ADVERTISEMENT

ಮಂಗಳೂರು | ಸೇತುವೆ ನಿರ್ವಹಣೆ–ಸೋತು ಹೋಯ್ತೇ ಜಿಲ್ಲಾಡಳಿತ?

ಪ್ರವೀಣ್‌ ಕುಮಾರ್‌ ಪಿ.ವಿ
Published 19 ಆಗಸ್ಟ್ 2024, 6:43 IST
Last Updated 19 ಆಗಸ್ಟ್ 2024, 6:43 IST
<div class="paragraphs"><p>ಚೆಲ್ಯಡ್ಕ ಸೇತುವೆ ಬಿರುಕು ದುರಸ್ತಿಗೆ ಜಲ್ಲಿ ಸುರಿದಿರುವುದು</p></div>

ಚೆಲ್ಯಡ್ಕ ಸೇತುವೆ ಬಿರುಕು ದುರಸ್ತಿಗೆ ಜಲ್ಲಿ ಸುರಿದಿರುವುದು

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆ ಅನೇಕ ಗ್ರಾಮಗಳ ಸಂಪರ್ಕ ವ್ಯವಸ್ಥೆಯನ್ನೇ ಕಡಿತಗೊಳಿಸಿದೆ. ಕೆಲವು ಕಡೆ ಸೇತುವೆಗಳನ್ನು ನಿರ್ವಹಿಸುವಲ್ಲಿ ಜಿಲ್ಲಾಡಳಿತ ಸೋತು ಹೋಗಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ 75 ಕಡೆ ಕಿರುಸೇತುವೆಗಳು ಹಾಗೂ ಮೋರಿಗಳು ಹಾನಿಗೊಳಗಾಗಿದೆ. ಮೂರು ಕಡೆ ಕಿರುಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿವೆ.

ಮುಂಗಾರು ಹಂಗಾಮಿನಲ್ಲಿ ಆ.17ರವರೆಗೆ ವಾಡಿಕೆಯಂತೆ 297.8 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ ಈ ಸಲ 301.4 ಸೆಂ.ಮೀ ಮಳೆಯಾಗಿದೆ. ಈ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಯ 36 ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ 39 ಕಿರುಸೇತುವೆ ಮತ್ತು ಮೋರಿಗಳು ಹಾನಿಗೊಳಗಾಗಿವೆ. 

ADVERTISEMENT

ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಸಬರಬೈಲು – ಪಡಂಗಡಿ ಸಂಪರ್ಕದ ಕಿರು ಸೇತುವೆ ಕುಸಿದಿದೆ. ಮರೋಡಿ ಗ್ರಾಮದಲ್ಲಿ ಕಿರು ಸೇತುವೆ ಕೊಚ್ಚಿ ಹೋಗಿದ್ದು, ದೇರಾಜೆ ಬೆಟ್ಟಕ್ಕೆ ಸಂಪರ್ಕ ಕಡಿತಗೊಂಡಿದೆ. ‌‌‌‌

ಮೂಡುಬಿದಿರೆ ತಾಲ್ಲೂಕಿನ ಧರೆಗುಡ್ಡೆ ಗ್ರಾಮ ಪಂಚಾಯಿತಿಯ ಪಣಪಿಲ ಗ್ರಾಮದ ಬಿರ್ಮರಬೈಲು ಎಂಬಲ್ಲಿ ಸೇತುವೆ ಕೊಚ್ಚಿಹೋಗಿದೆ. ಊರಿನವರೇ ಸೇರಿ ಇಲ್ಲಿ ಮರದ ಗಳಗಳನ್ನು ಬಳಸಿ ತಾತ್ಕಾಲಿಕ ಕಾಲು ಸಂಕವನ್ನು ರಚಿಸಿಕೊಂಡಿದ್ದಾರೆ. ವಾಹನದ ಮೂಲಕ ಸಾಗಲು ಪರ್ಯಾಯ ದಾರಿಯನ್ನು ಬಳಸಬೇಕಿದೆ.

ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆಗಳನ್ನು ಗುರುತಿಸಿರುವ ಜಿಲ್ಲಾಡಳಿತ ಇಂತಹ ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದೆ. ಕೆಲವು ಸೇತುವೆಗಳಲ್ಲಿ ಭಾರಿ ವಾಹನಗಳ ಸಂಚಾರವನ್ನು ಮಾತ್ರ ನಿಗದಿತ ಅವಧಿಯಲ್ಲಿ ನಿಷೇಧಿಸಲಾಗಿದೆ.

ಅಂಬಡಬೆಟ್ಟು ಸೇತುವೆ: ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ಗ್ರಾಮ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ-ಇಂದಬೆಟ್ಟು ರಸ್ತೆಯಲ್ಲಿರುವ  ಅಂಬಡಬೆಟ್ಟು ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಇದರಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸರ್ಕಾರಿ ಬಸ್, ಶಾಲಾ ವಾಹನಗಳಿಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.  

ನಾವೂರು ಕೈಕಂಬ ಸೇತುವೆ:
ಬೆಳ್ತಂಗಡಿ ತಾಲ್ಲೂಕಿನ ನಾವೂರು ಗ್ರಾಮದ ಕೈಕಂಬ- ಅತ್ಯಡ್ಕ- ಬಳ್ಳಿತೋಟ- ಬೋಜಾರ- ಮೂಡಾಯಿಬೆಟ್ಟು ಸಂಪರ್ಕಿಸುವ ರಸ್ತೆಯಲ್ಲಿರುವ ಕೈಕಂಬ ಸೇತುವೆ ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದು, ಇದರಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಸೇತುವೆಯ  ತಡೆಗೋಡೆಗಳು 2019ರ ಭೀಕರ ಪ್ರವಾಹದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದವು. ಸೇತುವೆಯ ಅಡಿ ಭಾಗದಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಕಬ್ಬಿಣದ ಸರಳು ಕಾಣಿಸುತ್ತಿದೆ. ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯರು ಚುನಾವಣಾ ಬಹಿಷ್ಕಾರಕ್ಕೆ ಮುಂದಾದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಆದರೆ ಪರಿಹಾರ ಮರೀಚಿಕೆಯೇ ಆಗಿದೆ.

ಸಾರಕೂಟೇಲು ಸೇತುವೆ: ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮ ಪಂಚಾಯಿತಿ ಮೂಲಕ ಹಾದುಹೋಗುವ ಈಶ್ವರಮಂಗಲ ಪುಳಿತ್ತಡಿ- ಅಂಬಟೆಮೂಲೆ-ಬಳ್ಳಿಕಾನ  ರಸ್ತೆಯಲ್ಲಿರುವ ಸಾರಕೂಟೇಲು ಸೇತುವೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ಬಿರುಕು ಬಿಟ್ಟಿರುವ ಸೇತುವೆ ಅಪಾಯದ ಸ್ಥಿತಿಯಲ್ಲಿದೆ. ಪುತ್ತೂರು -ಕೌಡಿಚ್ಚಾರು-ಸುಳ್ಯಪದವು ರಸ್ತೆಯ ಬಳ್ಳಿಕಾನದಿಂದ ಪುತ್ತೂರು-ಈಶ್ವರಮಂಗಲಕ್ಕೆ ಸಂಪರ್ಕ ರಸ್ತೆಯಲ್ಲಿ ಈ ಸೇತುವೆ ಇದೆ. ಈ ರಸ್ತೆಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಡ್ನೂರು ಗ್ರಾಮದ ಮೇಲಿನ ಕಾವು ಎಂಬಲ್ಲಿಂದ ನನ್ಯ ಹೆಲಿಪ್ಯಾಡ್ ಬಳಿಯ ಮೂಲಕ ಅಂಬಟೆಮೂಲೆಗೂ ಸಂಪರ್ಕ ರಸ್ತೆಯಿದೆ. ಪ್ರತಿ ದಿನ ನೂರಾರು ವಾಹನಗಳು ಸಂಚರಿಸುವ ರಸ್ತೆ ಇದಾಗಿದೆ.  ಸಮೀಪದಲ್ಲೇ ಪಡುಮಲೆ ಸರ್ಕಾರಿ ಶಾಲೆ, ಆರಾಧನಾ ಕೇಂದ್ರಗಳೂ ಇವೆ. ಪ್ರತಿ ದಿನ ನೂರಾರು ಮಂದಿ ಓಡಾಡುವ ರಸ್ತೆ ಇದಾಗಿದೆ.

