ADVERTISEMENT

ಕಾಡ್ಗಿಚ್ಚು ತಡೆ: ತಂತ್ರಜ್ಞಾನಕ್ಕೆ ಮೊರೆ

29 ಫೈರ್ ಕ್ಯಾಂಪ್ ತಂಡ ರಚನೆ, 193 ತಾತ್ಕಾಲಿಕ ಸಿಬ್ಬಂದಿ ನೇಮಕ

ಸಂಧ್ಯಾ ಹೆಗಡೆ
Published 20 ಮಾರ್ಚ್ 2024, 9:12 IST
Last Updated 20 ಮಾರ್ಚ್ 2024, 9:12 IST
<div class="paragraphs"><p>ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಅರಣ್ಯ ಇಲಾಖೆ ಹಾಕಿರುವ ಬೂದಿಗೆರೆ</p></div>

ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಅರಣ್ಯ ಇಲಾಖೆ ಹಾಕಿರುವ ಬೂದಿಗೆರೆ

   

ಮಂಗಳೂರು: ಕಳೆದ ವರ್ಷ ಬೇಸಿಗೆಯಲ್ಲಿ 508 ಹೆಕ್ಟೇರ್‌ ಪ್ರದೇಶದಲ್ಲಿ ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿದ್ದ ಅರಣ್ಯ ಇಲಾಖೆ ಮಂಗಳೂರು ವೃತ್ತದಲ್ಲಿ, ಈ ಬಾರಿ ಬೆಂಕಿ ಪ್ರಕರಣಗಳನ್ನು ತಗ್ಗಿಸಲು ಮಾನವ ಸಂಪನ್ಮೂಲದ ಜೊತೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಮಂಗಳೂರು ಮತ್ತು ಕುಂದಾಪುರ ಅರಣ್ಯ ವಿಭಾಗಗಳು, ಚಿಕ್ಕಮಗಳೂರು ಕಂದಾಯ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಕುದುರೆಮುಖ ವನ್ಯಜೀವಿ ವಿಭಾಗವು ಮಂಗಳೂರು ವೃತ್ತಕ್ಕೆ ಒಳಪಟ್ಟಿದೆ. ಒಟ್ಟು 2.87 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ವೃತ್ತಕ್ಕೆ ಕುದುರೆಮುಖ ವನ್ಯಜೀವಿ ವಿಭಾಗ, ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಬೇಸಿಗೆಯಲ್ಲಿ ಅರಣ್ಯ ರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲು.

ಪ್ರತಿವರ್ಷದಂತೆ ಕೈಗೊಳ್ಳುವ ಸಾಂಪ್ರದಾಯಿಕ ಕ್ರಮಗಳ ಜೊತೆಗೆ ಸೆಟಲೈಟ್‌ನ  ‘ಫೈರ್ ಅಲರ್ಟ್‌’ ಮೂಲಕ ಬೆಂಕಿ ಪ್ರಕರಣಗಳನ್ನು ಶೀಘ್ರ ಪತ್ತೆ ಮಾಡಿ, ತುರ್ತು ಕ್ರಮವಹಿಸಲು ಇಲಾಖೆ ಮುಂದಾಗಿದೆ. ‘ಯಾವುದೇ ಪ್ರದೇಶದಲ್ಲಿ ಬೆಂಕಿ ಬಿದ್ದರೂ ಸೆಟಲೈಟ್ ಮೂಲಕ ಕೇಂದ್ರ ಕಚೇರಿಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದ ತಕ್ಷಣ ನಮ್ಮ ಕಚೇರಿಗೆ ನಿರ್ದಿಷ್ಟ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸೂಚನೆ ಬರುತ್ತದೆ. ಅರಣ್ಯ ಕಾವಲುಗಾರರು ಸ್ಥಳಕ್ಕೆ ಧಾವಿಸಿ ಬೆಂಕಿ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

ಮಂಗಳೂರು, ಕುಂದಾಪುರ ಮತ್ತು ಕುದುರೆಮುಖ ವನ್ಯಜೀವಿ ವಿಭಾಗಗಳಲ್ಲಿ ತಲಾ ಎಂಟು ವಲಯಗಳು ಇವೆ. ಈ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಬೂದಿಗೆರೆ (ಫೈರ್ ಲೈನ್) ಹಾಕಲಾಗಿದೆ. ನವೆಂಬರ್ ತಿಂಗಳ ಕೊನೆಯಲ್ಲಿ ಕಾಡಂಚಿನ ಪ್ರದೇಶದಲ್ಲಿ ತರಗೆಲೆಗಳನ್ನು ಸ್ವಚ್ಛಗೊಳಿಸಿ, ಬೆಂಕಿ ಬೀಳಬಹುದಾದ ಸಂಭವನೀಯ ಪ್ರದೇಶಗಳಲ್ಲಿ ಬೂದಿಗೆರೆ ಹಾಕಲಾಗುತ್ತದೆ. ಇವು ಬೀಡಿ, ಸಿಗರೇಟ್‌ ಸೇದಿ ಎಸೆದ ತುಣುಕುಗಳು ಜ್ವಾಲೆಯಾಗಿ ಹೊತ್ತಿ ಉರಿಯುವುದನ್ನು ತಡೆಯುತ್ತವೆ. ಕುಂದಾಪುರ ವಲಯದ ವ್ಯಾಪ್ತಿಯಲ್ಲಿ ಈ ಬಾರಿ ಹೊಸದಾಗಿ 103 ಕಿ.ಮೀ ಬೂದಿಗೆರೆ ಹಾಕಲಾಗಿದೆ. ವೃತ್ತದ ವ್ಯಾಪ್ತಿಯಲ್ಲಿ ಒಟ್ಟು 2,173 ಕಿ.ಮೀ ಬೂದಿಗೆರೆ ಹಾಕಿರುವ ಪ್ರದೇಶವಿದ್ದು, ಅವುಗಳ ನಿರ್ವಹಣೆ ಮಾಡಲಾಗಿದೆ ಎಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಲನ್ ಪ್ರತಿಕ್ರಿಯಿಸಿದರು.

