪಕರೂ ಇದೀಗ ಸರ್ಕಾರದತ್ತ ಮುಖಮಾಡಿ ಕುಳಿತಿದ್ದಾರೆ. ಹೊಸ ಚಿತ್ರಗಳು ಬರುತ್ತಿಲ್ಲ. ಸದ್ಯಕ್ಕೆ ನಾವು ಪ್ರದರ್ಶಿಸುತ್ತಿರುವ ಚಿತ್ರಗಳು ಒಟಿಟಿಯಲ್ಲೂ ಲಭ್ಯವಾಗಿವೆ. ಹಾಗಾಗಿ ಪ್ರೇಕ್ಷಕರನ್ನು ಸೆಳೆಯುವುದು ಕಷ್ಟಕರವಾಗಿದೆ. ಅದಕ್ಕಾಗಿಯೇ ಇಂತಹ ಆಫರ್‌ಗಳನ್ನು ನೀಡಲಾಗುತ್ತಿದೆ’ ಎನ್ನುವುದು ಬಿಗ್ ಸಿನಿಮಾಸ್‌ನ ವಕ್ತಾರ ಹೇಳುವ ಮಾತು.
‘ಈಗಾಗಲೇ 35–40 ಮಂದಿ ಈ ಆಫರ್‌ಗಳ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಇಷ್ಟು ಮಂದಿಯಲ್ಲಿ ಎಷ್ಟು ಜನರು ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.