ADVERTISEMENT

ಆನ್‌ಲೈನ್ ವಂಚನೆ: ₹ 30.65 ಲಕ್ಷ ನಷ್ಟ- ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:23 IST
Last Updated 8 ನವೆಂಬರ್ 2024, 4:23 IST

ಮಂಗಳೂರು: ಇಲ್ಲಿನ ವ್ಯಕ್ತಿಯೊಬ್ಬರ ಮೊಬೈಲ್ ಸಂಖ್ಯೆ ಬಳಸಿ ಆನ್‌ಲೈನ್ ವಂಚನೆ ನಡೆಸಲಾಗಿದೆ ಎಂದು ನಂಬಿಸಿ ಇಲ್ಲಿನ ಅವರಿಂದ ₹ 30.65 ಲಕ್ಷ ಹಣ ಪಡೆದು ಆನ್‌ಲೈನ್‌ ವಂಚನೆ ನಡೆಸಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ನನ್ನ ಮೊಬೈಲ್‌ಗೆ ಅ.19ರಂದು ಬೆಳಿಗ್ಗೆ 9.30ಕ್ಕೆ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಇಂಗ್ಲಿಷ್‌ನಲ್ಲಿ ಮಾತನಾಡಿದ ವ್ಯಕ್ತಿಯು, ‘ಮುಂಬೈ ಸಹರಾ ಪೋಲಿಸ್ ಠಾಣೆಯಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್‌ನಿಂದ ಆನ್ ಲೈನ್ ವಂಚನೆ ನಡೆಸಿದ ಬಗ್ಗೆ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್ ಪೋರ್ಟ್‌ನಲ್ಲಿ ದೂರು ದಾಖಲಾಗಿದೆ’ ಎಂದು ತಿಳಿಸಿದ್ದ. ಅದೇ ದಿನ ಬೆಳಿಗ್ಗೆ 11 ಗಂಟೆಗೆ ಇನ್ನೊಂದು ಮೊಬೈಲ್‌ನಿಂದ ಮತ್ತೊಬ್ಬ ವ್ಯಕ್ತಿ ವೀಡಿಯೊ ಕಾಲ್ ಮಾಡಿದ್ದ. ಪೊಲೀಸ್ ಸಮವಸ್ತ್ರದಲ್ಲಿದ್ದ ಆ ವ್ಯಕ್ತಿ ತನ್ನನ್ನು ಮೋಹನ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ.’

'ನನ್ನ ಹೆಸರಿನಲ್ಲಿ ಮುಂಬೈನ ಎಸ್.ಬಿ.ಐ ಬ್ಯಾಂಕಿನ ಶಾಖೆಯೊಂದರಲ್ಲಿ ಎಂಬಾತ  ಖಾತೆ ತೆರೆದು ಮಾನವ ಕಳ್ಳಸಾಗಾಣಿಕೆ ಮೂಲಕ ಸುಮಾರು ₹ 3.9 ಕೋಟಿ ವಂಚನೆ ಮಾಡಿದ್ದಾನೆ. ಆತನನ್ನು ಬಂಧಿಸಿದಾಗ ಆ ಅವ್ಯವಹಾರದ ಹಣದಲ್ಲಿ₹ 38 ಲಕ್ಷ  ಕಮಿಷನ್ ಅನ್ನು ನನಗೆ ನೀಡಿರುವುದಾಗಿ ತಿಳಿಸಿದ್ದಾನೆ’ ಎಂದು ಹೇಳಿದ್ದ. ಅದನ್ನು ನಾನು ಅಲ್ಲಗಳೆದಿದ್ದೆ. ‘ನನ್ನ ಎಲ್ಲಾ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ನನ್ನ ವಿರುದ್ದ ಅರೆಸ್ಟ್ ವಾರಂಟ್ ಇದೆ ಎಂದು ಎಂದು ಆತ ತಿಳಿಸಿದ್ದ. ಅವರು ಹೇಳಿದ ಖಾತೆಗೆ ಹಣ ಹಾಕದಿದ್ದರೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದ. ಅವರ ಮಾತನ್ನು ನಂಬಿ ನಾನು ಅವರು ಸೂಚಿಸಿದ ಖಾತೆಗೆ ಅ. 21ರಂದು ₹ 2.65 ಲಕ್ಷ, ಅ. 22ರಂದು ₹ 14 ಲಕ್ಷ,  ಅ.23ರಂದು ₹ 14 ಲಕ್ಷ ಹಣ ವರ್ಗಾವಣೆ ಮಾಡಿದ್ದೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.