ಮಲ್ಲೂರು ಸೇತುವೆ: ಮಂಗಳೂರು ತಾಲ್ಲೂಕಿನ ಪರಾರಿ-ಉಳಾಯಿಬೆಟ್ಟು ಮತ್ತು ಮಲ್ಲೂರು ಜಿಲ್ಲಾ ಮುಖ್ಯರಸ್ತೆಯಲ್ಲಿರುವ ಸೇತುವೆಯೂ ಹದಗೆಟ್ಟಿದ್ದು, ಅದರಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. 

ಅಡ್ಡೂರು ಸೇತುವೆ: ಮಂಗಳೂರು ತಾಲ್ಲೂಕಿನ ಬಜಪೆ ಸಮೀಪದ ಅಡ್ಡೂರು–ಪೊಳಲಿ ನಡುವೆ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. 1970ರಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಸೇತುವೆಯ ಬದಲು ಮಲ್ಲೂರು ರಸ್ತೆ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ. 

ಕೂಳೂರು ಸೇತುವೆ: ಮಂಗಳೂರಿನ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕೂಳೂರು ಹಳೆಯ ಕಮಾನು ಸೇತುವೆಯೂ ಸುರಕ್ಷಿತವಾಗಿಲ್ಲ. ಈ ಸೇತುವೆಯಲ್ಲಿ ಬಸ್ ಹೊರತುಪಡಿಸಿ ಇತರ ಭಾರಿ ವಾಹನ ಸಂಚಾರವನ್ನು ಇದೇ 19, 20 ಮತ್ತು 21ರಂದು ಪ್ರಾಯೋಗಿಕವಾಗಿ ನಿರ್ದಿಷ್ಟ ಅವಧಿಗೆ ಸೀಮಿತವಾಗಿ ನಿರ್ಬಂಧಿಸಲಾಗಿದೆ. ಈ ಸೇತುವೆಯನ್ನು ಸೆ.25ರೊಳಗೆ ದುರಸ್ತಿಗೊಳಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಹೊರವಲಯದ ಮರವೂರು ಹಳೆ ಸೇತುವೆಯಲ್ಲೂ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪಲಿಮಾರು– ಬಳ್ಕುಂಜೆ ನಡುವಿನ ಸೇತುವೆಯೂ ಶಿಥಿಲವಾಗಿದ್ದು, ಇದರಲ್ಲಿ ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಜಿಲ್ಲಾ ಪಂಚಾಯಿತಿ ನಿರ್ವಹಿಸುವ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ 30 ಕಡೆ ಹೊಸ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಒಟ್ಟು 25.13 ಲಕ್ಷದ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್‌ ವೇಣುಗೋಪಾಲ್‌  ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪೆರುವಾಯಿ ಸೇತುವೆ ಬಳಸುವವರು ಮಳೆಗಾಲದಲ್ಲಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಈ ಸಮಸ್ಯೆ ನೀಗಿಸುವಂತೆ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ ,
ಆಸೀಫ್, ಪೆರುವಾಯಿ
ಬೆಳ್ತಂಗಡಿ ತಾಲ್ಲೂಕಿನ ಅಂಬಡಬೆಟ್ಟು ಸೇತುವೆಯನ್ನು ತುರ್ತಾಗಿ ದುರಸ್ತಿಪಡಿಸಿ ಸ್ಥಳೀಯರ ವಿದ್ಯಾರ್ಥಿಗಳ ಪಡಿಪಾಟಲು ತಪ್ಪಿಸಬೇಕು ,
ಗುರುರಾಜ್ ಗುರಿಪಲ್ಲ, ಅಂಬಡಬೆಟ್ಟು
ಕೋಟಿಗದ್ದೆ ಸೇತುವೆ ಕಾಮಗಾರಿ ಕಳಪೆ ಎಂದು 3 ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ. ಅಡಿಪಾಯ ನೀರಲ್ಲಿ ಕೊಚ್ಚಿ ಹೋಗಿದೆ.
ಅಮರನಾಥ ಆಳ್ವ, ಕರ್ನೂ‌ರುಗುತ್ತು
ಭದ್ರ ಅಡಿಪಾಯ ಅಳವಡಿಸದೆ ಕೋಟಿಗದ್ದೆಯಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ,
ಖಾದರ್ ಕರ್ನೂರು, ಸ್ಥಳೀಯರು

