ಮಂಗಳೂರು: ನವಮಂಗಳೂರು ಬಂದರು ಪ್ರದೇಶದಲ್ಲಿ ಗೋದಾಮು ಮತ್ತು ಕಂಟೈನರ್ ಸರಕು ಕೇಂದ್ರ (ಸಿಎಫ್‌ಎಸ್) ನಿರ್ಮಾಣ ಯೋಜನೆಯನ್ನು ನವಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ, ಕೇಂದ್ರೀಯ ಉಗ್ರಾಣ ನಿಗಮ (ಸಿಡಬ್ಲ್ಯುಸಿ) ಮತ್ತು ಸಾಗರಮಾಲಾ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ (ಎಸ್‌ಡಿಸಿಎಲ್) ಜೊತೆ ಸೇರಿ ಅನುಷ್ಠಾನಗೊಳಿಸಲಿದೆ.
ಬಂದರಿನ 16.6 ಎಕರೆಗಳಷ್ಟು ವಿಶಾಲ ಜಾಗದಲ್ಲಿ ₹ 125.42 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸುವ ಒಪ್ಪಂದಕ್ಕೆ ಎನ್‌ಎಂಪಿಎ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು, ಸಿಡಬ್ಲ್ಯುಸಿ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಕುಮಾರ್ ಸಿಂಗ್ ಹಾಗೂ ಎಸ್‌ಡಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಕುಮಾರ್ ಗುಪ್ತ ಇಲ್ಲಿ ಮಂಗಳವಾರ ಸಹಿ ಹಾಕಿದರು.
ಡಾ.ವೆಂಕಟರಮಣ ಅಕ್ಕರಾಜು, ‘ಈ ಯೋಜನೆಗೆ ಬಂದರಿನ ಸುಮಾರು ₹ 44.25 ಕೋಟಿ ಮೌಲ್ಯದ ಜಾಗವನ್ನು ಎನ್‌ಎಂಪಿಎ ಒದಗಿಸಲಿದೆ. ನಿರ್ಮಾಣ ವೆಚ್ಚವನ್ನು ಸಿಡಬ್ಲ್ಯುಸಿ ಮತ್ತು ಎಸ್‌ಡಿಸಿಎಲ್ ಭರಿಸಲಿವೆ. 2025ರ ಜೂನ್ ವೇಳೆಗೆ ಉಗ್ರಾಣ ಹಾಗೂ ಕಂಟೈನರ್ ಸರಕು ಕೇಂದ್ರದ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.
’ಈ ಯೋಜನೆಯಿಂದ ಎನ್‌ಎಂಪಿಎಯ ಕಂಟೈನರ್ ಸರಕು ನಿರ್ವಹಣೆ ಸಾಮರ್ಥ್ಯ ಹೆಚ್ಚಲಿದೆ. ಬಂದರಿನಲ್ಲಿ ಕಂಟೈನರ್ ಸರಕು ನಿರ್ವಹಣೆಗಾಗಿಯೇ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಟರ್ಮಿನಲ್, ಪೂರ್ತಿ ಕಂಟೈನರ್ ಲೋಡ್ (ಎಫ್‌ಸಿಎಲ್) ಸರಕು ನಿರ್ವಹಣೆಯನ್ನೂ ಮಾತ್ರ ಮಾಡುತ್ತಿದ್ದರೂ ಆರಂಭವಾದ ಒಂದೇ ವರ್ಷದಲ್ಲಿ ಶೇ 8.5ರಷ್ಟು ಬೆಳವಣಿಗೆ ಸಾಧಿಸಿತ್ತು. ಕಂಟೈನರ್ ಸರಕು ಕೇಂದ್ರವು ಎಫ್‌ಸಿಎಲ್ ಸರಕು ನಿರ್ವಹಣೆಯ ಜೊತೆಗೆ ಸಣ್ಣ ಪ್ರಮಾಣದ ರಫ್ತುದಾರರಿಗೂ (ಎಲ್‌ಸಿಎಲ್) ಅನುಕೂಲ ಕಲ್ಪಿಸಲಿದೆ. ಇದರಿಂದ ಕರ್ನಾಟಕದ ಕೃಷಿ ಉತ್ಪನ್ನಗಳನ್ನು ರಫ್ತಿಗೆ ಉತ್ತೇಜನ ಸಿಗಲಿದೆ’ ಎಂದು ಅವರು ವಿವರಿಸಿದರು.
