ಮಂಗಳೂರು: ಭಾರತದ ಆರ್ಥಿಕ ಸ್ಥಿತಿ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರ ಮತ್ತು ರಾಜ್ಯಗಳಿಗೆ ತೆರಿಗೆ ಮೊತ್ತದ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಅಪವಾದ ಹೊರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದರು.
ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಶಾಖೆ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು 2014ರಲ್ಲಿ ಜಗತ್ತಿನ ಹತ್ತನೇ ಅತಿದೊಡ್ಡ ಆರ್ಥಿಕತೆ ಹೊಂದಿದ್ದ ಭಾರತ ಈಗ ಐದನೇ ಸ್ಥಾನಕ್ಕೆ ಏರಿದೆ. ಆದರೆ ಇದನ್ನು ತೀರಾ ಸಹಜ ಪ್ರಕ್ರಿಯೆ ಎಂದು ಕೆಲವರು ಬಿಂಬಿಸುತ್ತಾರೆ. ಇದು ಆಧಾರರಹಿತ ಹೇಳಿಕೆ. ಇದನ್ನು ಕೇಳಿ ಯಾರೂ ಗೊಂದಲಕ್ಕೆ ಈಡಾಗಬಾರದು. ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡ ಕಾರಣ ದೇಶದಲ್ಲಿ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳು ಬೆಳವಣಿಗೆ ಸಾಧಿಸಿವೆ. ಈ ಕಾರಣದಿಂದಲೇ ನರೇಂದ್ರ ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೇರಿದೆ ಎಂದರು.
ಕೋವಿಡೋತ್ತರ ಕಾಲದಲ್ಲಿ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆದಿವೆ. ಯಾವುದೇ ದೇಶದಲ್ಲಿ ಒಂದೇ ಆಡಳಿತ ಸತತ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಭಾರತದಲ್ಲಿ ಇದು ಸಾಧ್ಯವಾಗಿದೆ. ಇದರಿಂದ ಇಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ಎಂಬುದು ಸಾಬೀತಾಗಿದೆ. ಕೋವಿಡ್–19ರ ನಂತರ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸುಸ್ಥಿಗೆ ತರುವ ಪ್ರಯತ್ನ ನಡೆದಿದ್ದು 2047ಕ್ಕೆ ನಿಗದಿ ಮಾಡಿರುವ ಗುರಿಯನ್ನು ತಲುಪುವುದರಲ್ಲಿ ಸಂದೇಹ ಬೇಡ. ಮೂಲಸೌಕರ್ಯ, ಒಳಗೊಳ್ಳುವಿಕೆ, ಹೂಡಿಕೆ ಮತ್ತು ಹೊಸ ಆವಿಷ್ಕಾರದತ್ತ ಹೆಚ್ಚು ಗಮನ ಹರಿಸಲಾಗಿದೆ. ರಕ್ಷಣಾ ಸಾಮಗ್ರಿ ಮತ್ತು ಸೌರಶಕ್ತಿ ಬಳಕೆಯ ಪರಿಕರಿಗಳ ಉತ್ಪಾದನೆಯೂ ಹೆಚ್ಚಾಗಲಿದೆ ಎಂದರು.
ಸುಶಿಕ್ಷಿತ ಮತದಾರರ ದಾರಿತಪ್ಪಿಸುವ ಯತ್ನ
ಸಂವಾದದಲ್ಲಿ ಲಕ್ಷ್ಮಣ ಪೈ ಎಂಬವರ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ, ಕರ್ನಾಟಕದ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಶಿಕ್ಷಿತ ಮತದಾರರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹಲವು ಬಾರಿ ಬಜೆಟ್ ಮಂಡಿಸಿರುವ ಅವರು ಆರ್ಥಿಕತೆ ವಿಷಯದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.
ಕೇರಳ ಮತ್ತು ಮಣಿಪುರಕ್ಕೆ ಕಡಿಮೆ ಮೊತ್ತ ಹಂಚಿಕೆ ಮಾಡಿ ಬಿಹಾರದತ್ತ ಒಲವು ತೋರಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ ಶ್ರೀರಾಂ ಎಸ್.ಭಟ್ ಅವರಿಗೆ ಉತ್ತರಿಸಿದ ಸಚಿವರು ಯಾವುದೇ ರಾಜ್ಯದ ಬಗ್ಗೆ ಕೇಂದ್ರಕ್ಕೆ ಮಲತಾಯಿ ಧೋರಣೆ ಇಲ್ಲ. ಬಿಹಾರಕ್ಕೆ ನೇಪಾಳದಿಂದ ಪ್ರತಿ ವರ್ಷ ನೆರೆ ಬರುತ್ತಿದ್ದು ಪರಿಹಾರ ಕಾರ್ಯಗಳಿಗಾಗಿ ಹೆಚ್ಚು ನೆರವು ನೀಡಬೇಕಾಗುತ್ತದೆ. ನೆರೆಯ ಸಮಸ್ಯೆ ಪರಿಹಾರಕ್ಕೆ ಮಾತುಕತೆ ನಡೆಯುತ್ತಿದೆ ಎಂದರು.
