ADVERTISEMENT

ಮಂಗಳೂರು ಗೋಡೆ ಕುಸಿತ ಪ್ರಕರಣ: ಮಳೆ ನೀರು ಹರಿವಿಗೆ ಇರಲಿಲ್ಲ ವ್ಯವಸ್ಥೆ ?

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 6:02 IST
Last Updated 27 ಜೂನ್ 2024, 6:02 IST
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಲ್ಲೈಮುಗಿಲನ್ ಎಂಪಿ., ಕಾಂಗ್ರೆಸ್ ಮುಖಂಡ ಆರ್‌.ಪದ್ಮರಾಜ್‌ ಜೊತೆಯಲ್ಲಿದ್ದರು
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಲ್ಲೈಮುಗಿಲನ್ ಎಂಪಿ., ಕಾಂಗ್ರೆಸ್ ಮುಖಂಡ ಆರ್‌.ಪದ್ಮರಾಜ್‌ ಜೊತೆಯಲ್ಲಿದ್ದರು   

ಉಳ್ಳಾಲ: ತಾಲ್ಲೂಕಿನ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರದಲ್ಲಿ ಭಾರಿ ಮಳೆಗೆ ಆವರಣಗೋಡೆ ಉರುಳಿ ನಾಲ್ವರು ಜೀವ ಕಳೆದುಕೊಳ್ಳುವುದಕ್ಕೆ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದಿದ್ದುದು, ಎರಡು ವರ್ಷಗಳ ಹಿಂದೊಮ್ಮೆ ಸಂಭವಿಸಿದ ದುರ್ಘಟನೆಯಿಂದ ಎಚ್ಚೆತ್ತುಕೊಳ್ಳದಿದ್ದುದು ಕಾರಣವಾಯಿತೇ?

ಹೌದು ಎನ್ನುತ್ತಾರೆ ಸ್ಥಳೀಯರು. ಅಬೂಬಕ್ಕರ್ ಮನೆಯಿದ್ದ ಜಾಗವು ಎತ್ತರದಲ್ಲಿದ್ದು, ಅಲ್ಲಿ ಬೀಳುವ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇರಲಿಲ್ಲ. ನೀರು ಇಂಗಿ ಮಣ್ಣು ಮೆದುವಾಗಿತ್ತು. ಸುಮಾರು 10 ವರ್ಷ ಹಿಂದೆ ನಿರ್ಮಿಸಿದ್ದ ಆವರಣೆ ಗೋಡೆಯೂ ಶಿಥಿಲಗೊಂಡಿತ್ತು. ಆವರಣಗೋಡೆಗೆ ತಾಗಿಕೊಂಡಂತೆ ಬೆಳೆದಿದ್ದ ಎರಡು ಅಡಿಕೆ ಮರಗಳು ಭಾರಿ ಗಾಳಿ ಮಳೆಗೆ ಬುಡಕಿತ್ತು ಬಂದಿದೆ. ಮೊದಲೇ ಶಿಥಿಲವಾಗಿದ್ದ ಆವರಣಗೋಡೆಯ ತಳಭಾಗದ ಮಣ್ಣು ಸಡಿಲಗೊಂಡಿದೆ. ಎರಡು ಮರಗಳು ಹಾಗೂ ಆವರಣಗೋಡೆಯು ಪಕ್ಕದಲ್ಲಿ ತಗ್ಗಿನಲ್ಲಿದ್ದ ಹೆಂಚಿನ ಮನೆಯ ಚಾವಣಿ ಮೇಲೆ ಉರುಳಿ ಬಿದ್ದಿದೆ. ನೀರೆಳೆದುಕೊಂಡು ಭಾರವಾಗಿದ್ದ ಕೆಂಪುಕಲ್ಲಿನ ಇಟ್ಟಿಗೆಗಳ ಅಡಿ ಸಿಲುಕಿ ನಾಲ್ವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಸ್ಥಳೀಯರೊಬ್ಬರು ಘಟನೆಗೆ ಕಾರಣವಾದ ಅಂಶವನ್ನು ವಿವರಿಸಿದರು. 

