ಮಂಗಳೂರು: ‘ಸಮಾಜದ ಎಲ್ಲ ಮೂಲೆಗಳಲ್ಲೂ ಆತಂಕ ಮನೆ ಮಾಡಿದೆ. ಎಲ್ಲರೂ ಆತಂಕದಲ್ಲೇ ಬದುಕುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ಉತ್ತಮ ಸಮಾಜ ನಿರ್ಮಾಣದ ಭರವಸೆ ಉಳಿದಿದ್ದರೆ ಅದು ಪತ್ರಿಕೆಗಳಿಂದ ಮಾತ್ರ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಪತ್ರಿಕೆಯ ಕೊಡಗು ಜಿಲ್ಲೆಯ ವಿಶೇಷ ವರದಿಗಾರ ಕೆ.ಎಂ. ಇಸ್ಮಾಯಿಲ್ ಕಂಡಕರೆ ಅವರಿಗೆ ‘ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಜನರ ಭಯವನ್ನು ಬಂಡವಾಳ ಮಾಡಿಕೊಳ್ಳದೇ ವ್ಯವಸ್ಥೆಯನ್ನು ಸದಾ ಜಾಗೃತ ಸ್ಥಿತಿಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಪತ್ರಿಕಾ ಬರವಣಿಗೆ ಮಾಂತ್ರಿಕತೆಯನ್ನೇ ಸೃಷ್ಟಿಸಬಲ್ಲುದು. ಆದರೆ, ಪದ ಬಳಕೆಯಲ್ಲಿ ಸದಾ ಎಚ್ಚರ ವಹಿಸಬೇಕು’ ಎಂದರು.
ಪತ್ರಕರ್ತ ದಿ. ಪದ್ಯಾಣ ಗೋಪಾಲಕೃಷ್ಣ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ ಪತ್ರಕರ್ತ ಚಿದಂಬರ ಬೈಕಂಪಾಡಿ, ‘ವರ್ತಮಾನದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಭೂತಕಾಲದ ಜ್ಞಾನವೂ ಅಗತ್ಯ. ಭವಿಷ್ಯದ ಕುರಿತ ಆಲೋಚನೆ ರೂಪಿಸಿಕೊಳ್ಳಲು ಇದು ನೆರವಾಗುತ್ತದೆ’ ಎಂದರು.
ಪ್ರಶಸ್ತಿ ಸ್ವೀಕರಿಸಿದ ಇಸ್ಮಾಯಿಲ್ ಕಂಡಕೆರೆ, ‘ನನ್ನ ತಾಯ್ನುಡಿ ಮಲಯಾಳ. ಕನ್ನಡವನ್ನು ಸರಿಯಾಗಿ ಮಾತನಾಡಲು ಬರುವುದಿಲ್ಲ. ಅದರೆ, ಕನ್ನಡದಲ್ಲಿ ಚೆನ್ನಾಗಿ ಬರೆಯಬಲ್ಲೆ. ಚಿಕ್ಕಪ್ಪ ಕೋಳಿಮಾಂಸದ ಅಂಗಡಿಯನ್ನು ನಡೆಸುತ್ತಿದ್ದರು. ಕೋಳಿ ಮಾಂಸದ ದರವನ್ನು ತಿಳಿಯಲು ತರುತ್ತಿದ್ದ ಪತ್ರಿಕೆ ಓದಿ, ಪತ್ರಿಕಾ ಬರವಣಿಗೆಯನ್ನು ಕಲಿತೆ. ಬಳಿಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಡಿಪ್ಲೊಮಾ ಮಾಡಿದ್ದೇನೆ. ಈ ವೃತ್ತಿಯಲ್ಲಿ ಮುಂದುವರಿಯುವ ಬಗ್ಗೆ ನನಗೇ ಖಾತರಿ ಇಲ್ಲ’ ಎಂದರು.
ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್., ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ವಿಶ್ವೇಶ್ವರ ಭಟ್ ಮತ್ತಿತರರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಧನ್ಯವಾದ ಸಲ್ಲಿಸಿದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.