ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತಿನಂತೆ, ಪದಕ ವಿಜೇತ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಅವರೊಂದಿಗೆ ಐಸ್‌ಕ್ರಿಂ ಸವಿಯಲು ಸಿದ್ಧವಾಗಿದ್ದಾರಾ? ಅದಕ್ಕಾಗಿ ಗಡ್‌ಬಡ್ ಐಸ್‌ಕ್ರೀಂ ಕಳುಹಿಸಲು ಪಬ್ಬಾಸ್ ಉತ್ಸುಕವಾಗಿದೆ’ ಎಂದು ಹೆಸರಾಂತ ಐಸ್‌ಕ್ರೀಂ ಕಂಪನಿ ಪಬ್ಬಾಸ್ ಟ್ವೀಟ್ ಮಾಡಿದೆ.
ಪಿ.ವಿ. ಸಿಂಧು ಅವರು ಟೋಕಿಯೊ ಒಲಿಂಪಿಕ್‌ಗೆ ತೆರಳುವುದಕ್ಕೂ ಮುನ್ನ ಅವರೊಡನೆ ವರ್ಚುವಲ್ ಆಗಿ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಒಲಿಂಪಿಕ್ ನಂತರ ಜೊತೆಯಾಗಿ ಐಸ್‌ಕ್ರೀಂ ಸವಿಯುವುದಾಗಿ ಭರವಸೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಡಿಯಲ್ ಐಸ್‌ಕ್ರೀಂ ಮಾಲೀಕ ಎಸ್. ಮುಕುಂದ ಕಾಮತ್, ‘ನಮ್ಮ ಟ್ವೀಟ್ ಕುರಿತು ಪಿ.ವಿ. ಸಿಂಧು ಹಾಗೂ ಪ್ರಧಾನಿ ಮೋದಿ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಉತ್ತರ ಬಂದ ತಕ್ಷಣವೇ ವಿಮಾನದ ಮೂಲಕ ದೆಹಲಿಗೆ ಗಡ್‌ಬಡ್ ಕಳುಹಿಸಲು ಸಿದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.
‘1999ರಲ್ಲಿ ರಾಜಕೀಯ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದ ನರೇಂದ್ರ ಮೋದಿ ಅವರು ನಮ್ಮ ಐಸ್‌ಕ್ರೀಂ ಸವಿದು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಗುಜರಾತಿನ ಮುಖ್ಯಮಂತ್ರಿ ಆಗುವ ಮೊದಲಿನ ಘಟನೆ ಇದಾಗಿದೆ. ಆಗ ನಮ್ಮ ಮಳಿಗೆ ಬಲ್ಮಠದ ಜಿಎಚ್‌ಎಸ್ ರಸ್ತೆಯಲ್ಲಿತ್ತು. ಅಲ್ಲಿಗೆ ಬಂದಿದ್ದ ಮೋದಿ ಹಾಗೂ ಇತರ ನಾಯಕರು ನಮ್ಮ ಕಚೇರಿಯಲ್ಲಿ ಕುಳಿತು ಐಸ್‌ಕ್ರೀಂ ಸವಿದಿದ್ದರು’ ಎಂದು ಕಾಮತ್ ನೆನಪಿಸಿಕೊಂಡರು.
ಮಂಗಳೂರಿನಲ್ಲಿ ಐಡಿಯಲ್, ಹಾಂಗ್ಯೊ ಸೇರಿದಂತೆ ಹಲವು ಐಸ್‌ಕ್ರೀಂ ತಯಾರಿಕೆ ಕಂಪನಿಗಳಿದ್ದು, ‘ಪಬ್ಬಾಸ್’ ಜನರಿಗೆ ಹೆಚ್ಚು ಪರಿಚಿತವಾಗಿದೆ. ಪಬ್ಬಾಸ್‌ನಲ್ಲಿ 40ಕ್ಕೂ ಅಧಿಕ ರುಚಿಗಳ 175ಕ್ಕೂ ಅಧಿಕ ಐಸ್‌ಕ್ರೀಂಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.