3 ಸಲ ದುರಸ್ತಿ ಬಳಿಕವೂ ಸರಿಯಾಗಿಲ್ಲ ಚೆಲ್ಯಡ್ಕ ಸೇತುವೆ

ಪುತ್ತೂರು– ಪರ್ಲಡ್ಕ-ಕುಂಜೂರುಪಂಜ-ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆಯಲ್ಲಿ ಕಾಣಿಸಿಕೊಂಡ ಬಿರುಕು ಆಸುಪಾಸಿನ ಗ್ರಾಮಸ್ಥರ ಪಾಲಿಗೆ ತಲೆನೋವಾಗಿಬಿಟ್ಟಿದೆ. ಈ ಸೇತುವೆಯ ಬಿರುಕನ್ನು ಅಶೋಕ್‌ಕುಮಾರ್‌ ರೈ ಹಾಗೂ ಜಿಲ್ಲಾಧಿಕಾರಿ ಸೂಚನೆ ಮೇರೆಗೆ  ಲೋಕೋಪಯೋಗಿ ಇಲಾಖೆಯವರು ಜಲ್ಲಿ, ಸಿಮೆಂಟ್ ಹಾಕಿ ತಾತ್ಕಾಲಿಕವಾಗಿ ದುರಸ್ತಿಪಡಿಸಿದರು. ದುರಸ್ತಿಗೊಂಡ ಬಳಿಕ ಕಾಂಕ್ರೀಟ್ ಮತ್ತೆ ಮಳೆನೀರಿನಲ್ಲಿ ಕೊಚ್ಚಿಹೋಗಿ ಮತ್ತೆ ಗುಂಡಿ ನಿರ್ಮಾಣವಾಗಿತ್ತು. ಅದನ್ನುಇಲಾಖೆಯವರು ಮತ್ತೆ  ದುರಸ್ತಿಪಡಿಸಿದರು. ಆ ಬಳಿಕವೂ ಕಾಂಕ್ರೀಟ್‌ ಕಿತ್ತುಕೊಂಡು ಹೋಗಿದೆ. ಈಗ ಗ್ರಾಮ ಪಂಚಾಯಿತಿ ವತಿಯಿಂದಲೇ ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗಿದೆ.  ಈ ಸೇತುವೆಯಲ್ಲಿ ಭಾರಿ ವಾಹನ ನಿಷೇಧ ಈಗಲೂ ಮುಂದುವರಿದಿದೆ. ಬಸ್‌ ಸೌಕರ್ಯ ಸ್ಥಗಿತಗೊಂಡ ಬಳಿಕ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. 

‘ಮುಳುಗು ಸೇತುವೆಗಳಿಗೆ ಮುಕ್ತಿ ನೀಡಿ’

