ADVERTISEMENT

ಏಕ ಭಾಷೆಯ ಪ್ರತಿಪಾದನೆಯೇ ಫ್ಯಾಸಿಸಂ ಆರಂಭ: ಚಿಂತಕ ಪ್ರೊ.ಕೆ.ಸಚ್ಚಿದಾನಂದನ್‌ ಆತಂಕ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 15:14 IST
Last Updated 14 ಸೆಪ್ಟೆಂಬರ್ 2019, 15:14 IST
ಪ್ರೊ.ಕೆ.ಸಚ್ಚಿದಾನಂದನ್‌
ಪ್ರೊ.ಕೆ.ಸಚ್ಚಿದಾನಂದನ್‌   

ಮಂಗಳೂರು: ಏಕಭಾಷೆಯ ಪರಿಕಲ್ಪನೆಯೇ ಫ್ಯಾಸಿಸಂಗೆ ನಾಂದಿ ಹಾಡುತ್ತದೆ. ದೇಶಕ್ಕೆ ಒಂದೇ ಭಾಷೆ ಇರಬೇಕು ಎಂದು ಪ್ರತಿಪಾದಿಸುವವರು ಭಾರತದ ಶತ್ರುಗಳು ಎಂದು ಕೇರಳದ ಪ್ರಸಿದ್ಧ ಕವಿ ಮತ್ತು ಚಿಂತಕ ಪ್ರೊ.ಕೆ.ಸಚ್ಚಿದಾನಂದನ್‌ ಹೇಳಿದರು.

‘ದೇಶಕ್ಕೆ ಒಂದೇ ಭಾಷೆ ಅಗತ್ಯವಿದೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಪಾದನೆಗೆ ಕವಿತಾ ಟ್ರಸ್ಟ್‌ ವತಿಯಿಂದ ನಗರದ ಸೇಂಟ್‌ ಆ್ಯಗ್ನೆಸ್‌ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಸಚ್ಚಿದಾನಂದನ್‌, ‘ಒಂದು ಭಾಷೆ, ಒಂದು ಧರ್ಮಕ್ಕೆ ಮಾತ್ರ ಮಾನ್ಯತೆ ನೀಡಬೇಕು ಎಂಬುದು ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದರು.

‘ಶುದ್ಧತೆಯ ವ್ಯಸನದಿಂದಾಗಿಯೇ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ ಇರಬೇಕು ಎಂಬ ಪ್ರತಿಪಾದನೆ ಬೆಳೆಯುತ್ತದೆ. ಶುದ್ಧವಾದುದು ಮಾತ್ರ ಉಳಿಯಬೇಕು, ಅಶುದ್ಧವಾದುದನ್ನು ನಾಶ ಮಾಡಬೇಕು ಎಂಬ ಭಾವನೆ ಸೃಷ್ಟಿಯಾಗುತ್ತದೆ. ಹಿಟ್ಲರ್‌ನ ಕಾಲದಲ್ಲಿ ಫ್ಯಾಸಿಸಂ ಆರಂಭವಾದುದು ಹೀಗೆಯೇ. ಅಶುದ್ಧರು ಎಂದು ಒಂದು ಸಮೂಹವನ್ನು ಗುರುತಿಸಿ, ಅವರನ್ನು ಹತ್ಯೆ ಮಾಡುವವರೆಗೂ ಇದು ಸಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಜಗತ್ತಿನಲ್ಲಿ ಯಾವ ಭಾಷೆಯೂ ಶುದ್ಧವಾದುದಲ್ಲ. ಹಾಗೆಯೇ ಯಾರ ರಕ್ತವೂ ಶುದ್ಧವಾದುದಲ್ಲ. ರಕ್ತದ ಮೂಲ ಹುಡುಕಿದರೆ ಜಗತ್ತಿನ ಯಾವುದೋ ಮೂಲೆಗೆ ಹೋಗಿ ನಿಲ್ಲಬಹುದು. ಭಾರತದ ಎಲ್ಲ ಭಾಷೆಗಳೂ ಇತರ ಭಾಷೆಗಳಿಂದ ಹಲವು ಪದಗಳನ್ನು ಎರವಲು ಪಡೆದುಕೊಂಡಿವೆ. ಭಾಷೆ ಮತ್ತು ರಕ್ತದಲ್ಲಿ ಶುದ್ಧತೆಯನ್ನು ಹುಡುಕುವುದೇ ತಪ್ಪು ಎಂದರು.

