ADVERTISEMENT

ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿಗೆ ಸ್ಟಂಟ್ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 2:02 IST
Last Updated 9 ಮೇ 2022, 2:02 IST
ಸುಕ್ರಿ ಗೌಡ
ಸುಕ್ರಿ ಗೌಡ   

ಮಂಗಳೂರು: ನಗರದ ಜ್ಯೋತಿ ಸರ್ಕಲ್‌ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಅವರಿಗೆ ಭಾನುವಾರ ಸ್ಟಂಟ್ ಅಳವಡಿಸಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ತಿಂಗಳುಗಳಿಂದ ಅವರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ನಾಲ್ಕು ದಿನಗಳಿಂದ ಈಚೆಗೆ ತಲೆಸುತ್ತು ಬರುತ್ತಿದ್ದುದರಿಂದ ಶನಿವಾರ ಅವರನ್ನು ಮಂಗಳೂರಿನ ಕೆಎಂಸಿಗೆ ಕರೆತರಲಾಗಿತ್ತು. ಪರೀಕ್ಷೆಯ ವೇಳೆ ಅವರಿಗೆ ಹೃದಯದಲ್ಲಿ ಸಮಸ್ಯೆ ಕಂಡುಬಂದ ಕಾರಣ, ಸ್ಟಂಟ್ ಅಳವಡಿಸಲಾಗಿದೆ. ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಸುಕ್ರಿ ಗೌಡ ಆರೋಗ್ಯ ಸುಧಾರಣೆ ಗಮನಿಸಿ, ಇನ್ನೆರಡು ದಿನಗಳಲ್ಲಿ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ ತಿಳಿಸಿದರು.

‘ಸುಕ್ರಿ ಗೌಡ ಅವರ ಮನೆಗೆ ಅಂಕೋಲಾಕ್ಕೆ ಭೇಟಿ ನೀಡಿದ್ದ, ಮಂಗಳೂರಿನ ಅನೇಕ ಕಾಲೇಜುಗಳ ವಿದ್ಯಾರ್ಥಿಗಳು, ಅವರ ಅಭಿಮಾನಿಗಳು ಅನೇಕರು ಆಸ್ಪತ್ರೆಗೆ ಬಂದು, ಸುಕ್ರಜ್ಜಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಹೇಳಿರುವ ಕಾರಣ ಸದ್ಯಕ್ಕೆ ಅವರ ಭೇಟಿ ಸಾಧ್ಯವಾಗದು. ಗುಣಮುಖರಾದ ಮೇಲೆ ಅವರನ್ನು ಭೇಟಿ ಮಾಡಬಹುದು’ ಎಂದು ದಿನೇಶ್ ಹೊಳ್ಳ ವಿನಂತಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.