ಮಂಗಳೂರು: ಆಹಾರ ಮತ್ತು ತರಕಾರಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಇಂಧನ ಸ್ವಾವಲಂಬನೆಯೆಡೆಗೆ ಸುರತ್ಕಲ್‌ನ ಎನ್‌ಐಟಿಕೆ ಹೆಜ್ಜೆ ಇಟ್ಟಿದೆ. ಇಟಲಿಯ ಮೈರೆ ಟೆಕ್ನಿಮಾಂಟ್ ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಈ ‘ಬಯೊವೇಸ್ಟ್ ರೀಸೈಕ್ಲಿಂಗ್ ಘಟಕಕ್ಕೆ ₹ 40 ಲಕ್ಷದಷ್ಟು ನೆರವು ನೀಡಲು ಮುಂದಾಗಿದೆ.
ಈ ಪೈಲೆಟ್ ಯೋಜನೆಯ ಉದ್ಘಾಟನೆಯು ಗುರುವಾರ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ನಡೆಯಿತು. ವಿಡಿಯೊ ಸಂದೇಶ ನೀಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರದಾನ್ ಅವರು, ‘ಭಾರತವು ವಿದ್ಯುತ್ ಉತ್ಪಾದನೆಯಲ್ಲಿ ದಾಪುಗಾಲು ಹಾಕುತ್ತಿದೆ. ಭವಿಷ್ಯದಲ್ಲಿ ಪರಿಸರಪೂರಕ ವಿದ್ಯುತ್ ಉತ್ಪಾದನಾ ಘಟಕಗಳು ಹೆಚ್ಚಲಿವೆ’ ಎಂದರು.
ಮೈರೆ ಟೆಕ್ನಿಮಾಂಟ್ ಅಧ್ಯಕ್ಷ ಫ್ಯಾಬ್ರಿಝಿಯೊ ಡಿ. ಅಮಾಟೊ ಅವರು ವರ್ಚುವಲ್ ಮೀಟ್ ಮೂಲಕ ಮಾತನಾಡಿ, ‘ಭಾರತದಲ್ಲಿ ಇಂಧನ ಪರಿವರ್ತನೆ ವೇಗಗೊಳಿಸುವ ನಿಟ್ಟಿನಲ್ಲಿ, ಗ್ರೀನ್ ಕೆಮಿಸ್ಟ್ರಿ ಮತ್ತು ಸರ್ಕ್ಯೂಲರ್ ಎಕಾನಮಿ ಕ್ಷೇತ್ರದಲ್ಲಿ ನುರಿತ ವೃತ್ತಿಪರರು ಮತ್ತು ಉದ್ಯಮಿಗಳನ್ನು ಬೆಳೆಸಲು ಎನ್‌ಐಟಿಕೆಯಂತಹ ಸಂಸ್ಥೆಗಳ ಸಹಯೋಗ ಬಲಪಡಿಸಲಾಗುವುದು. ಭಾರತ ನಮಗೆ ಎರಡನೇ ಮನೆಯಾಗಿದೆ. ಪಾಲುದಾರಿಕೆ, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ ನಮ್ಮ ಪ್ರಯತ್ನಗಳು ನಡೆಯಲಿವೆ’ ಎಂದರು.
