ADVERTISEMENT

ನೀಲೇಶ್ವರ ಪಟಾಕಿ ದುರಂತ: ಸಾವು ಬದುಕಿನ ಹೋರಾಟದಲ್ಲಿ ಗಾಯಾಳುಗಳು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 20:18 IST
Last Updated 29 ಅಕ್ಟೋಬರ್ 2024, 20:18 IST
<div class="paragraphs"><p>ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ನೀಲೇಶ್ವರ ಪಟಾಕಿ ದುರಂತದ ಗಾಯಾಳುಗಳನ್ನು ನೋಡಲು ಬಂದಿರುವ ಬಂಧುಗಳು</p></div>

ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ನೀಲೇಶ್ವರ ಪಟಾಕಿ ದುರಂತದ ಗಾಯಾಳುಗಳನ್ನು ನೋಡಲು ಬಂದಿರುವ ಬಂಧುಗಳು

   

ಮಂಗಳೂರು: ಆತನಿನ್ನೂ 17 ವರ್ಷದ ಬಾಲಕ. ಕೈಗಾರಿಕಾ ತರಬೇತಿ ಸಂಸ್ಥೆಯೊಂದರ ವಿದ್ಯಾರ್ಥಿ. ಆತನ ದೇಹದ ಶೇ 50 ರಷ್ಟು ಭಾಗಗಳು ಸುಟ್ಟುಹೋಗಿವೆ. ನಿನ್ನೆವರೆಗೂ ಓಡಾಡಿಕೊಂಡು ಚೆನ್ನಾಗಿದ್ದ ಹುಡುಗ, ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕಾಸರಗೋಡು ಜಿಲ್ಲೆ ನೀಲೇಶ್ವರ ಸಮೀಪದ ಚೆರ್ವತ್ತೂರು ಗ್ರಾಮದ ಪತ್ತಿಕಲ್‌ ವಳಪ್ಪಿಲ್‌ನ ಅಜಿತ್ ಕುಮಾರ್‌ – ಬೀನಾ ದಂಪತಿಯ ಪುತ್ರ ಧನುಷ್ ಅವರ ಸ್ಥಿತಿ ಇದು. ಇಲ್ಲಿನ ಎ.ಜೆ. ಆಸ್ಪತ್ರೆಯ ಸರ್ಜಿಕಲ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ ಬೇಗ ಚೇತರಿಸಿಕೊಳ್ಳಲಿ ಎಂದು ಬಂಧುಗಳು ಪ್ರಾರ್ಥಿಸುತ್ತಿದ್ದಾರೆ.

ADVERTISEMENT

‘ಧನುಷ್ ಗೆಳೆಯರ ಜೊತೆ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತೆರಳಿದ್ದ. ಅಲ್ಲಿ ಮಧ್ಯರಾತ್ರಿ ಸಂಭವಿಸಿದ ಪಟಾಕಿ ದುರಂತದ ಸುದ್ದಿ ಕೇಳಿ ನಮಗೆ ನಿಂತ ನೆಲವೇ ಅಲುಗಿದಂತಾಗಿತು. ರಾತ್ರೋ ರಾತ್ರಿ ಧಾವಿಸಿ ನೋಡಿದರೆ, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಧನುಷ್‌ನ ಎದೆ, ಮುಖ, ಭುಜ, ಹೊಟ್ಟೆ ಹಾಗೂ ಕೈಗಳು ಸುಟ್ಟಿವೆ’ ಎಂದು ಆತನ ಚಿಕ್ಕಪ್ಪ ಬಿಜು ವಿವರಿಸಿದರು.

ಇದು ಧನುಷ್‌ ಒಬ್ಬರ ಕತೆಯಲ್ಲ. ಈ ಪಟಾಕಿ ಸ್ಫೋಟದ ದುರಂತದಲ್ಲಿ ಗಾಯಗೊಂಡು, ಇಲ್ಲಿನ ಎ.ಜೆ.ಆಸ್ಪತ್ರೆಯ ಸುಟ್ಟುಗಾಯಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬೊಬ್ಬರದೂ ಒಂದೊಂದು ಕತೆ.