ಮಳೆ ನೀರು ಹೋಗಲು ವ್ಯವಸ್ಥೆ ಇರುತ್ತಿದ್ದರೆ ಜಾಗದಲ್ಲಿ  ನೀರು ಸಂಗ್ರಹಗೊಳ್ಳುತ್ತಿರಲಿಲ್ಲ. ಈ  ಅನಾಹುತವೂ ಸಂಭವಿಸುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಇಲ್ಲಿನದು ಇಳಿಜಾರು ಪ್ರದೇಶ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದಯೇ ಸ್ಥಳೀಯರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇನ್ನೂ ಇಂತಹ ಅಪಾಯಕಾರಿ ಆವರಣಗೋಡೆಗಳು ಇಲ್ಲಿವೆ. ಅವುಗಳನ್ನು ಪರಿಶೀಲಿಸಿ, ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಅವರು ಒತ್ತಾಯಿಸಿದರು.

ಯಾಸಿರ್‌ ಅವರು ಆರು ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿದ್ದರು. ಎರಡು ವರ್ಷಗಳ ಹಿಂದೆಯೂ ಕಳೆದ ಬಾರಿಯೂ ಇಲ್ಲಿ ಆವರಣ ಗೋಡೆ ಕುಸಿದು  ಇದೇ ಮನೆಗೆ ಹಾನಿ ಆಗಿತ್ತು. ಆದರೆ ಆಗ ಯಾಸಿರ್‌ ಕುಟುಂಬ ಮಂಗಳೂರಿನಲ್ಲಿ ವಾಸವಾಗಿತ್ತು ಎಂದು ಮೃತದೇಹಗಳ ತೆರವು ಕಾರ್ಯದಲ್ಲಿ ಭಾಗವಹಿಸಿದ್ದ ಸ್ಥಳೀಯರೊಬ್ಬರು ತಿಳಿಸಿದರು.

ಎರಡು ವರ್ಷಗಳ ಆವರಣ ಗೋಡೆ ಕುಸಿದಾಗಲೇ ಎಚ್ಚೆತ್ತುಕೊಂಡಿದ್ದರೆ ನಾಲ್ಕು ಜೀವಗಳು ಬಲಿಯಾಗುವುದನ್ನು ತಪ್ಪಿಸಬಹುದಿತ್ತೋ ಏನೋ ಎಂದರು.

ಮುಂಜಾನೆ 6 ಗಂಟೆಗೆ ಭಾರಿ ಸದ್ದು: ‘ಬುಧವಾರ ಮುಂಜಾನೆ 6 ಗಂಟೆ ವೇಳೆಗೆ ಭಾರಿ ಸದ್ದು ಕೇಳಿಸಿತು, ನಾವು ಹೊರಗೆ ಬಂದು ನೋಡಿದೆವು. ಆಗ ಯಾಸಿರ್‌ ಅವರ ಮನೆಯ ಮೇಲೆ ಆವರಣ ಗೋಡೆ ಕುಸಿದು ಬಿದ್ದಿರುವುದು ಗೊತ್ತಾಯಿತು. ತಕ್ಷಣ ಸ್ಥಳೀಯರೆಲ್ಲ ಸೇರಿ ಮನೆಯ ಬಾಗಿಲು ಒಡೆದೆವು’ ಎಂದು ಸ್ಥಳೀಯರಾದ ಎಂ.ಕೆ.ಸಾದಿಕ್‌ ಮಾಹಿತಿ ನೀಡಿದರು.

