ADVERTISEMENT

ಸುಸ್ಥಿರ ಇಂಧನ ಕ್ಷೇತ್ರ–ಎನ್‌ಐಟಿಕೆ ದೀವಿಗೆಯಾಗಲಿ

20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 14:53 IST
Last Updated 15 ಅಕ್ಟೋಬರ್ 2022, 14:53 IST
ಸುರತ್ಕಲ್‌ ಎನ್‌ಐಟಿಕೆಯ ಘಟಿಕೋತ್ಸವ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು–ಪ್ರಜಾವಾಣಿ ಚಿತ್ರ
ಸುರತ್ಕಲ್‌ ಎನ್‌ಐಟಿಕೆಯ ಘಟಿಕೋತ್ಸವ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು–ಪ್ರಜಾವಾಣಿ ಚಿತ್ರ   

ಮಂಗಳೂರು: ‘ಸುಸ್ಥಿರ ಇಂಧನ ಕ್ಷೇತ್ರದ ಸಮಗ್ರ ಸುಧಾರಣೆಗಳಿಗೆ ಸುರತ್ಕಲ್‌ನ ಎನ್‌ಐಟಿಕೆಯು ದೀವಿಗೆಯಾಗಲಿ. ದೇಶದ ಹಸಿರು ಇಂಧನ ಗುರಿ ಸಾಧನೆಗೆ ಈ ಸಂಸ್ಥೆಯು ಚಾಲಕ ಶಕ್ತಿಯಾಗಿ ಹೊರಹೊಮ್ಮಲಿ’ ಎಂದು ಕೇಂದ್ರ ಶಿಕ್ಷಣ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಎನ್‌ಐಟಿಕೆಯಲ್ಲಿ ಶನಿವಾರ 20ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದ ಅವರು, ಸಂಸ್ಥೆಯಲ್ಲಿ ಸುಸ್ಥಿರ ಇಂಧನಕ್ಕೆ ಸಂಬಂಧಿಸಿ ಪೂರ್ಣಪ್ರಮಾಣದ ವಿಭಾಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.

ಜೈವಿಕ ಕಸದಿಂದ ಅನಿಲ ಉತ್ಪಾದಿಸುವ 500 ಟನ್‌ ಸಾಮರ್ಥ್ಯದ ಘಟಕ ಹಾಗೂ ಇ-ಬೈಸಿಕಲ್‌ಗಳಿಗಾಗಿ ಸೌರಶಕ್ತಿ ಚಾಲಿತ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವ ಮೂಲಕ ಸುಸ್ಥಿರ ಇಂಧನ ಬಳಕೆಗೆ ಉತ್ತೇಜನ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಹೈಡ್ರೋಜನ್‌ ಭವಿಷ್ಯದ ಸುಸ್ಥಿರ ಇಂಧನ. ಇದಕ್ಕೆ ಬೇಡಿಕೆಯೂ ಹೆಚ್ಚಲಿದೆ. ಇದರ ಉತ್ಪಾದನೆಯ ತಂತ್ರಜ್ಞಾನಗಳನ್ನು ಸುಧಾರಿಸುವತ್ತಲೂ ಸಂಸ್ಥೆ ಗಮನ ಹರಿಸಬೇಕು’ ಎಂದರು.

ADVERTISEMENT

‘ಚರಿತ್ರೆಯಲ್ಲಿ ಗಟ್ಟಿಮುಟ್ಟಾದ ತಳಪಾಯ ಹಾಕಿದ್ದರೆ ಮಾತ್ರ ದೇಶವು ಸಮೃದ್ಧ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಜಾಗತಿಕ ನಾವಿನ್ಯತೆ ಸೂಚ್ಯಂಕದಲ್ಲಿ ದೇಶವು 14ನೇ ಸ್ಥಾನದಲ್ಲಿದೆ. ಭವಿಷ್ಯದಲ್ಲಿ ಮಾನವ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಭಾರತವು ವಿಶ್ವಗುರುವಾಗಿ ಹೊರಹೊಮ್ಮುವುದನ್ನು ಜಗತ್ತೇ ಎದುರು ನೋಡುತ್ತಿದೆ. ದೇಶದ ಭವಿತವ್ಯವನ್ನು ರೂಪಿಸಲು ಉದ್ಯಮಿಗಳು ಹಾಗೂ ಹೊಸ ಆವಿಷ್ಕಾರಗಳನ್ನು ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮಬೇಕಿದೆ. ಈ ಅಗತ್ಯವನ್ನು ಸಂಸ್ಥೆಯು ಪೂರೈಸಬೇಕು’ ಎಂದರು.

‘ಎನ್‌ಐಟಿಕೆ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಛಾಪು ಮೂಡಿಸಿದ್ದಾರೆ. ಈಗಿನ ವಿದ್ಯಾರ್ಥಿಗಳು ಉದ್ಯೋಗ ಬಯಸುವವರಾಗದೇ, ಉದ್ಯೋಗ ನೀಡುವವರಾಗಬೇಕು. ದೇಶಕಂಡ ಶ್ರೇಷ್ಠ ವಿಜ್ಞಾನಿ ಅಬ್ದುಲ್‌ ಕಲಾಂ ಅವರ ಜನ್ಮದಿನದಂದೇ ಘಟಿಕೋತ್ಸವ ಆಚರಿಸಲಾಗುತ್ತಿದೆ. ಕಲಾಂ ಅವರ ಬದುಕು ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಬೇಕು’ ಎಂದರು.