ನೀಲೇಶ್ವರ ಗ್ರಾಮದ ಥೈಕದಪುರದ ಅನೂಪ್ ಕೆ. (36 ವರ್ಷ) ಅವರ ಎರಡೂ ಕಾಲುಗಳು, ಕೈಗಳು, ಭುಜ ಹಾಗೂ ಬೆನ್ನು ಸುಟ್ಟುಹೋಗಿವೆ. ಕೇರಳದ ‘916 ತೆಂಗಿನೆಣ್ಣೆ’ ಕಂಪನಿಯ ಮಾರಾಟ ಪ್ರತಿನಿಧಿಯಾಗಿದ್ದ ಅವರು ಈಚೆಗಷ್ಟೆ ಮದುವೆಯಾಗಿದ್ದರು. ಅವರೀಗ ಜೀವನ್ಮರಣ ಸ್ಥಿತಿಯಲ್ಲಿ ಮಲಗಿದ್ದಾರೆ. ಅವರ ಜೊತೆ ಬಂದಿರುವ ಚಿಕ್ಕಪ್ಪ ರಮೇಶ್, ಪಟಾಕಿ ದುರಂತಕ್ಕೆ ಕಾರಣರಾದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

‘ಜಾತ್ರೆಯಲ್ಲಿ ಪಟಾಕಿ ಸಿಡಿಸಲು ದೈವಸ್ಥಾನದ ಆಡಳಿತ ಸಮಿತಿಯವರು ಸ್ಥಳೀಯ ಸಂಸ್ಥೆಯಿಂದಾಗಲೀ, ಪೊಲೀಸ್‌ ಇಲಾಖೆಯಿಂದಾಗಲೀ ಅನುಮತಿಯನ್ನೇ ಪಡೆದಿರಲಿಲ್ಲ. ಪಟಾಕಿ ದಾಸ್ತಾನು ಮಾಡುವಾಗ ಮುನ್ನೆಚ್ಚರಿಕೆಯನ್ನೂ ವಹಿಸಿಲ್ಲ. ಜಾತ್ರೆಗೆ ಜನ ಸೇರುವ ಜಾಗಕ್ಕಿಂತ ಕೇವಲ 3–4 ಮೀಟರ್‌ ದೂರದಲ್ಲೇ ಪಟಾಕಿ ದಾಸ್ತಾನು ಮಾಡಿದ್ದರು. ಈ ದುರಂತದಲ್ಲಿ ಕೈಕಾಲುಗಳನ್ನು ಕಳೆದುಕೊಂಡು ಜೀವನಪರ್ಯಂತ ನರಳಬೇಕಾದ ಸಂತ್ರಸ್ತರ ಸಂಕಷ್ಟಕ್ಕೆ ಅವರನ್ನೇ ಹೊಣೆ ಮಾಡಬೇಕು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ರಮೇಶ್‌ ಕೆ. ಒತ್ತಾಯಿಸಿದರು.

‘ನನ್ನ ಮಗನ ಸ್ನೇಹಿತನೊಬ್ಬ ಕರೆ ಮಾಡಿ ದುರಂತದ ಬಗ್ಗೆ ಮಾಹಿತಿ ನೀಡಿದ್ದ. ಮಧ್ಯರಾತ್ರಿಯೇ ಸ್ಥಳಕ್ಕೆ ಧಾವಿಸಿದೆ. ಅಲ್ಲಿ ನನ್ನ ಅಣ್ಣನ ಮಗನ ಸ್ಥಿತಿ ನೋಡಿ ದಿಕ್ಕೇ ತೋಚದಂತಾಯಿತು’ ಎನ್ನುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು.