ಜಿಲ್ಲೆಯ ಕೆಲವು ಕಡೆ ಈಗಲೂ ಮುಳುಗು ಸೇತುವೆಗಳಿಂದ ಮುಕ್ತಿ ಸಿಕ್ಕಿಲ್ಲ. ಮಳೆಗಾಲದಲ್ಲಿ ಈ ಸೇತುವೆ ಮುಳುಗಡೆಯಾದಾಗ ಕೆಲ ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತವೆ. ಈ ಮುಳುಗು ಸೇತುವೆಗಳಿಂದ ಮುಕ್ತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪೆರುವಾಯಿ ಸೇತುವೆ: ವಿಟ್ಲ ಸಮೀಪದ  ಪೆರುವಾಯಿ ಗ್ರಾಮದಲ್ಲಿ ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಸೇತುವೆ ಮಳೆಗಾಲದಲ್ಲಿ ಪದೇ ಪದೇ ಮುಳುಗಡೆಯಾಗುತ್ತದೆ. ಪೇರಡ್ಕ ಹೊಳೆಯಲ್ಲಿ 60 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು.  ಸೇತುವೆ ಮುಳುಗಡೆಯಾದಾಗ ಗಂಟೆಗಟ್ಟಲೆ  ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ. ನೀರಿನ ಮಟ್ಟ ಕೆಳಗಿಳಿದ ಬಳಿಕ ವಾಹನಗಳ ಓಡಾಟ ಆರಂಭವಾಗುತ್ತದೆ.

ಕೊಲ್ಲಮೊಗ್ರು ಸೇತುವೆ: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮದ  ಕೊಲ್ಲಮೊಗ್ರು - ಕಲ್ಮಕಾರು ಕಿರುಸೇತುವೆ ಮಳೆಗಾಲದಲ್ಲಿ ಪದೇ ಪದೇ ಮುಳುಗಡೆಯಾಗುತ್ತದೆ. ಈ ವೇಳೆ ಒಂದು ಭಾಗದ ಜನರು ಗ್ರಾಮಕೇಂದ್ರದ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ.     30 ವರ್ಷಗಳಿಂದಲೂ ಸ್ಥಳೀಯರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ ಮುಕ್ತಿ ಸಿಕ್ಕಿಲ್ಲ. ಸೇತುವೆಯ ಎರಡೂ ಬದಿಯಲ್ಲೂ ಮಣ್ಣು ಕುಸಿದು ಅಪಾಯಕಾರಿ ಸ್ಥಿತಿಯಲ್ಲಿದೆ.  ಇಲ್ಲಿ ಸರ್ವ ಋತು ಬಳಕೆಯ, ಸುಸಜ್ಜಿತ ಸೇತುವೆ ನಿರ್ಮಾಣ ಆಗಬೇಕು.  ಎಂದು ಸ್ಥಳೀಯ ನಿವಾಸಿ ಉದಯ ಶಿವಾಲ ಒತ್ತಾಯಿಸಿದರು.

ಕೋಟಿಗದ್ದೆ: ಹಳೆ ಸೇತುವೆ ಶಿಥಿಲ– ಹೊಸ ಸೇತುವೆ ಕಳಪೆ! 