ವಿದ್ಯುತ್ ಶಾಕ್‌: ‘ ಯಾಸಿರ್‌ ಮನೆಯ ಒಳಗೆ ಹೋಗುತ್ತಿದ್ದಂತೆಯೇ ನಮಗೆ ವಿದ್ಯುತ್‌ ಶಾಕ್ ಹೊಡೆಯಿತು. ಮಳೆ ನೀರು ನುಗ್ಗಿದ್ದ ಅವರ ಮನೆಯ ವಯರ್‌ಗಳು ನೆಲಕ್ಕೆ ಬಿದ್ದು ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ನಮ್ಮೂರಿನ ಎಲೆಕ್ಟ್ರಿಷಿಯನ್‌ ಒಬ್ಬರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಳಿಕ  ನಾವು ಕೆಂಪು ಕಲ್ಲಿನ ಇಟ್ಟಿಗೆಗಳ ತೆರವು ಕಾರ್ಯಾಚರಣೆ ಶುರು ಮಾಡಿದೆವು’ ಎಂದು ಸ್ಥಳೀಯ ನಿವಾಸಿ  ಅಶ್ರಫ್‌ ತಿಳಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ‘ಪ್ರಕೃತಿ ವಿಕೋಪದಿಂದ ಸಂಭವಿಸಿದ ದುರ್ಘಟನೆ ಸಂಬಂಧ ಕುಟುಂಬಸ್ಥರಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಅಧಿಕಾರಿಗಳ ಜೊತೆಗೆ ಚರ್ಚಿಸಿ ಪರಿಹಾರ ವಿತರಣೆಗೂ ಕ್ರಮಕೈಗೊಳ್ಳಲಾಗುವುದು’ ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ದುರ್ಘಟನೆ ನಡೆಸ ಸ್ಥಳಕ್ಕೆ ಭೇಟಿ ನೀಡಿದರು.

ಆವರಣ ಗೋಡೆ ಕುಸಿತದಿಂದ ಮೃತಪಟ್ಟವರ ಅಂತಿಮ ವಿಧಿಗಳನ್ನು ಕುತ್ತಾರು ಮದನಿನಗರದ ಜುಮಾ ಮಸೀದಿಯಲ್ಲಿ ಬುಧವಾರ ನೆರವೇರಿಸಲಾಯಿತು

ಅಲುಗಾಡಿತ್ತು ಬಾಲಕಿಯ ಕೈ!

ಯಾಸಿರ್‌ ಮರಿಯಮ್ಮ ಹಾಗೂ ಒಬ್ಬ ಬಾಲಕಿಯ ಮೃತದೇಹಗಳು ಮನೆಯ ಹಾಲ್ ನಲ್ಲಿ ಸಿಕ್ಕವು. ಇನ್ನೊಬ್ಬ ಬಾಲಕಿಯ ದೇಹ ಕೋಣೆಯಲ್ಲಿತ್ತು. ಕೆಂಪುಕಲ್ಲುಗಳನ್ನು ಪಕ್ಕಕ್ಕೆ ಸರಿಸಿ ದೇಹವನ್ನು ಹೊರ ತೆಗೆದ ವೇಳೆ ಬಾಲಕಿಯೊಬ್ಬಳ ಕೈ ಅಲ್ಲಾಡಿತ್ತು. ದುರ್ಘಟನೆ ಸಂಭವಿಸಿದ ಮನೆಯನ್ನು ತಲುಪುವ ರಸ್ತೆ ಕಿರಿದಾಗಿದ್ದುದರಿಂದ ಆಂ‌ಬುಲೆನ್ಸ್ ಅಲ್ಲಿಯವರೆಗೆ ತಲುಪಲಾಗಲಿಲ್ಲ. ಆಸ್ಪತ್ರೆಗೆ ಸಾಗಿಸುವಾಗ ಬಾಲಕಿಯು ದಾರಿ ಮಧ್ಯೆ ಕೊನೆಯುಸಿರೆಳೆದಳು. ಆಕೆಯ ಜೀವ ಉಳಿಸಲು ಬಹಳ ಪ್ರಯತ್ನಪಟ್ಟೆವಾದರೂ ಅದು ಸಾಧ್ಯವಾಗಲಿಲ್ಲ ಎಂದು ಸಾದಿಕ್‌ ತಿಳಿಸಿದರು.

‘ನಾವು ಮೂರು ಮೃತದೇಹ ಹೊರ ತೆಗೆದ ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದರು ಎಂದು ಅವರು ತಿಳಿಸಿದರು. ನಾಲ್ಕನೇ ಮೃತದೇಹವನ್ನು ಹೊರ ತೆಗೆಯಲು ಮೂರು ಗಂಟೆ ಸಮಯ ಹಿಡಿಯಿತು’ ಎಂದರು. 