ಚೆರ್ವತ್ತೂರು ಗ್ರಾಮದ ತುರುತ್ತಿಯ ಅತುಲ್ ಬಾಬು ಕೆ.ವಿ. ಕಾಫಿ ಹೌಸ್‌ ಒಂದರಲ್ಲಿ ಉದ್ಯೋಗಿಯಾಗಿದ್ದರು. ಈ ದುರಂತದಿಂದ ಅವರ ಮುಖ, ಎದೆಭಾಗ ಹಾಗೂ ಕೈಗಳು ಸುಟ್ಟುಹೋಗಿವೆ.

‘ಈ ದೈವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಯಾವತ್ತೂ ಇಂತಹ ದುರಂತ ಸಂಭವಿಸಿರಲಿಲ್ಲ. ಈ ದುರಂತವನ್ನು ನೆನಪಿಸಿಕೊಂಡರೇ ಮೈ ಜುಮ್ಮೆನ್ನುತ್ತದೆ. ನನ್ನ ಅಣ್ಣನಿಗೆ ಅತುಲ್ ಬಾಬು ಒಬ್ಬನೇ ಮಗ. ಇಷ್ಟು ಸಣ್ಣ ವಯಸ್ಸಿನಲ್ಲೇ ಐಸಿಯುವಿನಲ್ಲಿ ಮಲಗಿರುವ ಆತನ ಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ’ ಎಂದು ಅಜಯ್ ಕುಮಾರ್‌ ಕಣ್ಣೀರಿಟ್ಟರು.

ಸುಟ್ಟಗಾಯದ ವಾರ್ಡ್‌ ಖಾಲಿ ಇಲ್ಲ: ‘ಕಾಸರಗೋಡು ಜಿಲ್ಲೆಯ ಆಸ್ಪತ್ರೆಗಳ ಸುಟ್ಟಗಾಯಗಳ ವಾರ್ಡ್‌ಗಳೆಲ್ಲ ಭರ್ತಿಯಾಗಿವೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಬಳಿಕ ಆಂಬುಲೆನ್ಸ್‌ ಚಾಲಕ ನೀಡಿದ ಸಲಹೆ ಮೇರೆಗೆ ಅತುಲ್‌ ಬಾಬುವನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತಂದೆವು’ ಎಂದು ಅಜಯ್ ತಿಳಿಸಿದರು.

ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ 21 ಮಂದಿಯನ್ನು ಇಲ್ಲಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ಕು ವರ್ಷದ ಸಯಾನ್ ದೇವ್, 9 ವರ್ಷದ ಸೂರ್ಯದೇವ್‌ ಹಾಗೂ 8 ವರ್ಷದ ಅತುಲ್ ಪ್ರಸಾದ್‌ ಅವರಿಗೆ ಮಕ್ಕಳ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವರ್ತನೆಗೆ ಸಂಬಂಧಿಸಿದ ಐಸಿಯುವಿನಲ್ಲಿ 6 ಹಾಗೂ ಸರ್ಜಿಕಲ್‌ ಐಸಿಯುವಿನಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಮೂವರು, ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆಗೆ ದಾಖಲಾಗಿದ್ದಾರೆ

‘ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿ’

‘ಪಟಾಕಿ ದುರಂತದಲ್ಲಿ ಗಾಯಗೊಂಡವರಲ್ಲಿ ಹೆಚ್ಚಿನವರು ತೀರಾ ಬಡ ಕುಟುಂಬದವರು. ಭಾರಿ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡುವ ಮುನ್ನ ದೇವಸ್ಥಾನದ ಆಡಳಿತ ಮಂಡಳಿಯವರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಅವರ ನಿರ್ಲಕ್ಷ್ಯದಿಂದಾಗಿ ಬಡ ಕುಟುಂಬಗಳು ನರಳುವಂತಾಗಿದೆ. ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಚೆರ್ವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ಆಗ್ರಹಿಸಿದರು.

ಇಲ್ಲಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಬಂಧುಗಳನ್ನು ಭೇಟಿಯಾಗಿ ಅವರು ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.