ಪುತ್ತೂರು ತಾಲ್ಲೂಕಿನ ಈಶ್ವರಮಂಗಲದಿಂದ ಪಂಚೋಡಿ, ಕರ್ನೂರು ಮೂಲಕವಾಗಿ ಗಾಳಿಮುಖಕ್ಕೆ ಸಂಪರ್ಕ ಕಲ್ಪಿಸುವ ಗಡಿಪ್ರದೇಶ ವ್ಯಾಪ್ತಿಯಲ್ಲಿರುವ ಅಂತರರಾಜ್ಯ ಸಂಪರ್ಕ ರಸ್ತೆಯ ಕರ್ನೂರು ಸಮೀಪದ ಕೋಟಿಗದ್ದೆ ಎಂಬಲ್ಲಿದ್ದ ಹಳೆಯದಾದ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಇಲ್ಲಿ ಆರಂಭಗೊಂಡಿದ್ದ ನೂತನ ಸೇತುವೆ ಕಾಮಗಾರಿಯೂ ಅಸಮರ್ಪಕವಾಗಿದೆ. ಹಳೆಯ ಸೇತುವೆಯಲ್ಲಿ  ವಾಹನ  ಸಂಚಾರ ನಿಷೇಧಿದ್ದರಿಂದ  ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ ಸಂಚಾರ ಸ್ಥಗಿತವಾಗಿದೆ. ಆ ಭಾಗದ ಜನತೆ  ಸಂಚಾರ ಸಮಸ್ಯೆ ಎದುರಿಸುವಂತಾಗಿದೆ.
ಕೋಟಿಗದ್ದೆಯ ಹಳೆಸೇತುವೆಯು ಕೆಲ ವರ್ಷದ ಹಿಂದೆಯೇ ಶಿಥಿಲಾವಸ್ಥೆ ತಲುಪಿತ್ತು. ಈ ಸೇತುವೆ ವಾಹನ ಸಂಚಾರಕ್ಕೆ  ಯೋಗ್ಯವಾಗಿಲ್ಲ ಎಂದು ಅಧಿಕಾರಿಗಳು  ವರದಿ ನೀಡಿದ್ದರು. ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ₹ 40 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗಿತ್ತು. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳೆಯ ಸೇತುವೆ 8.5ಮೀ. ಅಗಲವಿದ್ದರೆ, ಹೊಸ ಸೇತುವೆ  7 ಮೀ ಅಗಲವಿದೆ. ಎತ್ತರವನ್ನೂ  3 ಅಡಿಗಳಷ್ಟು ತಗ್ಗಿಸಲಾಗಿದೆ.  ಪಿಲ್ಲರ್ ಕೂಡ ಬಲಿಷ್ಠವಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿಗೆ ತಡೆ ಒಡ್ಡಿದ್ದರು. ಬಳಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಗುಣಮಟ್ಟ ಕಾಪಾಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಸೇತುವೆಯ ಎತ್ತರವನ್ನು 3 ಅಡಿಗಳಷ್ಟು ಹೆಚ್ಚಿಸಲು ಸೂಚಿಸಿದ್ದರು.   ಸೇತುವೆಗೆ ತಡೆಗೋಡೆ ನಿರ್ಮಿಸಿಲ್ಲ.  ಸಪೂರವಾದ ಕಬ್ಬಿಣದ ಸರಳು ಬಳಸಲಾಗಿದೆ. ಅಧಿಕಾರಿಗಳ ಭರವಸೆಗಳು ಹುಸಿಯಾಗಿವೆ ಎಂದು ಗ್ರಾಮಸ್ಥರು ಮತ್ತೆ ಆರೋಪಿಸಿದ್ದಾರೆ.

ಈ ಮಳೆಗಾಲದ ಸೇತುವೆಯ ಕೆಳಭಾಗದ ಅಡಿಪಾಯ ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಅಡಿಭಾಗದಲ್ಲಿ ಕೊರೆತವಾಗಿ ಗೋಡೆ ನೇತಾಡುವ ಸ್ಥಿತಿಗೆ ಬಂದಿದೆ. ಸೇತುವೆಯ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆಯ ಕೆಳಗಿನ ಭಾಗದ ಮಣ್ಣೂ ಕೊಚ್ಚಿ ಹೋಗಿದೆ.  ಪಾಯ ತೆಗೆದು ಬೆಡ್ ಅಳವಡಿಸಿ ಸೇತುವೆ ನಿರ್ಮಿಸುವ ಬದಲು ತೋಡಿಗೆ ಮಣ್ಣು ತುಂಬಿಸಿ, ಅದರ ಮೇಲೆ  ಸೇತುವೆ ಆಧಾರ ಗೋಡೆ ನಿರ್ಮಿಸಲಾಗಿದೆ ಎಂದು ದೂರುತ್ತಾರೆ ಗ್ರಾಮಸ್ಥರು.

ಪೂರಕ ಮಾಹಿತಿ:

ಶಶಿಧರ್‌ ರೈ ಕುತ್ಯಾಳ ಪುತ್ತೂರು, ಗಣೇಶ್‌ ಶಿರ್ಲಾಲು ಬೆಳ್ತಂಗಡಿ, ಲೋಕೇಶ್‌ ಸುಬ್ರಹ್ಮಣ್ಯ, ಮಹಮ್ಮದ್‌ ಅಲಿ ವಿಟ್ಲ, ರಾಕೇಶ್‌ ಕೋಟ್ಯಾನ್‌, ಬಜಪೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.