ಜಿಎಸ್‌ಟಿಯಲ್ಲಿ ಕೆಲವು ವಸ್ತುಗಳಿಗೆ ‘ಡಬಲ್’ ತೆರಿಗೆ ವಿಧಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಭಿ ಸುವರ್ಣ ಅವರಿಗೆ ಉತ್ತರಿಸಿದ ಸಚಿವರು ಜಿಎಸ್‌ಟಿ ಸಮಿತಿಯಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಇದ್ದಾರೆ. ಗೊಂದಲಗಳು ಇದ್ದರೆ ಡಿಸೆಂಬರ್‌ನಲ್ಲಿ ನಡೆಯುವ ಸಭೆಯಲ್ಲಿ ಸರಿಪಡಿಸಲಾಗುವುದು. ಅಲ್ಲಿ ಕೆಲವು ವಸ್ತುಗಳ ತೆರಿಗೆಯ ವಿಷಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವ ನಿರೀಕ್ಷೆ ಇದೆ ಎಂದರು. ರವೀಶ್ ನಾಯಕ್, ಕೆ.ಆಕಾಶ್ ರಾವ್, ವಸಂತ್ ಹೆಗ್ಡೆ, ಅಭಿರಾಮ್ ಕೆ.ಎಸ್, ಗಿರೀಶ್ ಚನ್ನಗಿರಿ, ಕೌಶಲ್, ವೆಲೆಸಾ ದೀಪ್ತಿ ಫರ್ನಾಂಡೀಸ್ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡರು.
ಆರ್ಥಿಕ ಪಾಠ ಕಲಿಯಲು ಬಂದ ಬಾಲಕ
ಸಂವಾದದಲ್ಲಿ ಸೇಂಟ್ ಅಲೋಶಿಯಸ್ ಗೊನ್ಜಾಗ ಶಾಲೆಯ 5ನೇ ತರಗತಿ ವಿದ್ಯಾರ್ಥಿ ರಿಷಾನ್ ಶೆಹಜಾದ್ ಹಸನ್ ಮಕ್ಕಳು ಕಲಿಯಬೇಕಾದ ಆರ್ಥಿಕ ಪಾಠದ ಬಗ್ಗೆ ಪ್ರಶ್ನೆ ಕೇಳಿ ಸಚಿವರಲ್ಲಿ ಅಚ್ಚರಿ ಮೂಡಿಸಿದ. ಮೊದಲೇ ಬರೆದು ಕಳುಹಿಸಿದ ಪ್ರಶ್ನೆಗಳ ಪೈಕಿ ಆಯ್ದವುಗಳನ್ನು ಓದಿ ಸಚಿವರಿಂದ ಉತ್ತರ ಪಡೆಯಲಾಗುತ್ತಿತ್ತು. ಈ ನಡುವೆ ‘ಮುಂದಿನದು ಐದನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯ ಪ್ರಶ್ನೆ’ ಎಂದು ನಿರೂಪಕರು ಹೇಳುತ್ತಿದ್ದಂತೆ ಸಭಿಕರೂ ಸಚಿವರೂ ಬಾಲಕನನ್ನು ನೋಡಲು ಕಾತರಗೊಂಡರು. ಆತನನ್ನು ಸಚಿವರು ವೇದಿಕೆ ಮೇಲೆ ಕರೆದರು. ಅಲ್ಲಿ ಆತಿನಿಂದ ನೇರವಾಗಿ ಪ್ರಶ್ನೆ ಕೇಳಿದರು. ‘ಆರ್ಥಿಕತೆ ಕುರಿತು ಈ ಬಾಲಕನ ಆಸಕ್ತಿ ಕುತೂಹಲಕಾರಿಯಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ತವರಾದ ಮಂಗಳೂರಿನ ಬಾಲಕನಲ್ಲಿ ಇಂಥ ಪ್ರಶ್ನೆ ಉದ್ಭವಿಸಿದ್ದರಲ್ಲಿ ವಿಶೇಷವೂ ಇಲ್ಲ’ ಎಂದ ಸಚಿವರು ‘ಮಕ್ಕಳಲ್ಲಿ ಹಣಕಾಸಿನ ಜಾಗೃತಿ ಮೂಡಬೇಕಾಗಿದೆ ಇದಕ್ಕೆ ಪೋಷಕರು ನೆರವಾಗಬೇಕು. ಹಣ ವೆಚ್ಚ ಮಾಡುವ ಮೊದಲು ಒಂದಿಷ್ಟು ತೆಗೆದಿರಿಸುವುದಕ್ಕೂ ಮುಂದಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.