ವಿಟ್ಲ: ನಡೆ - ನುಡಿ ಒಂದಾಗುವುದೇ ಧರ್ಮಾನುಷ್ಠಾನ. ಧರ್ಮವೆಂಬ ರಾಜಮಾರ್ಗ ಸರಿಯಾಗಿದ್ದಾಗ ಬದುಕು ಹಸನಾಗುತ್ತದೆ. ಯುವಶಕ್ತಿ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸಂಸ್ಥಾನದಲ್ಲಿ ಡಿ. 1ರಿಂದ ಆರಂಭಗೊಂಡ ದತ್ತ ಜಯಂತಿ ಮಹೋತ್ಸವ, ದತ್ತ ಮಹಾಯಾಗ ಸಪ್ತಾಹ ಹಾಗೂ ಹರಿಕಥಾ ಸತ್ಸಂಗ ಸಪ್ತಾಹದ ಕೊನೆ ದಿನವಾದ ಬುಧವಾರ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ಚಿಂತಿಸಬೇಕಾದ ಕಾಲಘಟ್ಟವಿದು. ಸಮರ್ಪಣಾ ಭಾವದ ಭಕ್ತಿ ನಮ್ಮಲ್ಲಿರಬೇಕು. ನಮ್ಮ ಬದುಕು ಧರ್ಮ ಸೂತ್ರದ ಅಡಿಯಲ್ಲಿದೆ. ಆತ್ಮ ತತ್ವವೊಂದೇ ಸತ್ಯ. ಸಂಸಾರ ಸರಿಯಾಗರಿರಲು ಸತ್ಸಂಗಗಳು ಪೂರಕ ಎಂದರು.
ಧರ್ಮ ಎನ್ನುವುದು ಚಲನಶೀಲವಾದುದು. ತನ್ನನ್ನು ತಾನು ಅರಿತು ಕೊಳ್ಳುವವ ನಿಜವಾದ ಜ್ಞಾನಿ. ಲೋಕದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಯೂರಲಿ ಎಂದರು.
ಸಾಧ್ವಿ ಮಾತಾನಂದಮಯೀ, ಹರಿದಾಸ ಡಾ. ಪಿ. ಎಸ್. ಗುರುದಾಸ್ ಮಂಗಳೂರು, ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಾಹಾಬಲ ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ಶೆಟ್ಟಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಡಾ. ಅದೀಪ್ ಶೆಟ್ಟಿ ಮುಂಬೈ ಇದ್ದರು.
ಡಾ. ಪಿ. ಎಸ್. ಗುರುದಾಸ್ ಮಂಗಳೂರು ಅವರಿಂದ 'ಅವಧೂತೋಪಖ್ಯಾನ' ಹರಿಕಥಾ ಪ್ರಸಂಗ ನಡೆಯಿತು. ವಿಟ್ಲ ಅಯ್ಯಪ್ಪ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಒಡಿಯೂರು ಶ್ರೀ ಬಿಡುಗಡೆ ಮಾಡಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.