ADVERTISEMENT

ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆ : 3 ರಾಜ್ಯಗಳಿಗೆ ಸರ್ಕಾರ ಪತ್ರ- ಬಾವ

ತುಳು ಸ್ಥಾನಮಾನಕ್ಕಾಗಿ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಲಿ: ಮೊಹಿಯುದ್ದೀನ್‌ ಬಾವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 4:37 IST
Last Updated 25 ಫೆಬ್ರುವರಿ 2024, 4:37 IST
ಮೊಹಿಯುದ್ದೀನ್ ಬಾವ
ಮೊಹಿಯುದ್ದೀನ್ ಬಾವ   

ಮಂಗಳೂರು: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಮತ್ತು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವ ಚಳವಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳಿರುವ ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ನಮ್ಮ ರಾಜ್ಯ ಸರ್ಕಾರವು ಪತ್ರ ಬರೆದು, ಈ ಬಗ್ಗೆ ಮಾಹಿತಿ ಕೇಳಿದೆ ಎಂದು ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ತಿಂಗಳುಗಳಲ್ಲಿ ಸಾವಿರಾರು ಮಂದಿ ಪತ್ರ ಬರೆದಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ  ಡಿ. ವೀರೇಂದ್ರ ಹೆಗ್ಗಡೆಯಾದಿಯಾಗಿ  ತುಳುನಾಡಿನ ಗಣ್ಯರು, ಸುನಿಲ್‌ ಶೆಟ್ಟಿ, ಶಿಲ್ಪಾ ಶೆಟ್ಟಿ ಆದಿಯಾಗಿ ಸಿನಿಮಾ ತಾರೆಯರು ಸೇರಿದಂತೆ ಅನೇಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ’ ಎಂದರು.

‘ವಿಧಾನ ಪರಿಷತ್‌ನಲ್ಲಿ ಬಿ.ಎಂ. ಫಾರೂಕ್‌ ಹಾಗೂ ವಿಧಾನಸಭೆಯಲ್ಲಿ ಗುರ್ಮೆ ಸುರೇಶ ಶೆಟ್ಟಿ ಈ ಬಗ್ಗೆ ಪ್ರಶ್ನೆ ಕೇಳಿದ್ದು, ಚರ್ಚೆಗೆ ಸೋಮವಾರ ಸಮಯ ನಿಗದಿಯಾಗಿದೆ. ಈ ಚರ್ಚೆಯಲ್ಲಿ ತುಳುನಾಡಿನ  ಶಾಸಕರು ಸಕ್ರಿಯವಾಗಿ ಭಾಗವಹಿಸಿ ತುಳುವಿಗೆ ರಾಜ್ಯದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನಕ್ಕಾಗಿ ಆಗ್ರಹಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ತುಳುನಾಡಿನ  ಸಂಘ ಸಂಸ್ಥೆಗಳು, ವಿವಿಧ ರಂಗಗಳ ಪ್ರಮುಖರ ಸಂವಾದವನ್ನು ಮಾ.2ರಂದು ಸಂಜೆ 5 ಗಂಟೆಗೆ ನಗರದಲ್ಲಿ ಆಯೋಜಿಸಿದ್ದೇವೆ. ಸಭೆಯಲ್ಲಿ ವ್ಯಕ್ತವಾಗು ಅಭಿಪ್ರಾಯ ಆಧರಿಸಿ ಮುಂದಿನ ಹೋರಾಟ ರೂಪಿಸಲಾಗುವುದು’ ಎಂದರು.
ತುಳುನಾಡು ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.

‘ಕಾಂಗ್ರೆಸ್‌ಗೆ ಮರಳುವಂತೆ ಸುರ್ಜೇವಾಲ ಆಹ್ವಾನ’

‘ಕಾಂಗ್ರೆಸ್‌ಗೆ ಬರುವಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ನನಗೆ ಆಹ್ವಾನ ನೀಡಿದ್ದಾರೆ.  ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಾನೀಗ ಜೆಡಿಎಸ್‌ನಲ್ಲಿದ್ದರೂ ರಾಜಕೀಯವಾಗಿ ಸ್ವತಂತ್ರನಿದ್ದೇನೆ. ತಪ್ಪು ನಡೆದಾಗ ಯಾವ ಪಕ್ಷದ ವಿರುದ್ಧ ಬೇಕಾದರೂ ಮಾತನಾಡುತ್ತೇನೆ. ಆದರೆ ಸ್ವಾಭಿಮಾನವನ್ನು ಬಿಟ್ಟು ಕೊಡುವುದಿಲ್ಲ’ ಎಂದು ಮೊಹಿಯುದ್ದೀನ್‌ ಬಾವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.