ಮಂಗಳೂರು: ನರ್ಸಿಂಗ್ ಕ್ಷೇತ್ರಕ್ಕೆ ಹೆಚ್ಚು ಬಂಡವಾಳ ಹೂಡಿಕೆಯ ಜತೆಗೆ ರಾಜಕೀಯ ಪ್ರತಿನಿಧಿಗಳ ಬೆಂಬಲ ಇನ್ನಷ್ಟು ಬೇಕಾಗಿದೆ ಎಂದು ಅಖಿಲ ಭಾರತ ದಾದಿಯರ ಪರಿಷತ್ ನವದೆಹಲಿಯ ಅಧ್ಯಕ್ಷ ಡಾ. ಟಿ. ದಿಲೀಪ್‌ಕುಮಾರ್ ಹೇಳಿದರು.
ಟ್ರೇನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜ್ಯ ಶಾಖೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನರ್ಸಿಂಗ್ ಕಾಲೇಜುಗಳು ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನರ್ಸಿಂಗ್ ಕ್ಷೇತ್ರಕ್ಕೆ ಇದ್ದ ಬಜೆಟ್ ₹ 40 ಲಕ್ಷದಿಂದ ₹ 3,200 ಕೋಟಿಗೆ ಏರಿಕೆಯಾದರೂ, ಭಾರತದ ಸಂದರ್ಭದಲ್ಲಿ ಇದು ಕಡಿಮೆ ಮೊತ್ತವಾಗಿದೆ. ಇನ್ನೂ ಹೆಚ್ಚು ಬಂಡವಾಳ ಹೂಡಿಕೆಯಿಂದ ಈ ಕ್ಷೇತ್ರವನ್ನು ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಶುಶ್ರೂಷಕಿಯರ ಕ್ಷೇತ್ರಕ್ಕೆ ಸ್ಥಾನಮಾನ, ಆಡಳಿತದ ನಾಯಕತ್ವ ಜತೆಗೆ ನಿರ್ಧಾರ ತೆಗೆದುಕೊಳ್ಳುವ ವಿಜ್ಞಾನವನ್ನು ರೂಪಿಸು ಅಂಶಗಳು ಮಹತ್ವದ್ದಾಗಿವೆ. ಭಾರತದಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಶೇ 17.3ರಷ್ಟು ಮಾತ್ರ ನರ್ಸ್‌ಗಳು ಇದ್ದಾರೆ. ಪೂರ್ಣ ಪ್ರಮಾಣದ ವೈದ್ಯಕೀಯ ಸೇವೆಗೆ ಪ್ರತಿ ಒಂದು ಡಾಕ್ಟರ್ ಜತೆ ಮೂವರು ದಾದಿಯರು ಇರಬೇಕು. ಆದರೆ, ನಮ್ಮ ದೇಶದಲ್ಲಿ ಒಬ್ಬ ಡಾಕ್ಟರ್‌ಗೆ 1.9ರಷ್ಟು ದಾದಿಯರು ಇದ್ದಾರೆ. ಫಿಲಿಫೈನ್ಸ್ ನಂತರ ಭಾರತದ ದಾದಿಯರಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ ಎಂದು ವಿವರಿಸಿದರು.
ವೃತ್ತಿ ಗುಣಮಟ್ಟ, ಪ್ರಾವೀಣ್ಯತೆ ಹೆಚ್ಚಳಕ್ಕೆ ಸಿಮ್ಯುಲೇಷನ್ ಸೆಂಟರ್‌ಗಳು, ಕೌಶಲ ಪ್ರಯೋಗಾಲಯಗಳು ಅಗತ್ಯವಾಗಿವೆ. ಹೆಚ್ಚು ಸಿಮ್ಯುಲೇಷನ್ ಸೆಂಟರ್ ಸ್ಥಾಪಿಸುವ ನಿಟ್ಟಿನಲ್ಲಿ ಬಂಡವಾಳ ಹೂಡಿಕೆದಾರರು ಮುಂದೆ ಬಂದಿದ್ದಾರೆ. ರೋಗಿಗಳ ಆರೋಗ್ಯ ಕಾಳಜಿಗೆ ಸಿಮ್ಯುಲೇಷನ್ ಸೆಂಟರ್‌ಗಳು ಪ್ರಮುಖವಾಗಿದ್ದು, 300 ಜನ ತರಬೇತುದಾರರನ್ನು ಅಣಿಗೊಳಿಸಲಾಗಿದೆ. ಬದಲಾದ ಕಾಲದಲ್ಲಿ ವೃತ್ತಿ ಕೌಶಲಕ್ಕೆ ಪೂರಕವಾಗಿ ಅಖಿಲ ಭಾರತ ದಾದಿಯರ ಪರಿಷತ್, 14 ವಿಭಿನ್ನ ನರ್ಸಿಂಗ್ ಪ್ರೋಗ್ರಾಮ್‌ಗಳ ಒಂದು ವರ್ಷದ ಡಿಪ್ಲೊಮಾ ಜತೆಗೆ ಅನೇಕ ಹೊಸ ಕೋರ್ಸ್‌ಗಳನ್ನು ಪರಿಚಯಿಸಿದೆ. ಲೈವ್ ಸ್ಟ್ರೀಮಿಂಗ್ ಮೂಲಕ ನರ್ಸಿಂಗ್ ಪದವಿ ಪಡೆದ ಎಲ್ಲರ ಮಾಹಿತಿ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ ಎಂದು ತಿಳಿಸಿದರು.
ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಕುಮಾರ್, ನಿಟ್ಟೆ ವಿಶ್ವವಿದ್ಯಾಲಯದ ಪ್ರೊ. ವೈಸ್ ಚಾನ್ಸಲರ್ ಡಾ. ಎಂ.ಎಸ್.ಮೂಡಿತ್ತಾಯ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಎ ರಾಘವೇಂದ್ರ ರಾವ್, ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನಿರ್ದೇಶಕ ಅಬ್ದುಲ್ ರೆಹಮಾನ್, ಲಕ್ಷ್ಮಿ ಮೆಮೊರಿಯಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಜೆ.ಶೆಟ್ಟಿ, ಟಿಎನ್ಎಐ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ. ಎಟಿಎಸ್ ಗಿರಿ, ಕಾರ್ಯದರ್ಶಿ ಡಾ. ಹಿಮ ಊರ್ಮಿಳಾ ಶೆಟ್ಟಿ ಇದ್ದರು. ಉಪಾಧ್ಯಕ್ಷೆ ಡಾ. ಲಾರಿಸಾ ಮಾರ್ತಾ ಸ್ಯಾಮ್ಸ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.