‘ಲಾಭ ಗಳಿಸುವದಷ್ಟೇ ಈ ಯೋಜನೆಯ ಉದ್ದೇಶವಲ್ಲ. ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ಆಶಯವೂ ಇದರ ಹಿಂದಿದೆ’ ಎಂದರು.
‘ಬಂದರಿಗೆ ರಾಜ್ಯದ ಇತರ ಪ್ರದೇಶಗಳಿಂದ ಸರ್ವ ಋತು ರಸ್ತೆಗಳ ಸಂಪರ್ಕ ಇಲ್ಲದಿದ್ದರೂ ಎನ್ಎಂಪಿಎ 2022–23ರಲ್ಲಿ ತೆರಿಗೆ ಕಳೆದು ₹ 375 ಕೋಟಿ ವರಮಾನ ಗಳಿಸಿತ್ತು. 2023–24ರಲ್ಲಿ ₹ 450 ಕೋಟಿ ವರಮಾನ ಗಳಿಸುವ ಗುರಿ ಹೊಂದಲಾಗಿದೆ. 2022–23ರಲ್ಲಿ 1.65 ಲಕ್ಷ ಕಂಟೈನರ್ ಸರಕುಗಳನ್ನು ನಿರ್ವಹಿಸಿದ್ದೇವೆ. ಇದನ್ನು ಈ ವರ್ಷ 1.85 ಲಕ್ಷದಿಂದ 2 ಲಕ್ಷ ಕಂಟೈನರ್‌ಗಳಿಗೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ತಿಳಿಸಿದರು.
ಅಮಿತ್ ಕುಮಾರ್ ಸಿಂಗ್, ‘ಎನ್‌ಎಂಪಿಎ ಜೊತೆ ಸೇರಿ ಈ ಯೋಜನೆ ಜಾರಿಗೊಳಿಸುವುದು ಹೆಮ್ಮೆಯ ವಿಷಯ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣವಾಗಲಿರುವ ಈ ಗೋದಾಮು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರಲಿದೆ. ರಫ್ತುದಾರರಿಗೆ ಸರಕು ಸಾಗಣೆ ವೆಚ್ಚವನ್ನು ಕಡಿತಗೊಳಿಸುವುದಕ್ಕೂ ನೆರವಾಗಲಿದೆ’ ಎಂದರು.
ದಿಲೀಪ್ ಕುಮಾರ್ ಗುಪ್ತ, ‘ಈ ಗೋದಾಮಿನಲ್ಲಿ ಹವಾಮಾನ, ಉಷ್ಣಾಂಶ ಹಾಗೂ ಅನಿಲ ನಿಯಂತ್ರಣ ಸೌಕರ್ಯ ಕಲ್ಪಿಸಲಾಗುತ್ತದೆ. ವಿಶೇಷ ಉದ್ದೇಶದ ಘಟಕದ (ಎಸ್‌ಪಿವಿ) ಸ್ಥಾನಮಾನವನ್ನು ಎಸ್‌ಡಿಸಿಎಲ್ ಹೊಂದಿದ ಬಳಿಕ, ಮೊದಲು ಗೋದಾಮನ್ನು ನಿರ್ಮಿಸುತ್ತಿರುವುದೇ ಕಾಫಿ ಮಂಡಳಿಗೆ. ಜಂಟಿ ಸಹಭಾಗಿತ್ವದ ಈ ಯೋಜನೆ ಇತರ ಬಂದರುಗಳಿಗೂ ಮಾದರಿ ಆಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.