ಮಂಗಳೂರು: ಇಸ್ರೇಲ್ ಮೇಲಿನ ಅಭಿಮಾನದಿಂದ ಇಲ್ಲಿನ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್‌ಗೆ ‘ಇಸ್ರೇಲ್’ ಎಂದು ಹೆಸರಿಟ್ಟಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಬೇಸತ್ತ ಅವರು ಬಸ್ ಹೆಸರನ್ನು ‘ಜೆರುಸಲೇಂ’ ಎಂದು ಈಚೆಗೆ ಬದಲಾಯಿಸಿದ್ದಾರೆ.
ಕಟೀಲಿನ ಲೆಸ್ಟರ್ ಅವರು 12 ವರ್ಷಗಳಿಂದ ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಮೂಡುಬಿದಿರೆ - ಕಿನ್ನಿಗೋಳಿ- ಕಟೀಲು- ಮೂಲ್ಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಳೆ ಬಸ್ ಒಂದನ್ನು ಈಚೆಗೆ ಖರೀದಿಸಿದ್ದ ಅವರು ಅದಕ್ಕೆ ‘ಇಸ್ರೇಲ್’ ಎಂದು ಹೆಸರಿಟ್ಟಿದ್ದರು. ಇಸ್ರೇಲ್- ಪ್ಯಾಲೆಸ್ಟೀನ್, ಇಸ್ರೇಲ್– ಇರಾನ್ ನಡುವೆ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಬಸ್ ಹೆಸರು ‘ಇಸ್ರೇಲ್’ ಎಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಸ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಕೆಟ್ಟದಾಗಿ ಕಮೆಂಟ್ ಹಾಕಿದ್ದರು.
ಬಸ್‌ನ ಹೆಸರು ಬದಲಾಯಿಸಿದ ಬಗ್ಗೆ ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಲೆಸ್ಟರ್, ‘ನನಗೆ ಬದುಕು ನೀಡಿದ್ದೇ ಇಸ್ರೇಲ್. ನಮ್ಮ ಪವಿತ್ರ ಭೂಮಿ ಜೆರುಸಲೇಂ ಇರುವ ದೇಶವಿದು. ಇಲ್ಲಿನ ವ್ಯವಸ್ಥೆ ನನಗೆ ತುಂಬಾ ಇಷ್ಟ. ಈ ಅಭಿಮಾನದಿಂದಾಗಿ, ನಾನು ಬಸ್‌ಗೆ ‘ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರು ಇಟ್ಟಿದ್ದೆ. ಈ ಬಗ್ಗೆ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ಪದಗಳನ್ನು ಬಳಸಿ ಕಮೆಂಟ್ ಹಾಕಿದ್ದನ್ನು ನೋಡಿ ಬೇಸರವಾಯಿತು. ಹಾಗಾಗಿ ಬಸ್ ಹೆಸರನ್ನು ಬದಲಾಯಿಸಿದೆ’ ಎಂದರು.
‘ಬಸ್‌ನ ಹೆಸರು ಬದಲಾಯಿಸುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ಇಸ್ರೇಲ್ ಹೆಸರಿನ ಬಗ್ಗೆ ಕೆಲವರಿಗೆ ತಕರಾರು ಏಕೆಂದು ಅರ್ಥವಾಗುತ್ತಿಲ್ಲ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಹಾಗಾಗಿ ಬಸ್‌ನ ಹೆಸರು ಬದಲಿಸುವ ತೀರ್ಮಾನವನ್ನು ನಾನೇ ತೆಗೆದುಕೊಂಡೆ’ ಎಂದರು.
ಲೆಸ್ಟರ್ ಅವರು ಈಗಲೂ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದು, ಕಟೀಲಿನಲ್ಲಿರುವ ಅವರ ಕುಟುಂಬದವರು ಬಸ್‌ನ ನಿರ್ವಹಣೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.