‘ಎಂಜಿನಿಯರಿಂಗ್‌ನಾಚೆಗಿನ ಕ್ಷೇತ್ರಗಳತ್ತಲೂ ಸಂಸ್ಥೆಯು ವಿಸ್ತರಿಸಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸುವತ್ತ ಗಮನ ಹರಿಸಬೇಕು. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ದತ್ತಾಂಶ ವಿಶ್ಲೇಷಣೆ, ವಂಶವಾಹಿ ಸಂಕಲನ, ತ್ರೀ–ಡಿ ಮುದ್ರಣ, ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಪುರಾತನ ಮತ್ತು ಆಧುನಿಕ ಜ್ಞಾನದ ಮಿಶ್ರಣದಂತಿರುವ ಎನ್‌ಇಪಿ 2022 ಜಗತ್ತಿಗೆ ಸರ್ವಸನ್ನದ್ಧ ನಾಗರಿಕರನ್ನು ರೂಪಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ’ ಎಂದರು.

ಕಂಪ್ಯುಟೇಷನಲ್‌ ಮತ್ತು ಡೇಟಾ ಸೈನ್ಸ್‌ನಲ್ಲಿ ಬಿ–ಟೆಕ್‌ ಕೋರ್ಸ್‌ಗಳನ್ನು 2022–23ನೇ ಸಾಲಿನಲ್ಲಿ ಆರಂಭಿಸುವುದಾಗಿ ಸಂಸ್ಥೆಯ ನಿರ್ದೇಶಕ (ಹೆಚ್ಚುವರಿ) ಪ್ರೊ. ಪ್ರಸಾದ್‌ ಕೃಷ್ಣ ತಿಳಿಸಿದರು.

‘2021–22ನೇ ಸಾಲಿನಲ್ಲಿ 405 ಕಂಪನಿಗಳು ಕ್ಯಾಂಪಸ್‌ ಸಂದರ್ಶನಕ್ಕೆ ಹೆಸರು ನೊಂದಾಯಿಸಿದ್ದವು. ಸ್ನಾತಕ ವಿದ್ಯಾರ್ಥಿಗಳಲ್ಲಿ ಶೇ 93ರಷ್ಟು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಶೇ 73 ರಷ್ಟು ಉದ್ಯೋಗ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ವರ್ಷಕ್ಕೆ ಸರಾಸರಿ ₹ 15.84 ಲಕ್ಷದಷ್ಟು ಪ್ಯಾಕೇಜ್‌ ಸಿಕ್ಕಿದೆ. ಕೆಲ ವಿದ್ಯಾರ್ಥಿಗಳು ವರ್ಷಕ್ಕೆ ಗರಿಷ್ಠ ₹ 43 ಲಕ್ಷದಷ್ಟು ಪ್ಯಾಕೇಜ್‌ ಕೂಡಾ ಪಡೆದಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಬಿ.ಟೆಕ್‌ ಪದವಿಧರರಲ್ಲಿ ಒಂಬತ್ತು ಮಂದಿಗೆ ಹಾಗೂ ಸ್ನಾತಕೋತ್ತರ ಪದವೀಧರರಲ್ಲಿ 30 ಮಂದಿಗೆ ಘಟಿಕೋತ್ಸವದಲ್ಲಿ ಸಂಸ್ಥೆಯ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಸೋನಾ ಉದ್ಯಮಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಕೆ.ಯಜ್ಞನಾರಾಯಣ ಹಾಗೂ ಟೆಕ್ನಿಮಾಂಟ್‌ ಕಂಪನಿಯ ಭಾರತ ಪ್ರದೇಶದ ಉಪಾಧ್ಯಕ್ಷ ಮಿಲಿಂದ್‌ ಬರಿಡೆ ಅತಿಥಿಗಳಾಗಿದ್ದರು. ಇವರಿಬ್ಬರೂ ಸಂಸ್ಥೆಯ ಹಳೆ ವಿದ್ಯಾರ್ಥಿಗಳು.

ಸಿಆರ್‌ಎಫ್‌ ಉದ್ಘಾಟನೆ

ಎನ್‌ಐಟಿಕೆ ಪ್ರಾಂಗಣದಲ್ಲಿ ಸ್ಥಾಪಿಸಿರುವ ಕೇಂದ್ರೀಯ ಸಂಶೋಧನಾ ಸೌಲಭ್ಯ (ಸಿಆರ್‌ಎಫ್‌) ಹಾಗೂ ಅಂತರಶಿಕ್ಷಣ ಅಧ್ಯಯನ ಕೇಂದ್ರವನ್ನು ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು.

ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯ ನೆರವಿನಿಂದ ನಿರ್ಮಿಸಲಾದ ಈ ಕಟ್ಟಡವು 10,394 ವಿಸ್ತೀರ್ಣವನ್ನು ಹೊಂದಿದೆ. ಇದರ ನಿರ್ಮಾಣಕ್ಕೆ ₹ 48 ಕೋಟಿ ವೆಚ್ಚವಾಗಿದೆ.

₹ 54.76 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 11,246 ಚ.ಮೀ. ವಿಸ್ತೀರ್ಣದ ಉಪನ್ಯಾಸ, ಸಭಾಂಗಣ ಸಂಕೀರ್ಣದ ಕಟ್ಟಡಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಶಾಸಕ ಭರತ್‌ ಶೆಟ್ಟಿ ಇದ್ದರು.

ಅಂಕಿ ಅಂಶ

1787

ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು

126

ಪಿಎಚ್‌.ಡಿ ಪಡೆದವರು

817

ಸ್ನಾತಕೋತ್ತರ ಪದವಿ ಪಡೆದವರು

844

ಬಿ.ಟೆಕ್‌ ಪದವಿ ಪಡೆದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.