ADVERTISEMENT

ಎನ್‌ಎಂಪಿಎ: ವಿಚಕ್ಷಣಾ ಸಪ್ತಾಹ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 6:39 IST
Last Updated 27 ಅಕ್ಟೋಬರ್ 2024, 6:39 IST
ಕಾರ್ಯಕ್ರಮದಲ್ಲಿ ಎ.ವಿ.ರಮಣ ಮಾತನಾಡಿದರು. ಕೆ.ಪದ್ಮನಾಭಾಚಾರ್, ರಾಕೇಶ್ ಶ್ರೀವಾಸ್ತವ, ಎಸ್‌.ಶಾಂತಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಎ.ವಿ.ರಮಣ ಮಾತನಾಡಿದರು. ಕೆ.ಪದ್ಮನಾಭಾಚಾರ್, ರಾಕೇಶ್ ಶ್ರೀವಾಸ್ತವ, ಎಸ್‌.ಶಾಂತಿ ಭಾಗವಹಿಸಿದ್ದರು   

ಮಂಗಳೂರು: ‘ಸಾರ್ವಜನಿಕ ಸಂಸ್ಥೆಗಳ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾಪಾಡಲು ವಿಚಕ್ಷಣಾ ವ್ಯವಸ್ಥೆಯು ಅತ್ಯಂತ ಮಹತ್ವದ್ದು. ಗುತ್ತಿಗೆ ಷರತ್ತುಗಳನ್ನು ಪಾಲಿಸುವುದು ಹಾಗೂ ದಾಖಲೆಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಅಕ್ರಮ ತಡೆಯಲು ಅತ್ಯವಶ್ಯಕ’ ಎಂದು  ಮುಂಬೈ ಬಂದರು ಪ್ರಾಧಿಕಾರದ ಮುಖ್ಯ ವಿಚಕ್ಷಣಾ ಅಧಿಕಾರಿ ರಾಕೇಶ್ ಶ್ರೀವಾಸ್ತವ ಹೇಳಿದರು.

ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ ) ವತಿಯಿಂದ ಹಮ್ಮಿಕೊಂಡಿದ್ದ ವಿಚಕ್ಷಣಾ ಜಾಗೃತಿ ಸಪ್ತಾಹದಲ್ಲಿ ಅವರು ಮಾತನಾಡಿದರು. 

‘ಸಾರ್ವಜನಿಕ ಖರೀದಿ, ಯೋಜನೆ ರೂಪಿಸುವುದು, ಬಿಡ್ಡಿಂಗ್‌, ಮೌಲ್ಯಮಾಪನ ಹಾಗೂ ಗುತ್ತಿಗೆ ನಿರ್ವಹಣೆಯ ಯಾವ ಯಾವ ಹಂತದಲ್ಲಿ ಏನೆಲ್ಲ ತೊಡಕುಗಳನ್ನು ಎದುರಿಸಬೇಕಾಗುತ್ತದೆ’ ಎಂದರು.

ADVERTISEMENT

ಪ್ರಮಾಣಿಕೃತ ಕಾರ್ಯವಿಧಾನ ಅನುಸರಿಸದಿದ್ದರೆ ಅದು ಹೇಗೆ ಅದಕ್ಷತೆ ಹಾಗೂ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿದರು. 

ಎನ್‌ಎಂಪಿಎ ಅಧ್ಯಕ್ಷ ಎ.ವಿ.ರಮಣ,‘ಆಡಳಿತದಲ್ಲಿ ನೈತಿಕತೆ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಅತ್ಯಗತ್ಯ. ಕಾವಲು ವ್ಯವಸ್ಥೆಯನ್ನು ಹೊಂದುವುದು ಶಿಕ್ಷಿಸುವುದಕ್ಕೆಂದು ಅಲ್ಲ. ಜಾಗೃತಿ ಮೂಡಿಸಿ, ಪ್ರಮಾಣಿಕೃತ ಕಾರ್ಯವಿಧಾನಗಳಿಗೆ ಬದ್ಧವಾಗಿರುವಂತೆ ಪ್ರೇರೇಪಿಸುವುದೂ ಇದರ ಉದ್ದೇಶ. ದಕ್ಷ ಹಾಗೂ ನೈತಿಕ ಕಾರ್ಯನಿರ್ವಹಣೆ ಸಾಧಿಸಲು ಪ್ರತಿಯೊಂದು ಪ್ರಕರಣದಿಂದಲೂ ಪಾಠ ಕಲಿಯಬೇಕಾಗುತ್ತದೆ. ಸಾರ್ವಜನಿಕ ಹಿತ ಹಾಗೂ ಭ್ರಷ್ಟಾಚಾರ ರಹಿತವಾದ ಪಾರದರ್ಶಕ ಕಾರ್ಯನಿರ್ವಹಣಾ ಶೈಲಿಯನ್ನು ಎಲ್ಲರೂ ಅಳವಡಿಸಕೊಳ್ಳಬೇಕು’ ಎಂದರು. 

ಎನ್‌ಎಂಪಿಎ ಉಪಾಧ್ಯಕ್ಷೆ ಎಸ್‌.ಶಾಂತಿ ಹಾಗೂ ಎನ್‌ಎಂಪಿಎ ಮುಖ್ಯ ವಿಚಕ್ಷಣಾಧಿಕಾರಿ ಪದ್ಮನಾಭಾಚಾರ್ ಕೆ. ಭಾಗವಹಿಸಿದ್ದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಹಸನ ಸ್ಪರ್ಧೆ ನಡೆಯಿತು.

ವಿಚಕ್ಷಣಾ ಸಪ್ತಾಹದ ಅಂಗವಾಗಿ ‘ದೇಶದ ಸಮೃದ್ಧಿಗೆ ಸಮಗ್ರತೆಯ ಸಂಸ್ಕೃತಿ’ ಎಂಬ ಧ್ಯೇಯದೊಂದಿಗೆ ಸಹಿ ಸಂಗ್ರಹ ಅಭಿಯಾನ, ಸಂಸ್ಥೆಯ ಸಿಬ್ಬಂದಿಗೆ ಫ್ಲ್ಯಾಷ್ ಮಾಬ್‌, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಹಸನ ವಿವಿಧ ಸ್ಪರ್ಧೆಗಳನ್ನು  ಹಮ್ಮಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.