ಯೋಜನೆ ಕುರಿತು ಮಾತನಾಡಿದ ಎನ್‌ಐಟಿಕೆ ನಿರ್ದೇಶಕ ಪ್ರೊ. ಕರಣಂ ಉಮಾಮಹೇಶ್ವರ ರಾವ್ ಅವರು, ‘ನಮ್ಮ ಕ್ಯಾಂಪಸ್‌ನಲ್ಲಿ ಹಸಿರು ಇಂಧನ ಉತ್ತೇಜಿಸುವ ನಿಟ್ಟಿನಲ್ಲಿ ಮರೈ ಟೆಕ್ನಿಮಾಂಟ್ ನೆರವು ಪಡೆಯಲಾಗಿದೆ. ಜೈವಿಕ ತ್ಯಾಜ್ಯ ಮರುಬಳಕೆ ಇಂಧನದ ಪೈಲೆಟ್ ಯೋಜನೆಯು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತದೆ. ಈ ಯೋಜನೆ ಕಾರ್ಯಾನುಷ್ಠಾನಗೊಳಿಸಲು ಶಿಕ್ಷಣ ಸಂಸ್ಥೆಯ 1981ನೇ ಬ್ಯಾಚ್‌ನ ವಿದ್ಯಾರ್ಥಿಗಳು ವಿಶೇಷ ಸಹಕಾರ ನೀಡಿದ್ದಾರೆ’ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಡಾ. ಜಿ.ಸಂತೋಷಕುಮಾರ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಎನ್‌ಐಟಿಕೆ ಡೀನ್ ಪ್ರೊ. ಕೆ. ಪಾಂಡುರಂಗ ವಿಠ್ಠಲ, ಮೆಕ್ಯಾನಿಲರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಂ.ಕುಲಕರ್ಣಿ, ಪ್ರೊ.ಅಶೋಕಬಾಬು, ಪ್ರೊ. ವಾಸುದೇವ ಎಂ ಉಪಸ್ಥಿತರಿದ್ದರು. ಪ್ರೊ. ಪೂಜಾ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಸ್ಥಾಪನೆ ಒಪ್ಪಂದಕ್ಕೆ ಸಹಿ
ಮೈರೆ ಟೆಕ್ನಿಮಾಂಟ್ ಸೆಂಟರ್ ಫಾರ್ ರಿಸರ್ಚ್ ಆನ್ ವೇಸ್ಟ್ ರೀ ಸೈಕ್ಲಿಂಗ್ ಆಂಡ್ ಸರ್ಕ್ಯೂಲರ್ ಎಕಾನಮಿ ಹೆಸರಿನ ಸಂಶೋಧನಾ ಕೇಂದ್ರವನ್ನು ಮೈರೆ ಟೆಕ್ನಾಮಾಂಟ್ ಕಂಪನಿಯು ಎನ್‌ಐಟಿಕೆಯಲ್ಲಿ ಆರಂಭಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2021–22ರ ನಂತರ 16 ವಿದ್ಯಾರ್ಥಿಗಳೀಗೆ ಸಂಶೋಧನೆ, ಶಕ್ತಿ ಪರಿವರ್ತನೆ, ಗ್ರೀನ್ ಕೆಮಿಸ್ಟ್ರಿ ಕ್ಷೇತ್ರದ ಪ್ರವರ್ತಕ ಕಾರ್ಯಗಳಿಗೆ ಕಂಪನಿಯು ವಿದ್ಯಾರ್ಥಿ ವೇತನ ನೀಡಲಿದೆ.
ಏನಿದು ಬಯೊಗ್ಯಾಸ್ ಘಟಕ ?
ಕ್ಯಾಂಟೀನ್ ಮತ್ತು ಹಾಸ್ಟೆಲ್ ಬ್ಲಾಕ್‌ಗಳಲ್ಲಿ ಉತ್ಪತ್ತಿಯಾಗುವ ಆಹಾರ, ತರಕಾರಿ ತ್ಯಾಜ್ಯಗಳನ್ನು ಬಳಸಿ, ಬಯೊಗ್ಯಾಸ್ ಘಟಕದಲ್ಲಿ ವಿದ್ಯುತ್ ಉತ್ಪಾದಿಸಿ ಎನ್‌ಐಟಿಕೆಗೆ ನೀಡಲಾಗುತ್ತದೆ. ಇದರಿಂದ ವಾರ್ಷಿಕ 35,400 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ವಾರ್ಷಿಕ ಅಂದಾಜು ₹ 2.42 ಲಕ್ಷ ಉಳಿತಾಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.