ADVERTISEMENT

7 ಕಾಮಗಾರಿ ಪೂರ್ಣ: ಡಾ.ಎ.ವಿ. ರಮಣ್‌

ಸಾಗರಮಾಲಾ ಯೋಜನೆಯಡಿ ಎನ್‌ಎಂಪಿಎಗೆ 10 ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 3:18 IST
Last Updated 5 ಏಪ್ರಿಲ್ 2022, 3:18 IST
ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ. ರಮಣ್‌ ಮಾತನಾಡಿದರು. ಉಪಾಧ್ಯಕ್ಷ ಕೆ.ಜಿ.ನಾಥ್ ಇದ್ದರು.
ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ. ರಮಣ್‌ ಮಾತನಾಡಿದರು. ಉಪಾಧ್ಯಕ್ಷ ಕೆ.ಜಿ.ನಾಥ್ ಇದ್ದರು.   

ಮಂಗಳೂರು: ‘ಸಾಗರಮಾಲಾ ಯೋಜನೆಯಡಿ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯವು, ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ 10 ಯೋಜನೆಗಳನ್ನು ನೀಡಿದ್ದು, ಬಂದರು ಸಂಪರ್ಕ, ಆಧುನೀಕರಣ, ಬಂದರು ನೇತೃತ್ವದ ಕೈಗಾರಿಕೀಕರಣ ಮತ್ತು ಕರಾವಳಿ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ₹1,336 ಕೋಟಿ ಮೊತ್ತದ ಹತ್ತು ಯೋಜನೆ ಮಂಜೂರಾಗಿವೆ’ ಎಂದು ಎನ್‌ಎಂಪಿಎ ಅಧ್ಯಕ್ಷ ಎ.ವಿ. ರಮಣ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಸಾಗರಮಾಲಾ ಯೋಜನೆಯಡಿ ಏಳು ವರ್ಷಗಳಲ್ಲಿ ಒಟ್ಟು ₹641 ಕೋಟಿ ವೆಚ್ಚದಲ್ಲಿ 7 ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಸಾಗರಮಾಲಾ 7 ಯಶಸ್ವಿ ವರ್ಷಗಳನ್ನು ಪೂರೈಸಿದೆ ಎಂದರು.

ದೇಶದಲ್ಲಿ ಬಂದರು ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುವುದು ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದೆ. ಸಾಗರಮಾಲಾ ಯಶಸ್ವಿಯಾಗಿ 7 ವರ್ಷ ಪೂರೈಸಿದ ಸಂದರ್ಭದಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರವು ಈ ದಿನವನ್ನು ಸ್ಮರಿಸುತ್ತಿದೆ ಎಂದು ತಿಳಿಸಿದರು.

ADVERTISEMENT

ನೀಲಿ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ಸಾಗರಮಾಲಾ ಯೋಜನೆ ಮಹತ್ತರ ಪಾತ್ರ ವಹಿಸುತ್ತಿದೆ. ಬಂದರುಗಳು ಮೂಲಸೌಕರ್ಯ, ಕರಾವಳಿಯ ಅಭಿವೃದ್ಧಿ ಮೂಲಕ ನವಮಂಗಳೂರು ಬಂದರು ಪ್ರಾಧಿಕಾರವು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.

ಎನ್‌ಎಂಪಿಎ 2021–22ರಲ್ಲಿ 3.93 ಕೋಟಿ ಟನ್‌ ಸರಕು ನಿರ್ವಹಣೆ ಮಾಡಿದ್ದು, ಕಳೆದ ವರ್ಷ 3.65 ಕೋಟಿ ಟನ್‌ ಸರಕು ನಿರ್ವಹಿಸಿತ್ತು. ಈ ಮೂಲಕ ಸರಕಿನಲ್ಲಿ ಶೇ 7.66 ರಷ್ಟು ವೃದ್ಧಿಯಾಗಿದೆ. 3.93 ಕೋಟಿ ಟನ್‌ ಸರಕಿನಲ್ಲಿ ಎಂಆರ್‌ಪಿಎಲ್‌, ಯುಪಿಸಿಎಲ್‌, ಕೆಐಒಸಿಎಲ್‌ ಹಾಗೂ ಜೆಎಸ್‌ಡಬ್ಲ್ಯು ಕಂಪನಿಗಳು ಹೆಚ್ಚಿನ ಪಾಲು ಹೊಂದಿದ್ದು, ಉಳಿದ ಕಂಪನಿಗಳಿಂದ 1.05 ಕೋಟಿ ಟನ್ ಸರಕು ನಿರ್ವಹಣೆ ಮಾಡಲಾಗಿದೆ. ಕಚ್ಚಾ ತೈಲ, ಪಿಒಎಲ್‌ ಉತ್ಪನ್ನಗಳು, ಕಲ್ಲಿದ್ದಲು, ಅಡುಗೆ ಎಣ್ಣೆಗಳ ಸರಕು ಹೆಚ್ಚಾಗಿದೆ ಎಂದು ತಿಳಿಸಿದರು.

ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಎನ್‌ಎಂಪಿಎ ಉಪಾಧ್ಯಕ್ಷ ಕೆಜಿ ನಾಥ್, ಕಸ್ಟಮ್ಸ್ ಕಮಿಷನರ್ ಇಮಾಮುದ್ದೀನ್, ಸಂಚಾರ ವ್ಯವಸ್ಥಾಪಕ ವೈ.ಆರ್. ಬೆಳಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.