ಮಂಗಳೂರು ವೃತ್ತದಲ್ಲಿ ಒಟ್ಟು 29 ಫೈರ್ ಕ್ಯಾಂಪ್ ತಂಡ ರಚಿಸಲಾಗಿದೆ. 193 ಅರಣ್ಯ ವೀಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಪ್ರತಿ ತಂಡದಲ್ಲಿ ಕನಿಷ್ಠ ನಾಲ್ಕು ವೀಕ್ಷಕರು ಇರಲಿದ್ದು, ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಹೆಚ್ಚು ಬೆಂಕಿ ಪ್ರಕರಣಗಳು ದಾಖಲಾಗುವುದರಿಂದ ಅಲ್ಲಿನ ತಂಡಗಳಿಗೆ ಇಲಾಖೆ ಸಿಬ್ಬಂದಿ ಸಹಿತ ಹೆಚ್ಚುವರಿ ಜನರನ್ನು ನೀಡಲಾಗಿದೆ. ಅವರು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸುತ್ತಾರೆ. ಅರಣ್ಯದಂಚಿನಲ್ಲಿ ವಾಸಿಸುವ ಜನರ ಜತೆ ಸಂಪರ್ಕ ಇಟ್ಟುಕೊಂಡು, ಮಾಹಿತಿ ಸಂಗ್ರಹಿಸುತ್ತಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಲಿಕಾಪ್ಟರ್‌ ಬಳಸಲೂ ಅವಕಾಶ’

ವೀಡ್ ಕಟರ್ ವಾಕ್ಯೂಮ್ ಬ್ಲೋವರ್ ಹೈ ಪ್ರೆಷರ್ ಪಂಪ್‌ಸೆಟ್ ಹ್ಯಾಂಡ್ ಫೈರ್ ಬ್ಲೋವರ್ ಪವರ್ ಸ್ಪ್ರೇಯರ್ ನೀರಿನ ಕ್ಯಾನ್ ಉದ್ದದ ರಾಡ್‌ಗಳು ಸೇರಿದಂತೆ ಅಗತ್ಯ ಉಪಕರಣಗಳನ್ನು ಎಲ್ಲ ಫೈರ್ ಕ್ಯಾಂಪ್‌ಗಳಿಗೆ ನೀಡಲಾಗಿದೆ. ಒಂದೊಮ್ಮೆ ಕಾಡ್ಗಿಚ್ಚು ವ್ಯಾಪಿಸಿದರೆ ಅದನ್ನು ತಡೆಗಟ್ಟಲು ನೀರಿನ ಮೂಲಗಳನ್ನು ಗುರುತಿಸಿಡಲಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ತೀವ್ರ ಸಮಸ್ಯೆ ಎದುರಾದರೆ ಭದ್ರಾ ಅಣೆಕಟ್ಟೆಯಿಂದ ಹೆಲಿಕಾಪ್ಟರ್ ಮೂಲಕ ನೀರನ್ನು ಎತ್ತಲು ಸಹ ಸರ್ಕಾರ ಅನುಮತಿ ನೀಡಿದೆ ಎಂದು ಸಿಸಿಎಫ್ ವಿ. ಕರಿಕಾಲನ್ ತಿಳಿಸಿದರು. ಬೆಂಕಿ ನಂದಿಸಲು ಅರಣ್ಯ ಕಾವಲುಗಾರರಿಗೆ ಸೂಕ್ತ ಉಪಕರಣಗಳಿಲ್ಲ ಕಾಡಿನ ಸೊಪ್ಪನ್ನು ಬಳಸಿಯೇ ಬೆಂಕಿ ನಂದಿಸಲಾಗುತ್ತದೆ ಎಂಬ ಆರೋಪವನ್ನು ಒಪ್ಪಲಾಗದು. ಆರಂಭಿಕ ಹಂತದಲ್ಲಿ ಸೊಪ್ಪನ್ನು ಬಳಸಿ ನಂದಿಸಲು ಪ್ರಯತ್ನಿಸಿ ನಿಯಂತ್ರಣಕ್ಕೆ ಸಿಗದಿದ್ದಾಗ ಉಪಕರಣಗಳನ್ನು ಬಳಸಲಾಗುತ್ತದೆ. ಸಾರ್ವಜನಿಕರು ಬೆಂಕಿ ಪ್ರಕರಣ ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ತರಬೇಕು ಎಂದು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.