ಎಲ್ಲ ಭಾಷೆಗಳೂ ಸ್ವತಂತ್ರ:

ದೇಶದಲ್ಲಿರುವ ಎಲ್ಲ ಭಾಷೆಗಳೂ ಸ್ವತಂತ್ರವಾದ ಅಸ್ಮಿತೆಯನ್ನು ಹೊಂದಿವೆ. ಅವುಗಳಲ್ಲಿ ಮೇಲು, ಕೀಳು ಹುಡುಕುವುದು ಸಾಧ್ಯವಿಲ್ಲ. ಎಷ್ಟು ಜನ ಬಳಕೆ ಮಾಡುತ್ತಾರೆ ಎಂಬುದನ್ನು ಆಧರಿಸಿ ಒಂದು ಭಾಷೆಯ ಭವಿಷ್ಯವನ್ನು ನಿರ್ಧರಿಸಲಾಗದು. ಒಂದು ಭಾಷೆ ನಶಿಸಿದರೆ ಅದರೊಂದಿಗೆ ಜಗತ್ತನ್ನು ಗ್ರಹಿಸುವ ಒಂದು ವಿಧಾನವೂ ನಾಶವಾಗುತ್ತದೆ ಎಂದು ಪ್ರತಿಪಾದಿಸಿದರು.

ಬಹುತ್ವವೇ ಭಾರತದ ಪ್ರಜಾಪ್ರಭುತ್ವದ ಜೀವಾಳ. ಅದು ಉಳಿಯಬೇಕಾದರೆ ಇಲ್ಲಿರುವ ಹಲವು ಭಾಷೆ, ಹಲವು ಧರ್ಮ, ಹಲವು ಸಂಸ್ಕೃತಿಗಳೂ ಉಳಿಯಬೇಕು. ಆ ಮೂಲಕವೇ ಸಹಿಷ್ಣುತೆ ಪಸರಿಸಬೇಕು. ಸಾಂಸ್ಕೃತಿಕ ರಾಷ್ಟ್ರೀಯವಾದದ ಹೆಸರಿನಲ್ಲಿ ಕೆಲವು ಮಾತ್ರ ಭಾರತೀಯ, ಉಳಿದವು ಅಲ್ಲ ಎಂಬ ಪ್ರತಿಪಾದನೆ ಮಾಡುವುದು ಸಲ್ಲ ಎಂದರು.

‘1947ರಿಂದ 2019ರವರೆಗೆ ಭಾರತವು ಏಕ ಭಾಷೆಯ ಆಧಾರದಲ್ಲಿ ಬೆಳೆದಿಲ್ಲ. ಬಹುಭಾಷಾ ಸೂತ್ರದ ಅಡಿಯಲ್ಲಿ ನಾವು ನಮ್ಮ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಈ ವಿಚಾರವನ್ನು ಏಕ ಭಾಷೆಯ ಪ್ರತಿಪಾದಕರು ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಸಚ್ಚಿದಾನಂದನ್‌ ಹೇಳಿದರು.

ಹಿಂದಿ, ಇಂಗ್ಲಿಷ್‌ ಭಾಷೆಗಳ ಜೊತೆಯಲ್ಲೇ ಸ್ಥಳೀಯ ಭಾಷೆಗಳನ್ನೂ ಗಟ್ಟಿಗೊಳಿಸಬೇಕಿದೆ. ಪ್ರಾದೇಶಿಕ ಭಾಷೆಗಳು ಎಂಬ ಪರಿಕಲ್ಪನೆಯನ್ನೇ ಕಿತ್ತು ಹಾಕಬೇಕು. ಕನ್ನಡ, ಮಲಯಾಳ, ತಮಿಳು, ತೆಲುಗು ಸೇರಿದಂತೆ ಎಲ್ಲ ಮಾತೃ ಭಾಷೆಗಳನ್ನೂ ರಾಷ್ಟ್ರ ಭಾಷೆಗಳೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.