ಮೂಡುಬಿದಿರೆ: ನಮ್ಮ ದೇಶದಲ್ಲಿ ವಿವಿಧ ಜಾತಿ, ಮತ ಹಾಗೂ ಭಾಷೆಯ ಜನರಿದ್ದಾರೆ. ಹೀಗಾಗಿ ಭಾರತ ದೇಶ ಹೆಸರು ಇಡುವುದು ಹಿಂದೂ ರಾಷ್ಟ್ರದ ಭಾಗವಾಗಿ ಹೋಗುತ್ತದೆ. ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರದ ಹೆಸರು ಇಡುವುದು ಸರಿಯಲ್ಲ. ದೇಶದ ಹೆಸರು ಬದಲಾವಣೆಗೆ ಸಿಪಿಎಂನ ವಿರೋಧವಿದೆ ಎಂದು ಸಿಪಿಎಂನ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಹೇಳಿದರು.
ಕೇಂದ್ರ ಸರ್ಕಾರ ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಖಂಡಿಸಿ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ನೀತಿಗಳು ಸರಿಯಾಗಿರದಿದ್ದರೆ ಜನರು ಸಂಕಷ್ಟಕ್ಕೊಳಗಾಗಿ ದೇಶ ದಿವಾಳಿಯಾಗುತ್ತದೆ. ಜನಸಾಮಾನ್ಯರ ಕಷ್ಟದ ಅರಿವಿಲ್ಲದ ಬಹುರಾಷ್ಟ್ರೀಯ ಕಂಪನಿಗಳು ದೇಶದ ಆಡಳಿತ ನಡೆಸುವಂತಾಗಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ, ರಸ್ತೆ, ಆರೋಗ್ಯ ಸಹಿತ ಮೂಲಸವಲತ್ತು ಒದಗಿಸಿ ಜನಸಾಮಾನ್ಯರ ಕಷ್ಟಗಳಿಗೆ ಸರ್ಕಾರ ಸ್ಪಂದಿದಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಎಂನ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರದ ಧೋರಣೆಯಿಂದ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿ ಜನ ತತ್ತರಿಸಿದ್ದಾರೆ ಎಂದು ಆರೋಪಿಸಿದರು.
ಸಿಪಿಎಂನ ಮೂಡುಬಿದಿರೆಯ ಕಾರ್ಯದರ್ಶಿ ರಮಣಿ ಅಧ್ಯಕ್ಷತೆ ವಹಿಸಿದ್ದರು.
ಪುತ್ತಿಗೆ ಗ್ರಾ.ಪಂ.ಅಧ್ಯಕ್ಷೆ ರಾಧಾ, ಸಿಪಿಎಂ ಮುಖಂಡರಾದ ಕೃಷ್ಣಪ್ಪ ಕೊಣಾಜೆ, ಶಂಕರ ವಾಲ್ಪಾಡಿ ಮತ್ತು ಗಿರಿಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.