ADVERTISEMENT

ಕಡಲ ಒಡಲು ಸೇರಿದ ಆಮೆ ಮರಿಗಳು

ಸಸಿಹಿತ್ಲು: 113 ಮೊಟ್ಟೆಗಳಿಂದ 88 ಮರಿಗಳ ಜನನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 21:03 IST
Last Updated 21 ಫೆಬ್ರುವರಿ 2024, 21:03 IST
ಸಸಿಹಿತ್ಲುವಿನಲ್ಲಿ ಅರಬ್ಬೀಸಮುದ್ರದ ಕಿನಾರೆಯಲ್ಲಿ ಮೊಟ್ಟೆಯೊಡೆದು ಹೊರಬಂದ ಕಡಲಾಮೆ ಮರಿಗಳು ಕಡಲು ಸೇರುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ನೆರವಾದರು
ಸಸಿಹಿತ್ಲುವಿನಲ್ಲಿ ಅರಬ್ಬೀಸಮುದ್ರದ ಕಿನಾರೆಯಲ್ಲಿ ಮೊಟ್ಟೆಯೊಡೆದು ಹೊರಬಂದ ಕಡಲಾಮೆ ಮರಿಗಳು ಕಡಲು ಸೇರುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ನೆರವಾದರು   

ಮಂಗಳೂರು: ಸಸಿಹಿತ್ಲು ಕಡಲ ಕಿನಾರೆಯಲ್ಲಿ ಕಡಲಾಮೆ ಮೊಟ್ಟೆಗಳಿಂದ ಆಮೆ ಮರಿಗಳು ಬುಧವಾರ ಹೊರಬಂದಿದ್ದು ಸುರಕ್ಷಿತವಾಗಿ ಕಡಲ ಒಡಲು ಸೇರಿವೆ.

‘ಒಟ್ಟು 113 ಮೊಟ್ಟೆಗಳಲ್ಲಿ 88 ಮರಿಗಳು ಹೊರಬಂದಿವೆ. ಅಲ್ಲಿ ಕಡಲಾಮೆ ಮೊಟ್ಟೆ ಇಟ್ಟಿದ್ದು  2023ರ ಡಿ.31ರಂದು ಮುಂಜಾನೆ ಪತ್ತೆಯಾಗಿತ್ತು. ಅಲ್ಲಿ ಒಟ್ಟು 113 ಮೊಟ್ಟೆಗಳಿದ್ದವು’ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ’ಪ್ರಜಾವಾಣಿ‘ಗೆ ತಿಳಿಸಿದರು.

‘ಕಡಲಾಮೆ ಮೊಟ್ಟಗಳಿಂದ ಸಾಮಾನ್ಯವಾಗಿ 53 ರಿಂದ 55 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಸಸಿಹಿತ್ಲುವಿನಲ್ಲಿ ಒಟ್ಟು 12 ಕಡೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ. ಅದರಲ್ಲಿ ಮರಿಗಳು ಹೊರಗೆ ಬಂದಿದ್ದು ಇದೇ ಮೊದಲು. ಇಲ್ಲಿ ಇನ್ನೊಂದು ಜಾಗದಲ್ಲಿರುವ ಮೊಟ್ಟೆಗಳಿಂದ ಮರಿಗಳು ಒಂದು ವಾರ ಬಿಟ್ಟು ಹೊರಗೆ ಬರುವ ನಿರೀಕ್ಷೆ ಇದೆ’ ಎಂದರು.

ADVERTISEMENT

‘ಅಪಾಯದ ಅಂಚಿನಲ್ಲಿರುವ ಕಡಲಾಮೆ ಮೊಟ್ಟೆಯಿಂದ ಮರಿಗಳು ಹೊರ ಬಂದಿದ್ದು ನಮ್ಮ ಜಿಲ್ಲೆಯಲ್ಲಿ 1985ರಲ್ಲಿ ಕೊನೆಯ ಸಲ ದಾಖಲಾಗಿತ್ತು. ಆ ಬಳಿಕ ಇದೇ ಮೊದಲ ಸಲ ಕಾಣುತ್ತಿದ್ದೇವೆ’ ಎಂದರು.

‘ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1ರಡಿ ರಕ್ಷಣೆ ಪಡೆದಿರುವ ಕಡಲಾಮೆಯ ಮೊಟ್ಟೆಗಳು ಸಸಿಹಿತ್ಲುವಿನಲ್ಲಿ ಪತ್ತೆಯಾದ ಬಳಿಕ ಅವುಗಳ ಸುತ್ತ ರಕ್ಷಣಾ ಬೇಲಿ ನಿರ್ಮಿಸಿದ್ದೆವು. ನಮ್ಮ ಇಲಾಖೆಯ ಸಿಬ್ಬಂದಿ ನಿತ್ಯ ಕಾವಲು ಕಾಯುತ್ತಿದ್ದರು. ಆಮೆ ಮರಿಗಳು ಸುರಕ್ಷಿತವಾಗಿ ಕಡಲು ಸೇರುವವರೆಗೂ ಅವುಗಳ ರಕ್ಷಣೆ ಮಾಡಿದ್ದಾರೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್‌ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಸಿಹಿತ್ಲುವಿನಲ್ಲಿ 12 ಕಡೆ ಹಾಗೂ ಇತರ ಮೂರು ಕಡೆ ಸೇರಿ ಒಟ್ಟು 15 ಕಡೆ ಕಡಲಾಮೆಯ ಮೊಟ್ಟೆಗಳನ್ನು ‌ಈ ವರ್ಷ ಸ್ಥಳೀಯರ ನೆರವಿನಿಂದ ಪತ್ತೆಹಚ್ಚಲಾಗಿದೆ. ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮವಹಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.