ಗಂಡನ ಮನೆಗೆ ಮರಳಿದ್ದ ಹಿರಿಮಗಳು ‘ಯಾಸಿರ್‌ ಅವರ ಹಿರಿಮಗಳು ರಶೀನಾ ಅವರನ್ನು ಕೇರಳದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿದೆ. ಬಕ್ರೀದ್ ಹಬ್ಬಕ್ಕಾಗಿ  ತವರಿಗೆ ಬಂದಿದ್ದ ರಶೀನಾ  ಮಂಗಳವಾರ ಸಂಜೆ ಪತಿಯ ಜೊತೆಗೆ ವಾಪಸ್ಸಾಗಿದ್ದರು’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

‘ರಶೀನಾ ತೆರಳಿದ ಬಳಿಕ ಯಾಸಿರ್‌– ಮರಿಯಮ್ಮ ದಂಪತಿ ಪಕ್ಕದ ಮನೆಯಲ್ಲಿ ಕುಳಿತು ಸುಖ ಕಷ್ಟ ಮಾತನಾಡಿದ್ದರು. ಬಳಿಕ ಮಕ್ಕಳಿಬ್ಬರ ಜೊತೆ ಊಟ ಮುಗಿಸಿ  ಮಲಗಿದ್ದರು. ಆದರೆ ಅವರು ಯಾರೂ ಎದ್ದೇಳಲೇ ಇಲ್ಲ. ಮೂವರು ಹೆಣ್ಣುಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದರು. ಅವರಿಗೆ ಹೀಗಾಗಬಾರದಿತ್ತು’ ಎಂದು ಅವರು ಕಣ್ಣೀರಿಟ್ಟರು. 

ಕುಟುಂಬಕ್ಕೆ ಗರಿಷ್ಠ ಪರಿಹಾರ: ಯು.ಟಿ.ಖಾದರ್

ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ‘ಇಂತಹ ಘಟನೆ ಮರುಕಳಿಸದಂತೆ ತಡೆಯಲು ಜಿಲ್ಲಾಧಿಕಾರಿ ಸಿಇಒ ಜೊತೆಗೆ ಚರ್ಚಿಸಿ ತಾತ್ಕಾಲಿಕ ಪರಿಹಾರ  ಕ್ರಮಗಳನ್ನು ಕೈಗೊಳ್ಳಲಾಗುವುದು. ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆ ಚರ್ಚಿಸಿದ್ದೇನೆ’ ಎಂದರು. ‘ವಿದ್ಯಾರ್ಥಿನಿಯರಿಬ್ಬರು ಮೃತಪಟ್ಟಿದ್ದರಿಂದ ಶಿಕ್ಷಣ ಇಲಾಖೆಯಿಂದಲೂ ಪರಿಹಾರ ನೀಡಲು ಅವಕಾಶ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ’ ಎಂದರು.

‘ಮರಳಿನ ಚೀಲಗಳನ್ನು ಇಟ್ಟು ಇಲ್ಲಿ ಮಳೆಗಾಲ ಮುಗಿಯುವವರೆಗೂ ತಾತ್ಕಾಲಿಕ ಪರಿಹಾರ ಒದಗಿಸುತ್ತೇವೆ. ಸರ್ಕಾರದ ನಿಯಮ ಮೀರಿ ಮನೆ ನಿರ್ಮಿಸದಂತೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು. ಬಿಜೆಪಿ ಮುಖಂಡರ ಭೇಟಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ಕ್ಷೇತ್ರ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ ಮುಖಂಡ ಸಂತೋಷ್ ರೈ ಬೋಳಿಯಾರ್ ಸ್ಥಳಕ್ಕೆ ಭೇಟಿ ನೀಡಿದರು.

‘ನಾಲ್ಕು ಜೀವಗಳು ಬಲಿಯಾದ ಈ ಪ್ರದೇಶದಲ್ಲಿ ಇನ್ನಷ್ಟು ಮನೆಗಳು ಅಪಾಯದಲ್ಲಿವೆ. ಮಳೆ ಬಂದಾಗ ಅವಘಡ ಸಂಭವಿಸದಂತೆ ತಡೆಯಲು  ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಬೇಕು’ ಎಂದು ನಳಿನ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.