ADVERTISEMENT

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ; ಸದಾನಂದ ಗೌಡ

ವಿಧಾನಸಭೆ ಚುನಾವಣೆಯಲ್ಲಿ ಕಳೆದುಕೊಂಡದ್ದನ್ನು ಬಡ್ಡಿ ಸಮೇತ ಪಡೆಯುತ್ತೇವೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 13:15 IST
Last Updated 3 ನವೆಂಬರ್ 2023, 13:15 IST
ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಡಿ.ವಿ.ಸದಾನಂದ ಗೌಡ ಅವರನ್ನು ಗೌರವಿಸಲಾಯಿತು
ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಡಿ.ವಿ.ಸದಾನಂದ ಗೌಡ ಅವರನ್ನು ಗೌರವಿಸಲಾಯಿತು   

ಸುಬ್ರಹ್ಮಣ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಜೆಡಿಎಸ್ ಕೂಡ ಎನ್‌ಡಿಎ ಜೊತೆಯಿದ್ದು, ಈ ಬಾರಿ ರಾಜ್ಯದಲ್ಲಿ 28ರಲ್ಲಿ 28 ಸ್ಥಾನಗಳನ್ನು ಎನ್‌ಡಿಎ ಗೆಲ್ಲುವ ಮೂಲಕ ವಿಧಾನ ಸಭಾ ಚುನಾವಣೆಯಲ್ಲಿ ಕಳೆದುಕೊಂಡದನ್ನು ಬಡ್ಡಿ ಸಮೇತ ಪಡೆಯಲಿದ್ದೇವೆ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಎಂಎಲ್ಎ, ಎಂಪಿ, ಎಂಎಲ್‌ಸಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ, ರಾಜ್ಯ, ರಾಷ್ಟ್ರೀಯ ಹುದ್ದೆಗಳನ್ನು ನೀಡಿದೆ. ಇನ್ನು ನಾನು ಏನಾದರೂ ಪಕ್ಷಕ್ಕೆ ನೀಡುವುದು ಬಾಕಿ ಉಳಿದಿದೆ. ಆದ್ದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ದಕ್ಷಿಣ ಕನ್ನಡದಲ್ಲಿ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಅಬ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದರು.

‘ಕಸ್ತೂರಿ ರಂಗನ್ ವರದಿಯನ್ನು ಈ ಭಾಗದಲ್ಲಿ ಅನುಷ್ಠಾನ ಮಾಡುವುದನ್ನು ನಾನು ಮೊದಲಿನಿಂದಲೂ ವಿರೋಧಿಸಿದ್ದೇನೆ. ವರದಿ ಅನುಷ್ಠಾನ ಮಾಡದಂತೆ ಪ್ರಧಾನಿಗೂ ಒತ್ತಡ ಹಾಕಿದ್ದೆವು, ಇದಕ್ಕೆ ಬದಲಿ ವ್ಯವಸ್ಥೆ ನೋಡುವ ಅಗತ್ಯ ಇದೆ’ ಎಂದರು. ಅಡಿಕೆ ಬೆಳೆಗಾರರ ಹಿತ ಕಾಯಲು ಬದ್ಧನಾಗಿದ್ದೇನೆ’ ಎಂದರು. 

ಡಿ.ವಿ.ಸದಾನಂದ ಗೌಡ ಮತ್ತು ಕುಟುಂಬ ಸದಸ್ಯರು ಕುಕ್ಕೆ ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್‌ ಇದ್ದರು. ದೇವಳದ ವತಿಯಿಂದ ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ಭಟ್, ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.