ADVERTISEMENT

ಪ್ರಾಕೃತಿಕ ವಿಕೋಪ: ಪ್ರಸ್ತಾವ ಸಲ್ಲಿಸಿ; ಸಿಇಒ ಡಾ. ಆನಂದ್

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 4:48 IST
Last Updated 23 ಅಕ್ಟೋಬರ್ 2024, 4:48 IST
ಡಾ. ಆನಂದ್
ಡಾ. ಆನಂದ್    

ಮಂಗಳೂರು: ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪದ ಅಪಾಯ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ತಗ್ಗಿಸುವಿಕೆ ಅನುದಾನದ ಅಡಿಯಲ್ಲಿ ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ತಿಳಿಸಿದರು.

ಮಿಟಿಗೇಶನ್ ಅನುದಾನದ ಬಳಕೆ, ಕಡಲತೀರದ ನಿರ್ವಹಣಾ ಕಾರ್ಯತಂತ್ರ ಅನುಷ್ಠಾನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಂಗಳವಾರ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ಮೂಲ ಸೌಕರ್ಯ ಸುಧಾರಣೆ, ಪ್ರವಾಹದ ನೀರು ಹರಿಯಲು ಚರಂಡಿ ವ್ಯವಸ್ಥೆ ಇದರಲ್ಲಿ ಸೇರಿದೆ. ರಕ್ಷಣಾತ್ಮಕ ಕ್ರಮ ಕೈಗೊಂಡು ಸಂಭಾವ್ಯ ಪ್ರಾಕೃತಿಕ ಅಪಾಯ ತಡೆಗಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಂಭಾವ್ಯ ಅಪಾಯ ಪ್ರದೇಶಗಳಿಗೆ ಭೇಟಿ ನೀಡಿ, ಪ್ರಸ್ತಾವ ಸಲ್ಲಿಸಬೇಕು. ಕಾಮಗಾರಿಯ ಅಗತ್ಯ ಮತ್ತು ಪ್ರಯೋಜನಗಳ ಬಗ್ಗೆಯೂ ಉಲ್ಲೇಖಿಸಬೇಕು ಎಂದರು. 

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಸಂತೋಷಕುಮಾರ್ ಮಾತನಾಡಿ, ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ಎಪಿಎಂಸಿ ಮೂಲಕ ಹಾದುಹೋಗುವ ರಾಜಕಾಲುವೆ ಸಮರ್ಪಕವಾಗಿಲ್ಲ. ಹೀಗಾಗಿ, ಹಲವು ವರ್ಷಗಳಿಂದ ಕೈಗಾರಿಕಾ ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರವಾಹ ತಲೆದೋರುತ್ತದೆ. ಅದೇ ರೀತಿ ಮರವೂರು ಕಿಂಡಿ ಅಣೆಕಟ್ಟೆ, ಹಿನ್ನೀರು ಪ್ರದೇಶ ಅದ್ಯಪಾಡಿಯಲ್ಲಿ ನೆರೆ ಉಂಟಾಗುತ್ತಿದೆ. ಮಿಟಿಗೇಷನ್ ಅನುದಾನದಲ್ಲಿ ಇಲ್ಲಿನ ನೆರೆ ನಿಯಂತ್ರಣಕ್ಕೆ ಅಗತ್ಯ ಕಾಮಗಾರಿಗೆ ಪ್ರಸ್ತಾವ ಸಲ್ಲಿಸಲು ಅವರು ಸೂಚಿಸಿದರು.

ಕಡಲ ತೀರ ನಿರ್ವಹಣೆ: ಜಿಲ್ಲೆಯ 11 ಸ್ಥಳಗಳಲ್ಲಿ ಕಡಲ್ಕೊರೆತ ಸಮಸ್ಯೆ ನಿವಾರಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧೀನದ ರಾಷ್ಟ್ರೀಯ ಸಮರ್ಥನೀಯ ಕರಾವಳಿ ನಿರ್ವಹಣಾ ಕೇಂದ್ರವು ಅಧ್ಯಯನ ನಡೆಸಿ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ಸೂಚಿಸಿದೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಟ್ಟಿ ಮತ್ತು ಮರಳು ಪೋಷಣೆಯ ಮೂಲಕ ಕಡಲ್ಕೊರೆತ ನಿರ್ವಹಿಸಲು ವರದಿಯಲ್ಲಿ ತಿಳಿಸಲಾಗಿದೆ. ಕಡಲ ತೀರ ನಿರ್ವಹಣೆ ಯೋಜನೆ ರೂಪಿಸದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದೆಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಈಗಾಗಲೇ ಎಡಿಬಿ ಯೋಜನೆಯ ಟ್ರಂಚ್-3 ಅಡಿಯಲ್ಲಿ ₹355 ಕೋಟಿ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಸಮನ್ವಯಾಧಿಕಾರಿ ವಿಜಯಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.