ಮಂಗಳೂರು: ಸಿಬಿಐ ಅಧಿಕಾರಿ ಹಾಗೂ ಟೆಲಿಕಮ್ಯುನಿಕೇಷನ್ಸ್ ಕಂಪನಿ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮೊಬೈಲ್‌ನಿಂದ ಬೇರೆಯವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವ ಬೆದರಿಕೆ ಒಡ್ಡಿ ಇಲ್ಲಿನ ನಿವಾಸಿಯೊಬ್ಬರಿಂದ ₹ 31.12 ಲಕ್ಷಹಣ ಪಡೆದು ವಂಚಿಸಿದ ಬಗ್ಗೆ ನಗರದ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನನ್ನ ಮೊಬೈಲ್‌ಗೆ ಅ.07ರಂದು ಕರೆ ಬಂದಿತ್ತು. ತಮ್ಮನ್ನು ಟೆಲಿಕಮ್ಯುನಿಕೇಷನ್ಸ್ ಕಂಪನಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ವ್ಯಕ್ತಿ, ‘ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಸಕ್ರಿಯವಾಗಿದೆ’ ಎಂದು ತಿಳಿಸಿ, ಆ ಕರೆಯನ್ನು ಇನ್ನೊಬ್ಬರಿಗೆ ವರ್ಗಾಯಿಸಿದ್ದರು. ಆಗ ಮಹಿಳೆಯೊಬ್ಬರು ತಮ್ಮನ್ನು ಸಂಜನಾ ಎಂದು ಪರಿಚಯಿಸಿಕೊಂಡು ಮಾತನಾಡಿದ್ದರು. ನನ್ನ ವಿರುದ್ಧ ಮುಂಬೈನ ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ಗಂಟೆಯೊಳಗೆ ಆ ಠಾಣೆಗೆ ತನಿಖೆಗೆ ಹಾಜರಾಗಬೇಕು ಎಂದು ಆಕೆ ಹೇಳಿದ್ದರು. ತಕ್ಷಣ ಮುಂಬೈಗೆ ಬರಲು ಸಾಧ್ಯವಿಲ್ಲ ಎಂದಿದ್ದೆ. ಆಗ ಸಂಪರ್ಕಿಸಲು ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ಆ ಸಂಖ್ಯೆಯನ್ನು ಸಂಪರ್ಕಿಸಿದಾಗ ಗಂಡಸೊಬ್ಬರು, ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡು ಮಾತನಾಡಿದ್ದರು. ನಾನು ಇನ್ನೊಂದು ಮೊಬೈಲ್‌ನಿಂದ ಅಕ್ರಮ ಜಾಹೀರಾತು ಹಾಗೂ ಕಿರಕುಳಕಾರಿ ಸಂದೇಶ ಕಳುಹಿಸಿದ ಬಗ್ಗೆ ದೂರು ದಾಖಲಾಗಿದೆ ಎಂದು ಆರೋಪಿಸಿದ್ದರು. ಅಕ್ರಮ ಹಣ ವರ್ಗಾವಣೆಗೂ ನನ್ನ ಸಿಮ್ ದುರ್ಬಳಕೆ ಆಗಿದೆ. ಜೆಟ್ ಏರ್ ವೇಸ್‌ನ ಮಾಲೀಕ ನರೇಶ್ ಗೋಯಲ್ ಮನೆಗೆ ದಾಳಿ ಮಾಡಿದಾಗ ನನ್ನ ಡೆಬಿಟ್ ಕಾರ್ಡ್ ಸಿಕ್ಕಿದೆ ಎಂದು ಹೇಳಿದ್ದರು. ನನ್ನ ಆಧಾರ್ ಕಾರ್ಡ್ ದುರ್ಬಳಕೆಯಾದ ಬಗ್ಗೆಯೂ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದರು. ಕೇಸಿಗೆ ಸಂಬಂಧಿಸಿದ ಕೆಲವೊಂದು ದಾಖಲಾತಿಗಳನ್ನು ಕಳುಹಿಸಿದ್ದರು ಎಂದು ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ‘ ಎಂದು ಪೊಲೀಸರು ತಿಳಿಸಿದರು.
‘ಕೆನರಾ ಬ್ಯಾಂಕ್ ಮುಂಬೈ ಶಾಖೆಯೊಂದರಲ್ಲಿ ನನ್ನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಅದಕ್ಕೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿದ ಹಣ ಜಮೆ ಮಾಲಾಗಿದೆ. ಆ ಹಣವನ್ನು ವಿದೇಶಗಳಿಗೆ ಅಕ್ರಮ ವರ್ಗಾವಣೆ ಮಾಡಲಾಗಿದೆ. ಹಣ ಸಂಗ್ರಹಿಸಿ ವಂಚಿಸಿದ ಬಗ್ಗೆ ಮುಂಬೈಯ 24 ಮಂದಿ ನನ್ನ ಮೇಲೆ ದೂರು ದಾಖಲು ಮಾಡಿದ್ದಾರೆ. ನನ್ನ ಬಂಧನಕ್ಕೆ ವಾರಂಟ್ ಜಾರಿ ಮಾಡಲಾಗಿದೆ ಎಂದು ನಂಬಿಸಿದರು. ಅದೇ ಸಂಖ್ಯೆಯಿಂದ ವಾಟ್ಸ ಆ್ಯಪ್ ಕಾಲ್ ಮಾಡಿ ಮೇಲಾಧಿಕಾರಿ ನವೋಜೋತ್ ಸಿಮಿ ಎಂಬವರ ಮೊಬೈಲ್ ಸಂಖ್ಯೆ ಇದು ಎಂದು ಇನ್ನೊಂದು ಸಂಖ್ಯೆ ನೀಡಿದ್ದರು. ಅವರ ಜೊತೆ ಮಾತನಾಡಿದಾಗ ನನ್ನ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ವಾರಂಟ್ ಜಾರಿಯಾಗಿದೆ ಎಂದು ತಿಳಿಸಿದ್ದಾರೆ. ನನ್ನ ಬ್ಯಾಂಕ್‌ಗಳಲ್ಲಿರುವ ಹಣದ ವಿವರ ಪಡೆದುಕೊಂಡಿದ್ದಾರೆ. ಆ ಹಣವನ್ನು ಅವರು ತಿಳಿಸಿದ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ವರ್ಗಾವಣೆ ಮಾಡುವಂತೆ ತಿಳಿಸಿದ್ದಾರೆ. ನಾನು ಷೇರು ವ್ಯವಹಾರದಲ್ಲಿ ಬಂದ ₹ 26.10 ಲಕ್ಷವನ್ನೂ ಅವರು ಸೂಚಿಸಿದ ಖಾತೆಗೆ ಪಾವತಸಿದ್ದೇನೆ. ಈ ರೀತಿ ನನ್ನಿಂದ ಹಂತ ಹಂತವಾಗಿ ₹ 31.20 ಲಕ್ಷ ಪಡೆದುಕೊಂಡಿದ್ದಾರೆ. ಆ ಹಣವನ್ನು ಮರಳಿಸುವುದಾಗಿ ತಿಳಿಸಿ ವಂಚಿಸಿದ್ದಾರೆ‘ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.